ಕೊಲ್ಕತ್ತಾದ ದುರ್ಗಾ ಪೂಜಾ ಕಾಲ್ತುಳಿತ ದುರಂತದ ತನಿಖೆಗೆ ಎಸ್‌ಐಟಿ ರಚನೆ; 3 ತಿಂಗಳಲ್ಲಿ ವರದಿ ಸಲ್ಲಿಕೆಗೆ ಸೂಚನೆ
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಪ್ರಸಿದ್ಧ ಚೋರ್‌ಬಾಗನ್ ದುರ್ಗಾ ಪೂಜಾ ಪಂಡಾಲ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 19 ಜನರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಈ ಘಟನೆಯ ಸಮಗ್ರ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರವು ಎಸ್‌ಐಟಿ ರಚಿಸಿದೆ. ಕೊಲ್ಕತ್ತಾದ ಉತ್ತರ ಭಾಗದ ಚೋರ್‌ಬಾಗನ್ ಸಾರ್ವಜನಿಕ ದುರ್ಗಾ ಪೂಜಾ ಪಂಡಾಲ್‌ನಲ್ಲಿ ಸಪ್ತಮಿಯ ದಿನ ಸಂಜೆ ಭಾರೀ ಮಳೆ ಹಾಗೂ ಜನದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಪಂಡಾಲ್‌ನ ನಿರ್ಗಮನ ದ್ವಾರದ ಬಳಿ ಮುಗಿಬಿದ್ದ ಜನರಿಂದ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 19 ಜನರು ಪ್ರಾಣ ಕಳೆದುಕೊಂಡಿದ್ದರು.

ಕೊಲ್ಕತ್ತಾ, ಅಕ್ಟೋಬರ್ 21: ಪಶ್ಚಿಮ ಬಂಗಾಳದ ಕೊಲ್ಕತ್ತಾದ ಪ್ರಸಿದ್ಧ ಚೋರ್‌ಬಾಗನ್ ಸಾರ್ವಜನಿಕ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಅಕ್ಟೋಬರ್ 17ರಂದು ಸಂಭವಿಸಿದ ಭೀಕರ ಕಾಲ್ತುಳಿತ ದುರಂತದ ಸಮಗ್ರ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ನಿವೃತ್ತ ನ್ಯಾಯಮೂರ್ತಿ ಅನಿಂದಿತಾ ರಾಯ್ ಸರಸ್ವತಿ ಅವರ ನೇತೃತ್ವದಲ್ಲಿ ಈ ಎಸ್‌ಐಟಿ ರಚಿಸಲಾಗಿದ್ದು, 3 ತಿಂಗಳಲ್ಲಿ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಅಕ್ಟೋಬರ್ 21ರಂದು ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಅಗರ್ವಾಲ್ ಹೊರಡಿಸಿದ ಆದೇಶದ ಪ್ರಕಾರ, ಕೊಲ್ಕತ್ತಾ ಹೈಕೋರ್ಟ್‌ನೊಂದಿಗೆ ಸಮಾಲೋಚಿಸಿ ಈ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಕಾಲ್ತುಳಿತಕ್ಕೆ ಕಾರಣವಾದ ಪರಿಸ್ಥಿತಿಗಳು, ಜನದಟ್ಟಣೆ ನಿರ್ವಹಣಾ ವ್ಯವಸ್ಥೆ, ಹವಾಮಾನ ವೈಪರೀತ್ಯ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆಡಳಿತಾತ್ಮಕ ಲೋಪಗಳ ಕುರಿತು ಈ ತಂಡವು ತನಿಖೆ ನಡೆಸಲಿದೆ.
ಇದನ್ನೂ ಓದಿ: ಕೊಲ್ಕತ್ತಾದ ದುರ್ಗಾ ಪೂಜೆ ಪೆಂಡಾಲ್ ಕಾಲ್ತುಳಿತ ದುರಂತ; ಇಂದು ಸಂಜೆ 7.40ಕ್ಕೆ ನಿಜಕ್ಕೂ ಆಗಿದ್ದೇನು?
ಪೂಜಾ ಸ್ಥಳದಲ್ಲಿ ಭದ್ರತೆ ಮತ್ತು ವ್ಯವಸ್ಥೆಗಳನ್ನು ಮಾಡಿದ್ದ ಪೊಲೀಸರು, ಮಹಾನಗರ ಪಾಲಿಕೆ, ಅಗ್ನಿಶಾಮಕ ದಳ ಮತ್ತು ಇತರ ಏಜೆನ್ಸಿಗಳ ಪಾತ್ರ ಹಾಗೂ ಜವಾಬ್ದಾರಿಯ ಬಗ್ಗೆಯೂ ಕಠಿಣ ತನಿಖೆ ನಡೆಯಲಿದೆ. ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಅಥವಾ ಸುರಕ್ಷತಾ ವ್ಯವಸ್ಥೆಗಳಲ್ಲಿ ಯಾವುದೇ ಲೋಪಗಳು ಅಥವಾ ಸಮನ್ವಯದ ಕೊರತೆ ಇತ್ತೇ ಎಂಬುದನ್ನು ತಂಡವು ಪರಿಶೀಲಿಸಲಿದೆ.
ಚೋರ್‌ಬಾಗನ್ ಪಂಡಾಲ್‌ನಲ್ಲಿ ನಡೆದಿದ್ದೇನು?:
ಉತ್ತರ ಕೊಲ್ಕತ್ತಾದ ಚೋರ್‌ಬಾಗನ್ ಸಾರ್ವಜನಿಕ ದುರ್ಗಾ ಪಂಡಾಲ್‌ನಲ್ಲಿ ದುರ್ಗಾ ಪೂಜಾ ಆಚರಣೆಯ ಸಂದರ್ಭದಲ್ಲಿ ಅಕ್ಟೋಬರ್ 17ರ ಸಂಜೆ ಕಾಲ್ತುಳಿತ ಸಂಭವಿಸಿತ್ತು. ವಿಪರೀತ ಮಳೆ ಹಾಗೂ ಪಂಡಾಲ್ ಹೊರಗೆ ಸೇರಿದ್ದ ಬೃಹತ್ ಜನದಟ್ಟಣೆಯ ನಡುವೆ ಈ ದುರ್ಘಟನೆ ನಡೆದಿತ್ತು. ಈ ದುರಂತದಲ್ಲಿ 19 ಜನರು ಪ್ರಾಣ ಕಳೆದುಕೊಂಡಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಿಸಲಾಗಿದೆ. ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
