ಕಾರವಾರದ ಮೀನುಗಾರರಿಗೆ ಮತ್ಸ್ಯ ಸಂಪದ ಯೋಜನೆಯಡಿ ಲಾಂಗ್ ಲೈನರ್ ಫಿಶಿಂಗ್ ತರಬೇತಿ
ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಮತ್ಸ್ಯೋದ್ದಮವನ್ನು ಆಧುನಿಕರಣಗೊಳಿಸಲು ಇದೀಗ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಯೋಜನೆಯಡಿ ಲಾಂಗ್ ಲೈನರ್ ಫಿಶಿಂಗ್ಗೆ ಮೀನುಗಾರರನ್ನು ಪ್ರೋತ್ಸಾಹಿಸುತ್ತಿದೆ.
ಉತ್ತರ ಕನ್ನಡ: ಮೀನುಗಾರಿಕೆ ಇದೀಗ ದೇಶದಲ್ಲಿ ಪ್ರಮುಖ ಉದ್ಯಮಗಳಲ್ಲಿ ಒಂದು. ಈ ಹಿಂದೆ ವಿವಿಧ ಬಗೆಯಲ್ಲಿ ಮೀನುಗಾರಿಕೆಯನ್ನು ಕೈಗೊಳ್ಳಲಾಗುತ್ತಿದ್ದರೂ ಉತ್ಪನ್ನ ಮಾತ್ರ ಅಷ್ಟಕಷ್ಟೆ ಆಗಿರುತಿತ್ತು. ಆದರೆ ಇದೀಗ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಮೀನುಗಾರಿಕೆ(fishing) ನಡೆಸುವ ಕಾರಣ ಮೀನಿನ ಉತ್ಪನ್ನ ಹೆಚ್ಚಳವಾಗಲು ಸಾಧ್ಯವಿದೆ. ಇದರಿಂದ ದೇಶದ ಆದಾಯಕ್ಕೂ ಸಹಕಾರಿಯಾಗಿದೆ. ಈ ಕಾರಣದಿಂದಾಗಿ ಮೀನುಗಾರಿಕೆಯ ಬಗೆಗೆ ಮೀನುಗಾರರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಭಾರತ ಮೀನುಗಾರಿಕಾ ಸರ್ವೇಕ್ಷಣಾ ಸಂಸ್ಥೆ ಕಾರವಾರದ ವಾಣಿಜ್ಯ ಬಂದರಿನಲ್ಲಿ ಬೋಟ್ ಮೇಲೆ ಮೀನು ಹಾಗೂ ಅದರ ಉಪಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಮೀನುಗಾರಿಕೆ , ಲಾಂಗ್ ಲೈನರ್ ಮೀನುಗಾರಿಕೆ ಹಾಗೂ ಮೀನುಗಾರಿಕೆ ವೇಳೆ ಬಳಸುವ ಬಲೆ, ದಾರಗಳ ಬಗ್ಗೆ ಮಾಹಿತಿ ಒದಗಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ಹೇಗೆ ನಡೆಸುತ್ತಾರೆ. ತುರ್ತು ಸಂದರ್ಭದಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಲಾಗುತ್ತದೆ. ಜಲ ಮಾಲಿನ್ಯ ತಡೆಯುವುದು ಹೇಗೆ ಎಂದು ಮಾಹಿತಿ ಒದಗಿಸಲಾಯಿತು. ಇನ್ನು ಮೀನುಗಾರರನ್ನು ಲಾಂಗ್ ಲೈನರ್ ಮೀನುಗಾರಿಕೆಗೆ ಪೊತ್ಸಾಹಿಸುವ ನಿಟ್ಟಿನಲ್ಲಿ ಪ್ರದರ್ಶನಕ್ಕೆ ಆಗಮಿಸಿದ ಮೀನುಗಾರರಿಗೆ ಅಗತ್ಯ ಮಾಹಿತಿ ಒದಗಿಸಲಾಯಿತು.
