ಪ್ರಧಾನಿ ನರೇಂದ್ರ ಮೋದಿಯವರದ್ದು ಸರ್ವಾಧಿಕಾರಿ ಧೋರಣೆ ಎಂದು ಸದಾ ಆರೋಪ ಮಾಡುತ್ತ ಬಂದಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈಗೊಂದು ಟ್ವೀಟ್ ಮಾಡಿದ್ದಾರೆ. ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ಇಷ್ಟು ದಿನ ನೇರಾನೇರವಾಗಿ ಆರೋಪ ಮಾಡುತ್ತಿದ್ದ ರಾಹುಲ್ ಗಾಂಧಿ ಇದೀಗ ಪರೋಕ್ಷವಾಗಿ ಏನನ್ನೋ ಹೇಳಲು ಹೊರಟಂತಿದೆ. ಈ ಟ್ವೀಟ್ ಮಾಡುತ್ತಿದ್ದಂತೆ ಯಥಾ ಪ್ರಕಾರ ನೆಟ್ಟಿಗರು ಮತ್ತೆ ಅವರ ಕಾಲೆಳೆದಿದ್ದಾರೆ.. ‘ಈಗಲೂ ನಿಮ್ಮ ಟಾರ್ಗೆಟ್ ಮಿಸ್ ಆಯ್ತಲ್ಲ !’ ಎಂದೂ ಛೇಡಿಸಿದ್ದಾರೆ.
ಅದ್ಯಾಕೆ ಬಹುತೇಕ ಸರ್ವಾಧಿಕಾರಿಗಳ ಹೆಸರು M ಅಕ್ಷರದಿಂದ ಪ್ರಾರಂಭವಾಗುತ್ತದೆ? ಎಂದು ಟ್ವಿಟರ್ನಲ್ಲಿ ಪ್ರಶ್ನೆ ಮಾಡಿರುವ ರಾಹುಲ್ ಗಾಂಧಿ, ಏಳು ಮಂದಿಯ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಸರ್ವಾಧಿಕಾರಿಗಳು ಎನಿಸಿಕೊಂಡ ಮಾರ್ಕೋಸ್, ಮುಸ್ಸೋಲಿನಿ, ಮಿಲೋಸೆವಿಕ್, ಮುಬಾರಕ್, ಮೊಬುಟು, ಮುಷರಫ್, ಮೈಕೊಂಬೆರೋ ಹೆಸರನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲಿಗೆ ಅವರ ಆಶಯ ಏನೆಂಬುದು ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತಿದೆ.
Why do so many dictators have names that begin with M ?
Marcos
Mussolini
Milošević
Mubarak
Mobutu
Musharraf
Micombero— Rahul Gandhi (@RahulGandhi) February 3, 2021
ಆದರೆ ನೆಟ್ಟಿಗರು ಮಾತ್ರ ಇಲ್ಲೂ ರಾಹುಲ್ ಗಾಂಧಿಯವರನ್ನು ಬಿಟ್ಟಿಲ್ಲ. ನೀವು ಮೋದಿಯವರ ಹೆಸರನ್ನು ಹೇಳಲೆಂದೇ ಪ್ರಯತ್ನಿಸುತ್ತಿದ್ದೀರಿ ಎಂಬುದು ನಮಗೆ ಗೊತ್ತು. ಆದರೆ ಅವರ ಹೆಸರು NARENDRA ಎಂದು. ಮತ್ತೊಮ್ಮೆ ನಿಮ್ಮ ಟಾರ್ಗೆಟ್ ತಪ್ಪಿ ಹೋಯಿತಲ್ಲ ಎಂದಿದ್ದಾರೆ. ಇದೇ ಹೊತ್ತಲ್ಲಿ ಗಾಂಧೀಜಿಯವರ ಹೆಸರನ್ನೂ ಎತ್ತಿದ್ದ ಒಬ್ಬರು, ಗೋಲ್ಡನ್ ಆಲೂಗಡ್ಡೇ ಕೃಷಿಕರೇ, ಸ್ವಲ್ಪ ಯೋಚಿಸಿ, ಮೋಹನದಾಸ ಕರಮಚಂದ ಗಾಂಧಿಯವರ ಹೆಸರು ಪ್ರಾರಂಭ ಆಗುವುದೂ M ಅಕ್ಷರದಿಂದಲೇ, ಅವರೇನು ಸರ್ವಾಧಿಕಾರಿಯಾಗಿದ್ದರಾ ಎಂದೂ ಪ್ರಶ್ನಿಸಿದ್ದಾರೆ.
