ತಿರುವನಂತಪುರಂ: ಕೇರಳದ ಕೋಟ್ಟಯಂ ಜಿಲ್ಲೆಯಲ್ಲಿ 1992ರಲ್ಲಿ ನಡೆದ ಕ್ರೈಸ್ತ ಸನ್ಯಾಸಿನಿ ಅಭಯಾ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಶಿಕ್ಷೆ ಪ್ರಕಟಿಸಿದೆ. ಪ್ರಕರಣದ ಅಪರಾಧಿ ಎಂದು ಸಾಬೀತಾಗಿರುವ ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿಗೆ ಜೀವಾವಧಿ ಶಿಕ್ಷೆ ವಿಧಿಸಲು ನ್ಯಾಯಾಲಯ ಆದೇಶ ನೀಡಿದೆ.
ಕೊಲೆ ಮತ್ತು ಅತಿಕ್ರಮಣ ಆರೋಪದಲ್ಲಿ ದೋಷಿ ಫಾ. ಥಾಮಸ್ ಕೊಟ್ಟೂರ್ಗೆ ₹6 ಲಕ್ಷ ದಂಡ ಮತ್ತು 2 ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಗಿದೆ. ಮೂರನೇ ಆರೋಪಿ ಸಿಸ್ಟರ್ ಸೆಫಿಗೆ ₹5 ಲಕ್ಷ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಇಬ್ಬರಿಗೂ 7 ವರ್ಷ ಶಿಕ್ಷೆ ಮತ್ತು ₹50,000 ದಂಡ ವಿಧಿಸಲಾಗಿದೆ. ದಂಡ ಪಾವತಿ ಮಾಡದೇ ಇದ್ದರೆ ಜೀವಾವಧಿ ಜೈಲು ಶಿಕ್ಷೆ ಜತೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಸಿಸ್ಟರ್ ಅಭಯಾ ಪ್ರಕರಣದಲ್ಲಿ ಇಬ್ಬರೂ ತಪ್ಪಿತಸ್ಥರು ಎಂದು ಮಂಗಳವಾರ ನ್ಯಾಯಾಲಯ ಹೇಳಿತ್ತು. 28 ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ಒತ್ತಾಯಿಸಿತ್ತು.
28 ವರ್ಷಗಳ ನಂತರ.. ಸನ್ಯಾಸಿನಿ ಸಿಸ್ಟರ್ ಅಭಯಾ ಸಾವಿಗೆ ದೊರಕಿತು ನ್ಯಾಯ