ಮತ್ಸ್ಯ ಸಂಪದ ಯೋಜನೆ ಮೂಲಕ ಬೋಟ್ ಖರೀದಿಗೆ ಸಬ್ಸಿಡಿ ಸಿಗಲಿದ್ದು ನೂರಾರು ಮೈಲು ದೂರ ತೆರಳಿ ಮೀನುಗಾರಿಕೆ ನಡೆಸುವುದರಿಂದ ಬೃಹತ್ ಗಾತ್ರದ ಮೀನುಗಳನ್ನು ಹಿಡಿಯಲು ಸಾಧ್ಯವಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ ಮೀನುಗಾರಿಕೆ ಮಾಡಲು ಅಗತ್ಯವಿರುವ ಸಲಕರಣೆಗಳು ಕರ್ಚು ವೆಚ್ಚ ಹಾಗೂ ಲಾಭದ ಬಗ್ಗೆ ಮಾಹಿತಿ ಒದಗಿಸಲಾಯಿತು.
ಪ್ರದರ್ಶನ ವೀಕ್ಷಿಸಿದ ಮೀನುಗಾರರು ಮಾತನಾಡಿ ಉಡುಪಿ ಮಂಗಳೂರು ಭಾಗದಲ್ಲಿ ಈ ರಿತಿ ಮೀನುಗಾರಿಕೆ ನಡೆಸಲಾಗುತ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಬಹುತೇಕ ಮೀನುಗಾರರು ಸಣ್ಣ ಪ್ರಮಾಣದಲ್ಲಿ ಮಾತ್ರ ಮೀನುಗಾರಿಕೆ ಮಾಡುವ ಕಾರಣ ಈ ಬಗ್ಗೆ ಅಷ್ಟು ಅರಿವಿಲ್ಲ. ಅಲ್ಲದೆ ಬೋಟ್ನಲ್ಲಿ ಕ್ಯಾಪ್ಟನ್ ಇರಬೇಕು. ನೂರಾರು ಮೈಲು ದೂರ ತೆರಳುವ ಕಾರಣ ತಿಂಗಳುಗಳ ಕಾಲ ಹೊರಗುಳಿಯುವಷ್ಟು ಆಹಾರ ಹಾಗೂ ಕಾರ್ಮಿಕರು ಇರಬೇಕಾಗುತ್ತದೆ. ಅಲ್ಲದೆ ಇಷ್ಟೊಂದು ಬಂಡವಾಳ ಹಾಕಿದ ಬಳಿಕ ಆಳ ಸಮುದ್ರದಲ್ಲಿ ಮೀನು ಸಿಗುತ್ತದೆ ಎಂಬ ಅನುಭವ ಕೂಡ ಇಲ್ಲದ ಕಾರಣ ಇಲ್ಲಿನ ಮೀನುಗಾರರಿಗೆ ಈ ಮೀನುಗಾರಿಕೆ ಕಷ್ಟವಾಗಲಿದೆ. ಆದರೆ ಈ ಬಗ್ಗೆ ಇಲಾಖೆ ಅಗತ್ಯ ಸಹಕಾರದ ಜೊತೆಗೆ ತರಬೇತಿ ನೀಡಿದಲ್ಲಿ ಮಾತ್ರ ಸಾಧ್ಯವಾಗಬಹುದು ಎನ್ನುತ್ತಾರೆ.
ಇದನ್ನೂ ಓದಿ:ಕಾರವಾರ: ಜನರ ಎಚ್ಚರಿಕೆ ಕಡೆಗಣಿಸಿ ಈಜಲು ಕಾಳಿ ನದಿಗಿಳಿದವನನ್ನು ನರಭಕ್ಷಕ ಮೊಸಳೆ ನೀರಿನಾಳಕ್ಕೆ ಎಳೆದೊಯ್ಯಿತು!
ಒಟ್ಟಾರೆ ಸರ್ಕಾರ ಮೀನುಗಾರಿಕೆಯಲ್ಲಿ ಅತ್ಯಾಧುನಿಕ ಉಪಕರಣ ಬಳಸಿ ಮೀನಿನ ಉತ್ಪನ್ನ ಹೆಚ್ಚಳಕ್ಕೆ ಮುಂದಾಗಿದೆಯಾದರೂ ದೊಡ್ಡ ಮಟ್ಟದ ಬಂಡವಾಳ ಹಾಕುವುದಕ್ಕೆ ಮೀನುಗಾರರು ಹಿಂಜರಿಯುವಂತಾಗಿದೆ. ಸರ್ಕಾರ ಈ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಿ ಅಗತ್ಯ ಸಹಕಾರ ನೀಡುವ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:23 am, Wed, 23 November 22