ಮನಮೋಹನ್ ಸಿಂಗ್ ಏನಾಗಿದ್ದರು?
M ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಬಹುತೇಕರು ಸರ್ವಾಧಿಕಾರಿಗಳೇ ಯಾಕಾಗಿರುತ್ತಾರೆ ಎಂಬ ರಾಹುಲ್ ಗಾಂಧಿಯವರ ಪ್ರಶ್ನೆಯನ್ನು ವಿರೋಧಿಸುತ್ತೇವೆ. ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಏನಾಗಿದ್ದರು. ಅವರೆಂದೂ ಈ ಧೋರಣೆ ತೋರಿರಲಿಲ್ಲ. ಇಂಥ ಟ್ವೀಟ್ಗಳಿಂದ ರಾಹುಲ್ ಗಾಂಧಿ, ಮಹಾತ್ಮ ಗಾಂಧೀಜಿ, ಮನಮೋಹನ್ ಸಿಂಗ್ರಂತಹ ಸಜ್ಜನರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಇಲ್ಲಿ ರಾಹುಲ್ ಗಾಂಧಿ ಟಾಂಗ್ ಕೊಡಲು ಹೊರಟಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಎಂಬುದು ವಾಸ್ತವ. ಆದರೆ ಅದನ್ನು ನೇರವಾಗಿ ಹೇಳದೆ. ಹೀಗೆ ಟ್ವೀಟ್ ಮಾಡಿದ್ದಾರೆ. ಈ ಹಿಂದೆಯೂ ಕೂಡ ಪ್ರಧಾನಿ ಮೋದಿಯನ್ನು ಹಿಟ್ಲರ್ ಎಂದು ಕರೆದಿದ್ದು ಹಲವರಿಗೆ ಈ ವೇಳೆ ನೆನಪಾಗಿದೆ.
ರಾಹುಲ್ ಗಾಂಧಿ ಉಲ್ಲೇಖಿಸಿದ ಸರ್ವಾಧಿಕಾರಿಗಳು ಯಾರು ಎಂಬ ಪರಿಚಯ ಇಲ್ಲಿದೆ..
Marcos-ಇವರ ಪೂರ್ಣ ಹೆಸರು ಫರ್ಡಿನ್ಯಾಂಡ್ ಇ. ಮಾರ್ಕೋಸ್. 1970-80ರ ದಶಕದಲ್ಲಿ ಫಿಲಿಫೈನ್ ದೇಶದ ಅಧ್ಯಕ್ಷರಾಗಿದ್ದರು. ಇವರೊಬ್ಬ ಸರ್ವಾಧಿಕಾರಿ ಎಂಬ ಆರೋಪ ಕೇಳಿಬಂದಿತ್ತು. ರೈತರು, ವಿದ್ಯಾರ್ಥಿಗಳು ಇವರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು.
Mussolini- ಬೆನಿಟೋ ಮುಸ್ಸೋಲಿನಿ ಸರ್ವಾಧಿಕಾರಿ ಎಂದೇ ಹೆಸರು ಮಾಡಿದವರು. ಇಟಲಿಯ ಪತ್ರಕರ್ತ, ರಾಜಕಾರಣಿಯಾಗಿದ್ದ ಇವರು, ನ್ಯಾಷನಲ್ ಫ್ಯಾಸಿಸ್ಟ್ ಪಾರ್ಟಿಯ ಸಂಸ್ಥಾಪಕರು. 1922ರಿಂದ 1943ರವರೆಗೆ ಇಟಲಿಯ ಪ್ರಧಾನಮಂತ್ರಿಯಾಗಿದ್ದರು. ಹಿಟ್ಲರ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು.
