ಬಿಹಾರದಲ್ಲಿ ಮನೆ ನೆಲಸಮ ಮಾಡಲು ಬುಲ್ಡೋಜರ್ ಬಳಸಿದ ಪೊಲೀಸರಿಗೆ ಹೈಕೋರ್ಟ್ ತರಾಟೆ
ಭೂಮಾಫಿಯಾದ ನಿದರ್ಶನದಲ್ಲಿ ಜಮೀನು ತೆರವು ಮಾಡುವಂತೆ ಒತ್ತಾಯಿಸಲು ಆಕೆಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ, ನ್ಯಾಯಾಧೀಶರು ಅರ್ಜಿದಾರರ ರಕ್ಷಣೆಗೆ ನಾನು ಇದ್ದೇನೆ ಎಂದು ಹೇಳಿದರು.
ಪಾಟ್ನಾ: ಬುಲ್ಡೋಜರ್‌ಗಳಿಂದ (bulldozers) ಮನೆಗಳನ್ನು ಕೆಡವುವುದು ತಮಾಷೆ ಅಥವಾ ಸಾರ್ವಜನಿಕ ಪ್ರದರ್ಶನವೇ ಎಂದು ಪಾಟ್ನಾ ಹೈಕೋರ್ಟ್ (Patna High Court) ಕೇಳಿದೆ. ಭೂಮಾಫಿಯಾ ಆರೋಪದಲ್ಲಿ ಮಹಿಳೆಯ ಮನೆಯನ್ನು ಧ್ವಂಸ ಮಾಡಿದ್ದಕ್ಕಾಗಿ ಬಿಹಾರ ಪೊಲೀಸರನ್ನು (Bihar Police) ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.”ಕ್ಯಾ ಯಹಾನ್ ಭಿ ಬುಲ್ಡೋಜರ್ ಚಲ್ನೆ ಲಗಾ? (ಇಲ್ಲಿಯೂ ಬುಲ್ಡೋಜರ್ ಕಾರ್ಯಾಚರಣೆ ಪ್ರಾರಂಭಿಸಿದೆಯೇ?) ನೀವು ಯಾರನ್ನು ಪ್ರತಿನಿಧಿಸುತ್ತೀರಿ, ರಾಜ್ಯ ಅಥವಾ ಕೆಲವು ಖಾಸಗಿ ವ್ಯಕ್ತಿ? ಯಾರಾದಾದ್ದರೂ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವಿದ್ದು ತಮಾಷೆಯೇ? ಎಂದು ನ್ಯಾಯಮೂರ್ತಿ ಸಂದೀಪ್ ಕುಮಾರ್ ಹೇಳಿದ್ದಾರೆ. ಮನೆಯನ್ನು ಅಕ್ರಮವಾಗಿ ನೆಲಸಮಗೊಳಿಸಿರುವುದು ಕಂಡು ಬಂದಲ್ಲಿ ಪ್ರತಿಯೊಬ್ಬ ಅಧಿಕಾರಿಯ ಜೇಬಿನಿಂದ ಅರ್ಜಿದಾರರಿಗೆ ₹ 5 ಲಕ್ಷ ಪಾವತಿ ಆಗುವಂತೆ ಮಾಡಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.ಮನೆ ಕೆಡವಿದರೆ ಅಧಠಿಕಾರಿಗಳ ಜೇಬಿನಿಂದಲೇ 5 ಲಕ್ಷ ಹಣ ವಸೂಲಿ ಮಾಡಿಸುತ್ತೇವೆ. ಈಗ ಪೊಲೀಸರು ಮತ್ತು ಸಿಒ ಜತೆ ಸೇರಿ ಬುಲ್ಡೋಜರ್ ಬಳಸಿ ಮನೆ ಕೆಡವುತ್ತಿದ್ದಾರೆ. ಇದನ್ನು ನಿಲ್ಲಿಸಲೇಬೇಕು ಎಂದು ನ್ಯಾಯಮೂರ್ತಿ ಕುಮಾರ್ ಹೇಳಿದ್ದಾರೆ. ಅದೇ ವೇಳೆ ಗುರುವಾರ ನಡೆಯಲಿರುವ ಮುಂದಿನ ವಿಚಾರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಖುದ್ದಾಗಿ ಹಾಜರಾಗುವಂತೆ ನ್ಯಾಯಮೂರ್ತಿ ಕುಮಾರ್ ಹೇಳಿದ್ದಾರೆ.
