ಇಳಯರಾಜ ಆಯ್ತು ಈಗ ಅವರ ಪುತ್ರನ ಸರದಿ; ಇನ್ಸ್ಟಾ ಪೋಸ್ಟ್ ಹಾಕಿದ್ದೇ ಚರ್ಚೆಗೆ ಕಾರಣವಾಯ್ತು !
ಹಾಗೇ ಹೇಳಲು ಹೋದರೆ ನಾನು ಕಾಡಿನಲ್ಲಿರುವ ಕಾಗೆಯಷ್ಟು ಕಪ್ಪಾಗಿದ್ದೇನೆ. ಅಂದರೆ ನಾನು ಪಕ್ಕಾ ದ್ರಾವಿಡ ಎಂದು ಹೇಳಿಕೊಳ್ಳಬೇಕೇ ಎಂದು ಕೆ.ಅಣ್ಣಾಮಲೈ ಪ್ರಶ್ನಿಸಿದ್ದಾರೆ.
ಸಂಗೀತ ನಿರ್ದೇಶಕ ಇಳಯರಾಜ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಕ್ಕಾಪಟೆ ಹೊಗಳಿ, ಬಳಿಕ ಅವರನ್ನು ಡಾ. ಬಿ.ಆರ್.ಅಂಬೇಡ್ಕರ್ಗೆ ಹೋಲಿಕೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಇಳಯರಾಜರನ್ನು ವಿವಿಧ ರಾಜಕೀಯ ಮುಖಂಡರಷ್ಟೇ ಅಲ್ಲ, ಸಾಮಾನ್ಯ ಜನರೂ ಟೀಕೆ ಮಾಡುತ್ತಿದ್ದಾರೆ. ಈ ವಿವಾದದ ಬಿಸಿಯೇ ಇನ್ನೂ ಆರಿಲ್ಲ, ಹೀಗಿರುವಾಗ ಇಳಯರಾಜ ಪುತ್ರ ಯುವಾನ್ ಶಂಕರ್ ರಾಜ್ ಹಾಕಿದ ಇನ್ಸ್ಟಾಗ್ರಾಂ ಪೋಸ್ಟ್ವೊಂದು ಚರ್ಚೆ ಹುಟ್ಟುಹಾಕಿದೆ. ಅಂದಹಾಗೇ, ಯುವಾನ್ ತಾವು ಲುಂಗಿಯುಟ್ಟು, ಕಪ್ಪು ಟೀ ಶರ್ಟ್ ಧರಿಸಿ ನಿಂತಿರುವ ಫೋಟೋ ಪೋಸ್ಟ್ ಮಾಡಿಕೊಂಡು, ಕಪ್ಪು ದ್ರಾವಿಡಿಯನ್..ಹೆಮ್ಮೆಯ ತಮಿಳಿಗ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಇದಕ್ಕೀಗ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಪ್ರತಿಕ್ರಿಯೆ ನೀಡಿ, ಯುವಾನ್ ಕಪ್ಪಾಗಿದ್ದಿದ್ದಕ್ಕೆ ತನ್ನನ್ನು ತಾನು ದ್ರಾವಿಡ ಎಂದು ಹೇಳಿಕೊಳ್ಳುತ್ತಿದ್ದಾನೆ. ಹಾಗೇ ಹೇಳಲು ಹೋದರೆ ನಾನು ಕಾಡಿನಲ್ಲಿರುವ ಕಾಗೆಯಷ್ಟು ಕಪ್ಪಾಗಿದ್ದೇನೆ. ಅಂದರೆ ನಾನು ಪಕ್ಕಾ ದ್ರಾವಿಡ ಎಂದು ಹೇಳಿಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾರೆ. ನಾಮ್ ತಮಿಜರ್ ಕಚ್ಚಿ ನಾಯಕ ಸೀಮಾನ್ ಪ್ರತಿಕ್ರಿಯೆ ನೀಡಿ, ಯುವಾನ್ ತಾನು ಕಪ್ಪಾಗಿರುವುದಕ್ಕೆ ದ್ರಾವಿಡಿಯನ್ ಎಂದು ಹೇಳುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಪ್ರತಿಯೊಬ್ಬರೂ ಕಪ್ಪಾಗಿರುತ್ತಾರೆ. ಹಾಗಂತ ಅವರೆಲ್ಲರೂ ದ್ರಾವಿಡರೇ? ಕೋಣವೂ ಕಪ್ಪಾಗಿರುತ್ತದೆ, ಹಾಗಂದ ಮಾತ್ರಕ್ಕೆ ಅದು ದ್ರಾವಿಡ ಎನ್ನಲಾಗುತ್ತದೆಯೇ? ಎಂದು ವ್ಯಂಗ್ಯವಾಡಿದ್ದಾರೆ.
ಇಳಯರಾಜ ವಿವಾದವೇನು?
ಖ್ಯಾತ ಸಂಗೀತ ನಿರ್ದೇಶಕ ಸದ್ಯ ಸುದ್ದಿಯಲ್ಲಿದ್ದಾರೆ. ಅಂಬೇಡ್ಕರ್ ಮತ್ತು ಮೋದಿ ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದ ಇಳಯರಾಜ, ಇದೀಗ ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ಆಡಳಿತವನ್ನು ನೋಡಿದ್ದರೆ ಅಂಬೇಡ್ಕರ್ ನಿಜಕ್ಕೂ ಖುಷಿಪಡುತ್ತಿದ್ದರು. ಅಂಬೇಡ್ಕರ್ ಮತ್ತು ಪ್ರಧಾನಿ ಮೋದಿ ಮಧ್ಯೆ ಸಾಕಷ್ಟು ಸಾಮ್ಯತೆಗಳಿವೆ. ಇವರಿಬ್ಬರೂ ಬಡತನ ಮತ್ತು ಶೋಷಣೆಯನ್ನು ಎದುರಿಸಿಯೇ ಬೆಳೆದವರು ಎಂದು ಬರೆದಿದ್ದಾರೆ. ಈ ಪುಸ್ತಕ ಏಪ್ರಿಲ್ 14ರಂದು ಬಿಡುಗಡೆಯಾದಾಗಿನಿಂದ ಮುನ್ನುಡಿ ವಿವಾದ ಸೃಷ್ಟಿಸಿದೆ. ಇದಕ್ಕೆ ಪರ-ವಿರೋಧ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಬಿಜೆಪಿ ಮುಖಂಡರು ಇಳಯರಾಜ ಪರ ನಿಂತಿದ್ದರೆ, ಕಾಂಗ್ರೆಸ್ ಸೇರಿ ಹಲವು ರಾಜಕೀಯ ಪಕ್ಷಗಳವರು ವ್ಯಂಗ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: Gold-Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಏಪ್ರಿಲ್ 19ರ ಚಿನ್ನ, ಬೆಳ್ಳಿ ದರ ಇಲ್ಲಿದೆ
Published On - 8:17 pm, Tue, 19 April 22