Milošević- ಸರ್ವಾಧಿಕಾರಿ ಧೋರಣೆಗೆ ಹೆಸರಾಗಿದ್ದ ಇನ್ನೋರ್ವ ರಾಜಕಾರಣಿ ಸ್ಲೊಬೊಡಾನ್ ಮಿಲೋಸೆವಿಕ್. ಸರ್ಬಿಯಾ ಮತ್ತು ಯುಗೊಸ್ಲೋವಿಯಾದ ರಾಜಕಾರಣಿಯಾಗಿದ್ದರು. 1989-1992ರವರೆಗೆ ಸರ್ಬಿಯಾ ಪ್ರಧಾನಮಂತ್ರಿಯಾಗಿದ್ದರು. 1997ರಿಂದ-2000ದವರೆಗೆ ಫೆಡರಲ್ ರಿಪಬ್ಲಿಕ್ ಆಫ್ ಯುಗೊಸ್ಲಾವಿಯಾದ ಅಧ್ಯಕ್ಷರಾಗಿದ್ದರು.
Mubarak- ಹೊಸ್ನಿ ಮುಬಾರಕ್ ಈಜಿಪ್ಟ್ನ ರಾಜಕಾರಣಿ. 1981ರಿಂದ 2011ರವರೆಗೆ ಈಜಿಪ್ಟ್ನ ಅಧ್ಯಕ್ಷರಾಗಿದ್ದರು. ಹಾಗೇ 1981ರಿಂದ 82ರವರೆಗೆ ಪ್ರಧಾನಮಂತ್ರಿ ಹುದ್ದೆಯನ್ನೂ ನಿಭಾಯಿಸಿದ್ದರು. ಅವರ ಸರ್ವಾಧಿಕಾರಿ ಧೋರಣೆಯನ್ನು ಸಹಿಸಲಾಗದ ಪ್ರಜೆಗಳು ಅದೆಷ್ಟೋ ಪ್ರತಿಭಟನೆ, ಹೋರಾಟ ನಡೆಸಿದ್ದರು. ಅವರನ್ನು ಕೆಳಗಿಳಿಸಿ ಎಂದು ಒತ್ತಾಯಿಸಿದ್ದರು.
Mobutu-ಮೊಬುಟು ಸೆಸೆ ಸೆಕೊ ಅವರು ಕಾಂಗೋಲೀಸ್ ರಾಜಕಾರಣಿ ಮತ್ತು ಮಿಲಿಟರಿ ಅಧಿಕಾರಿಯಾದ್ದರು. 1965 ರಿಂದ 1997 ರವರೆಗೆ ಝೈರ್ ದೇಶದ ಅಧ್ಯಕ್ಷರಾಗಿದ್ದ ಇವರು ಸರ್ವಾಧಿಕಾರಿ ಆಡಳಿತ ನಡೆಸಿದವರು. ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಇಡೀ ದೇಶವನ್ನು, ಜನರನ್ನು ಆರ್ಥಿಕ ಶೋಷಣೆಗೆ ಒಳಪಡಿಸಿದ್ದರು. ಭ್ರಷ್ಟಾಚಾರ ನಡೆಸಿ ವೈಯಕ್ತಿಕವಾಗಿ ಅಪಾರ ಸಂಪತ್ತು ಗಳಿಸಿದ್ದರು.
Musharraf-ಪಾಕಿಸ್ತಾನದ ಫರ್ವೇಜ್ ಮುಷರಫ್ ಕೂಡ ಸರ್ವಾಧಿಕಾರಿಯಾಗಿದ್ದವರು. ಸೇನಾಧಿಕಾರಿಯೂ ಆಗಿದ್ದ 2001ರಿಂದ 2008ರವರೆಗೆ ಪ್ರಧಾನಿಯಾಗಿದ್ದರು. ಇವರ ಅಧಿಕಾರ ಅವಧಿಯಲ್ಲಿ ಭಾರತದ ಶಾಂತಿ ಪ್ರಯತ್ನಕ್ಕೆ ಸತತ ಹಿನ್ನಡೆಯಾಗಿತ್ತು.
Micombero-ಮೈಕೆಲ್ ಮೈಕೊಂಬೆರೊ ಬುರುಂಡಿ ದೇಶದ ಸೇನಾಧಿಕಾರಿ ಮತ್ತು ರಾಜಕಾರಣಿ. ಈ ದೇಶದ ಪ್ರಥಮ ಪ್ರಧಾನಿಯಾಗಿ 1966ರಿಂದ 1976ರವರೆಗೆ ಆಳ್ವಿಕೆ ನಡೆಸಿದ್ದು, ಸರ್ವಾಧಿಕಾರಿ ಎನಿಸಿಕೊಂಡಿದ್ದರು.