ಈ ಪ್ರಕರಣವನ್ನು ನವೆಂಬರ್ 24 ರಂದು ವಿಚಾರಣೆ ನಡೆಸಲಾಯಿತು, ಆದರೆ ಶನಿವಾರದಂದು ಪ್ರಕ್ರಿಯೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.ಪ್ರಕರಣದ ಪೊಲೀಸ್ ವರದಿಯನ್ನು ಅಧ್ಯಯನ ಮಾಡಿದ ನ್ಯಾಯಾಲಯ, ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ರಾಜ್ಯ ಪೊಲೀಸರು ಕಾನೂನುಬಾಹಿರವಾಗಿ ಮನೆಯನ್ನು ಕೆಡವಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಧಿಕಾರಿಗಳು ಕೆಲವು ಭೂ ಮಾಫಿಯಾಗಳೊಂದಿಗೆ “ಕೈ” ಜೋಡಿಸಿದಂತೆ ತೋರುತ್ತಿದ್ದಾರೆ ಎಂದು ನ್ಯಾಯಾಧೀಶರು ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ಭೂಮಾಫಿಯಾದ ನಿದರ್ಶನದಲ್ಲಿ ಜಮೀನು ತೆರವು ಮಾಡುವಂತೆ ಒತ್ತಾಯಿಸಲು ಆಕೆಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ, ನ್ಯಾಯಾಧೀಶರು ಅರ್ಜಿದಾರರ ರಕ್ಷಣೆಗೆ ನಾನು ಇದ್ದೇನೆ ಎಂದು ಹೇಳಿದರು.
“ನಾನು ನಿಮ್ಮನ್ನು ರಕ್ಷಿಸಲು ಇಲ್ಲಿದ್ದೇನೆ, ನಿಮಗೆ ತೊಂದರೆ ನೀಡುವುದಿಲ್ಲ” ಎಂದು ನ್ಯಾಯಮೂರ್ತಿ ಕುಮಾರ್ ಹೇಳಿದರು. ಇದೀಗ ಎಫ್‌ಐಆರ್ ಅನ್ನು ತಡೆಹಿಡಿಯಲಾಗಿದ್ದು ಪ್ರಕರಣದಲ್ಲಿ ಅರ್ಜಿದಾರರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಬಂಧಿಸದಂತೆ ಪೊಲೀಸರನ್ನು ನಿರ್ಬಂಧಿಸಿದ್ದಾರೆ. ಅಪರಾಧದ ಶಂಕಿತರನ್ನು ಗುರಿಯಾಗಿಸಲು ಬುಲ್ಡೋಜರ್‌ಗಳನ್ನು ಬಳಸುವುದು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಪ್ರವೃತ್ತಿಯಾಗಿದೆ. ಅಲ್ಲಿ ಅಧಿಕಾರಿಗಳು ಅಕ್ರಮ ಆಸ್ತಿಯನ್ನು ಕೆಡವಲು ಬುಲ್ಡೋಜರ್ ಬಳಸಿದ್ದಾರೆ. ಇದಾದ ನಂತರ ಬಿಜೆಪಿ ಅಧಿಕಾರದಲ್ಲಿರಕುವ ರಾಜ್ಯಗಳು ಬುಲ್ಡೋಜರ್ ಬಳಸಿ ನೆಲಸಮ ಮಾಡುವ ಕಾರ್ಯವನ್ನು ಮಾಡಿದ್ದವು. ಬುಲ್ಡೋಜರ್ ಬಳಕೆ ಮಾಡುವ ರಾಜ್ಯಗಳ ಕ್ರಮಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Sun, 4 December 22