
ಡೆಹ್ರಾಡೂನ್, ಜನವರಿ 29: ಉತ್ತರಾಖಂಡದಲ್ಲಿ ಹಿಮಪಾತದ (Snowfall) ಪರಿಣಾಮದಿಂದ ಅನೇಕ ಪ್ರವಾಸಿಗರು ಮಧ್ಯದಲ್ಲೇ ಸಿಲುಕಿಕೊಂಡಿದ್ದಾರೆ. ಚಮೋಲಿಯಲ್ಲಿ 77 ಗ್ರಾಮಗಳು ಹಿಮಪಾತದಿಂದ ತೊಂದರೆಗೆ ಸಿಲುಕಿವೆ, ರಸ್ತೆಗಳ ಸಂಪರ್ಕ ಸ್ಥಗಿತಗೊಂಡಿದೆ, ಪ್ರವಾಸಿಗರು ತಮ್ಮ ಊರನ್ನು ತಲುಪಿದರೆ ಸಾಕಪ್ಪ ಎಂದು ಚಡಪಡಿಸುತ್ತಿದ್ದಾರೆ. ಭಾರೀ ಹಿಮಪಾತವಾಗುತ್ತಿರುವುದರಿಂದ ಪ್ರವಾಸಿಗರು ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚಿಸಿದೆ.
ಕಳೆದ 4 ದಿನಗಳಿಂದ ಉತ್ತರಾಖಂಡದಲ್ಲಿ ಹವಾಮಾನ ಅಸ್ಥಿರವಾಗಿದ್ದು, ತಡರಾತ್ರಿಯ ಮಳೆ, ಆಲಿಕಲ್ಲು ಮಳೆ ಮತ್ತು ಭಾರೀ ಹಿಮಪಾತವು ಹಲವಾರು ಜಿಲ್ಲೆಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅವುಗಳಲ್ಲಿ ಚಮೋಲಿ ಅತ್ಯಂತ ಹೆಚ್ಚು ಪರಿಣಾಮ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಚಮೋಲಿಯ 77ಕ್ಕೂ ಹೆಚ್ಚು ಗ್ರಾಮಗಳು ಹಿಮದಿಂದ ಆವೃತವಾಗಿವೆ. ಜ್ಯೋತಿರ್ಮಠ-ಮಲಾರಿ ಹೆದ್ದಾರಿ ಸೇರಿದಂತೆ 7 ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಇದನ್ನೂ ಓದಿ: Video: ಜಮ್ಮು ಮತ್ತು ಕಾಶ್ಮೀರದ ರೆಸಾರ್ಟ್ ಮೇಲೆ ಭಾರಿ ಹಿಮಪಾತ
ಉತ್ತರಕಾಶಿ ಜಿಲ್ಲೆಯಲ್ಲಿಯೂ ಹಿಮಪಾತವಾಗಿದೆ. ಯಮುನೋತ್ರಿ, ಗಂಗೋತ್ರಿ, ಹರ್ಸಿಲ್, ಮುಖ್ಬಾ, ಸುಖಿ ಟಾಪ್, ರಾಡಿ ಟಾಪ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗಿದೆ. ಇಲ್ಲಿ ಅಪಘಾತಗಳನ್ನು ತಪ್ಪಿಸಲು ಸಣ್ಣ ವಾಹನಗಳನ್ನು ನಿಷೇಧಿಸಲಾಗಿದೆ.
#WATCH | Uttarakhand | White blanket of snow covers Chamoli landscape pic.twitter.com/R63oUR4y9b
— ANI (@ANI) January 28, 2026
ಅನಗತ್ಯ ಪ್ರಯಾಣಗಳನ್ನು ಕೈಗೊಳ್ಳದಂತೆ ಅಧಿಕಾರಿಗಳು ಸ್ಥಳೀಯರು ಮತ್ತು ಪ್ರಯಾಣಿಕರನ್ನು ಒತ್ತಾಯಿಸಿದ್ದಾರೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದರೆ ಮಾತ್ರ ಪರ್ವತಗಳಿಗೆ ಪ್ರಯಾಣಿಸಲು ಸೂಚಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