ಉಗ್ರ ಸಂಘಟನೆ ಲಷ್ಕರ್ -ಎ-ತೊಯ್ಬಾ(lashkar-e-taiba) ನಿರ್ವಹಿಸುತ್ತಿರುವ Kashmir Fight ಎಂಬ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮತ್ತೊಮ್ಮೆ ಕಣಿವೆಯಲ್ಲಿ ಉದ್ಯೋಗದಲ್ಲಿರುವ ಕಾಶ್ಮೀರಿ ಪಂಡಿತರಿಗೆ (Kashmiri Pandits) ಬೆದರಿಕೆಗಳನ್ನೊಡ್ಡಿದೆ ಎಂದು ರಿಪಬ್ಲಿಕ್ ವರ್ಲ್ಡ್ ಡಾಟ್ ಕಾಮ್ ವರದಿ ಮಾಡಿದೆ. ಈ ಉಗ್ರ ಗುಂಪು ತಾವು ಗುರಿಯಾಗಿಸಿರುವ 56 ಕಾಶ್ಮೀರಿ ಪಂಡಿತ ಉದ್ಯೋಗಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಲಾಗುತ್ತದೆ ಎಂದು ಉಗ್ರರ ಗುಂಪು ಹೇಳಿವೆ.ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಾಶ್ಮೀರಿ ಪಂಡಿತರು ಭಯಭೀತರಾಗಿದ್ದು ಇಂಥಾ ಬೆದರಿಕೆ ಪತ್ರವು ಭಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಶ್ಮೀರ ಪಂಡಿತ್ ನೌಕರರು, 50 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೆಸರಿಸಲಾಗಿದೆ. ಅಧಿಕೃತ ದಾಖಲೆಗಳು ಭಯೋತ್ಪಾದಕ ಗುಂಪಿಗೆ ಹೇಗೆ ತಲುಪಿದವು ಎಂಬುದನ್ನು ವಿಚಾರಣೆ ಮಾಡಬೇಕಾಗಿದೆ ಎಂದು ಹೇಳಿದರು.
ಬೆದರಿಕೆ ಪತ್ರ ನಮ್ಮಲ್ಲಿ ಭಯದ ಭಾವನೆ ಮೂಡಿಸುತ್ತದೆ: ಕಾಶ್ಮೀರಿ ಪಂಡಿತರು
ಪಟ್ಟಿಯಲ್ಲಿ ಉದ್ಯೋಗಿಗಳ ಹೆಸರನ್ನು ನಮೂದಿಸಲಾಗಿದೆ. ಇದು ತುಂಬಾ ಆಘಾತಕಾರಿ ಸಂಗತಿ. ನಾವು ಈಗಾಗಲೇ ಕಣಿವೆಯಲ್ಲಿ ಭಯದಿಂದ ಬದುಕುತ್ತಿದ್ದೇವೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಮಿತಿ ರಚಿಸಬೇಕು. ಸುಮಾರು 7 ತಿಂಗಳಿನಿಂದ ಸ್ಥಳಾಂತರಕ್ಕೆ ಆಗ್ರಹಿಸುತ್ತಿದ್ದೇವೆ ಎಂದು ಕಾಶ್ಮೀರಿ ಪಂಡಿತರೊಬ್ಬರು ಹೇಳಿದ್ದಾರೆ. ನಮ್ಮ ಸಂಬಳ ತಡೆಹಿಡಿಯಲಾಗಿದೆ. ಇದೀಗ ಬೆದರಿಕೆ ಪತ್ರ ಹೊರಬಿದ್ದಿದೆ. ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಸೇರುವಂತೆ ನೌಕರರನ್ನು ಒತ್ತಾಯಿಸಬಾರದು. ಸ್ಥಳಾಂತರಕ್ಕೆ ಆಗ್ರಹಿಸುತ್ತೇವೆ. ನೌಕರರ ವರ್ಗಾವಣೆಯ ಅಧಿಕೃತ ಪತ್ರವು ಭಯೋತ್ಪಾದಕ ಗುಂಪಿಗೆ ಹೇಗೆ ತಲುಪಿತು ಎಂಬುದನ್ನು ತನಿಖೆ ಮಾಡಬೇಕು ಎಂದು ಮತ್ತೊಬ್ಬ ಕಾಶ್ಮೀರಿ ಪಂಡಿತರು ಹೇಳಿದ್ದಾರೆ.
ಅಂದಹಾಗೆ Kashmir Fight ಎಂಬ ವೆಬ್ ಸೈಟ್ನ್ನು ಭಾರತ ಸರ್ಕಾರವು ಈ ಹಿಂದೆ ನಿಷೇಧಿಸಿತ್ತು.ಈ ವೆಬ್ ಸೈಟ್ ಕೆಲವು ಪತ್ರಕರ್ತರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಭದ್ರತಾ ಪಡೆಗಳ ಮಾಹಿತಿದಾರರು ಎಂದು ಪ್ರಚಾರ ಮಾಡುತ್ತಿದ್ದಾರೆ.ಈ ಬಗ್ಗೆ ಶ್ರೀನಗರ ಪೊಲೀಸ್ ಠಾಣೆಯಿಂದ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಯಿತು. ಈ ವೆಬ್‌ಸೈಟ್ ಕಾಶ್ಮೀರ ಕಣಿವೆಯಲ್ಲಿ ವಾಸಿಸುವವರನ್ನು ಗುರಿಯಾಗಿಸಲು ಮತ್ತು ಮಾನಹಾನಿ ಮಾಡಲು ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Sun, 4 December 22