ಕಾರವಾರದ ಶಿರವಾಡವನ್ನು ಮಿನಿ ಬಿಹಾರ್ ಮಾಡಿಕೊಂಡ ಹೊರ ರಾಜ್ಯದ ಕಾರ್ಮಿಕರು, ಹೆಣ್ಮಕ್ಳ ಜತೆ ಅಸಭ್ಯ ವರ್ತನೆ: ಸ್ಥಳೀಯರಿಂದ ಆರೋಪ
ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರನ್ನು ಅನಧಿಕೃತವಾಗಿ ರೆಸಾರ್ಟ್ನಲ್ಲಿ ಇರಿಸಲಾಗಿದ್ದು, ಸುತ್ತಮುತ್ತಲಿನ ಜನರು ಅದರಲ್ಲೂ ಮಹಿಳೆಯರು ರಾತ್ರಿಯಾದರೆ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಉತ್ತರ ಕನ್ನಡ: ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಕದಂಬ ನೌಕಾನಲೆ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಗುತ್ತಿಗೆ ಪಡೆದ ಐಟಿಡಿಸಿ ಎನ್ನುವ ಕಂಪನಿಯು ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರನ್ನು ಉಳಿಸಲಾಗಿದೆ. ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ರೆಸಾರ್ಟ್ನಲ್ಲಿ ರೆಸಾರ್ಟಿನ ಬೋರ್ಡನ್ನು ತೆಗೆದು ಕಂಪನಿಯ ಬೋರ್ಡನ್ನು ಹಾಕಿ ಉಳಿಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಳೆದ ಒಂದು ವರ್ಷದಿಂದ ರೆಸಾರ್ಟ್ ಸುತ್ತಮುತ್ತ ಮಿನಿ ಬಿಹಾರ ಆದಂತಾಗಿದ್ದು, ಸಂಜೆ ಸಮಯವಾದರೆ ಸುತ್ತಮುತ್ತಲಿನ ಮನೆಯವರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಮುಗಿಸಿಕೊಂಡು ಬರುವ ಕಾರ್ಮಿಕರು ಸುತ್ತಮುತ್ತಲಿನ ಮನೆಗಳ ಹೆಣ್ಣು ಮಕ್ಕಳು ಓಡಾಡುವಾಗ ಅಸಭ್ಯ ವರ್ತನೆ ತೋರುವ ಘಟನೆಗಳು ನಡೆದಿದ್ದು ಸ್ಥಳೀಯರು ಈ ಅವ್ಯವಸ್ಥೆ ವಿರುದ್ದ ಕಿಡಿಕಾರುತ್ತಿದ್ದಾರೆ.
ಇನ್ನು ರೆಸಾರ್ಟ್ ಇರುವ ಶಿರವಾಡ ಭಾಗದ ಕೆಲ ಮನೆಗಳಿಗೆ ಇಂದಿಗೂ ಶೌಚಾಲಯಗಳಿಲ್ಲ. ಬಹಿರ್ದಸೆಗೆ ಕಾಡಿಗೆ ಹೋಗುತ್ತಾರೆ. ಶೌಚಾಲಯಕ್ಕೆ ಮಹಿಳೆಯರು ತೆರಳಿದ ಸಂಧರ್ಭದಲ್ಲಿ ಇದೇ ಹೊರ ರಾಜ್ಯದ ಕಾರ್ಮಿಕರು ಫೋಟೋ ಹೊಡೆದಿದ್ದಾರೆ ಎನ್ನುವ ಆರೋಪ ಕೆಲ ತಿಂಗಳ ಹಿಂದೆ ಕೇಳಿ ಬಂದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲನ್ನು ಸಹ ಏರಿತ್ತು, ಬಳಿಕ ಕಾರ್ಮಿಕರಿಗೆ ಪೊಲೀಸರು ವಾರ್ನಿಂಗ್ ಸಹ ಮಾಡಿದ್ದರು ಎನ್ನಲಾಗಿದೆ. ಆದರೂ ಹೊರ ರಾಜ್ಯದ ಕಾರ್ಮಿಕರು ತಮ್ಮ ಅಸಭ್ಯ ವರ್ತನೆಗಳನ್ನು ಮುಂದುವರೆಸಿದ್ದಾರೆ ಎನ್ನಲಾಗಿದ್ದು, ಇದು ಸ್ಥಳೀಯರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದೆ. ರೆಸಾರ್ಟ್ನಲ್ಲಿ ಪ್ರವಾಸೋದ್ಯಮ ಬದಲು ಕಾರ್ಮಿಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ಮಾಲಿಕರು ಸ್ಥಳೀಯ ಪಂಚಾಯತಿಯನ್ನಾಗಲಿ, ತಾಲೂಕು ಆಡಳಿತದಲ್ಲಾಗಲಿ ಅನುಮತಿ ಪಡೆಯದೇ ಹೇಗೆ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ಪ್ರಶ್ನೆಯನ್ನು ಸ್ಥಳೀಯರು ಕೇಳುತ್ತಿದ್ದಾರೆ.
ಇದನ್ನೂ ಓದಿ:ಕಾರವಾರದ ಮೀನುಗಾರರಿಗೆ ಮತ್ಸ್ಯ ಸಂಪದ ಯೋಜನೆಯಡಿ ಲಾಂಗ್ ಲೈನರ್ ಫಿಶಿಂಗ್ ತರಬೇತಿ
ಇನ್ನು ಈ ಬಗ್ಗೆ ಸ್ಥಳೀಯ ಶಾಸಕರ ಬಳಿ ಕೇಳಿದರೆ ಈಗಾಗಲೇ ಸಮಸ್ಯೆ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮೇಲಾಗಿ ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ. ಕೊರೊನಾ ಸಂದರ್ಭದಲ್ಲಿ ರೆಸಾಟ್ರ್ನಲ್ಲಿ ವ್ಯವಹಾರ ಇಲ್ಲದ ಕಾರಣ ರೆಸಾರ್ಟ್ ಮಾಲಿಕರು ಕಾರ್ಮಿಕರು ಉಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವುದು ಶಾಸಕರ ಅಭಿಪ್ರಾಯ. ಹೊರ ರಾಜ್ಯದ ನೂರಾರು ಕಾರ್ಮಿಕರನ್ನು ತಂದು ಹಳ್ಳಿಯೊಂದರಲ್ಲಿ ಇಟ್ಟರೇ ಜನರು ಹೇಗೆ ಇರಬೇಕು ಎನ್ನುವುದು ಸ್ಥಳೀಯರ ಆಗ್ರಹ. ಒಟ್ಟಿನಲ್ಲಿ ಪ್ರವಾಸಿಗರ ಬಳಕೆಗೆಂದು ಪ್ರಾರಂಭಿಸಿದ ರೆಸಾರ್ಟ್ನಲ್ಲಿ ಐನೂರಕ್ಕೂ ಅಧಿಕ ಕಾರ್ಮಿಕರನ್ನು ಉಳಿಯಲು ಅವಕಾಶ ಮಾಡಿಕೊಟ್ಟಿದ್ದು ಮೇಲ್ನೋಟಕ್ಕೆ ಇದು ಅನಧಿಕೃತ ಎನ್ನುವುದು ಕಾಣುತ್ತಿದ್ದು ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