ಅಣ್ಣಾ ಹಜಾರೆ ಚಳವಳಿಯಿಂದ ಅಹ್ಮದ್ ಪಟೇಲ್ ನಿಧನದವರೆಗೆ: ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಸಾಲು ಸಾಲು ತಪ್ಪುಗಳು
ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್' ಆತ್ಮಚರಿತ್ರೆ ಬಿಡುಗಡೆಯಾಗಿ ಚರ್ಚೆಗೀಡಾಗಿದೆ. ಅಣ್ಣಾ ಹಜಾರೆ ಚಳವಳಿ (2011), ಆರ್‌ಎಸ್‌ಎಸ್ ಸ್ಥಾಪನೆ (1925), ಅಹ್ಮದ್ ಪಟೇಲ್ ನಿಧನದ (2020) ವರ್ಷಗಳನ್ನು ಪುಸ್ತಕದಲ್ಲಿ ತಪ್ಪಾಗಿ ಉಲ್ಲೇಖಿಸಲಾಗಿದೆ. ಗುಜರಾತ್ ರಾಜಧಾನಿ ಬಗ್ಗೆಯೂ ದೋಷವಿದೆ. ಈ ಐತಿಹಾಸಿಕ ಮತ್ತು ಸತ್ಯಾಂಶ ದೋಷಗಳು ಪುಸ್ತಕದ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಮೂಡಿಸಿ, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ನವದೆಹಲಿ, ನವೆಂಬರ್ 10: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹು ನಿರೀಕ್ಷಿತ ಆತ್ಮಚರಿತ್ರೆ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಬಿಡುಗಡೆಯಾದ ಬೆನ್ನಲ್ಲೇ ಹಲವು ಚರ್ಚೆಗಳಿಗೆ ನಾಂದಿ ಹಾಡಿದೆ. ನೆಹರು-ಗಾಂಧಿ ಕುಟುಂಬದ ವೈಯಕ್ತಿಕ ವಿಚಾರಗಳು ಮತ್ತು ಸೋನಿಯಾ ಗಾಂಧಿ ಅವರ ರಾಜಕೀಯ ಬದುಕಿನ ಅನುಭವಗಳನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ ಕೆಲವು ಐತಿಹಾಸಿಕ ಘಟನೆಗಳ ದಿನಾಂಕ ಮತ್ತು ವರ್ಷಗಳು ತಪ್ಪಾಗಿ ಉಲ್ಲೇಖವಾಗಿವೆ ಎಂಬ ಆರೋಪ ಕೇಳಿಬಂದಿದೆ.
ನವೆಂಬರ್ 10ರಂದು ಪುಸ್ತಕ ಮಾರುಕಟ್ಟೆಗೆ ಬಂದಿದ್ದು, ಓದುಗರು ಮತ್ತು ಮಾಧ್ಯಮಗಳು ಪುಸ್ತಕದಲ್ಲಿನ ಉಲ್ಲೇಖಗಳನ್ನು ಪರಿಶೀಲಿಸಿದಾಗ ಕನಿಷ್ಠ ಮೂರು ಪ್ರಮುಖ ವಾಸ್ತವಿಕ ತಪ್ಪುಗಳು ಕಂಡುಬಂದಿವೆ ಎಂದು ವರದಿಯಾಗಿದೆ.
ಅಣ್ಣಾ ಹಜಾರೆ ಚಳವಳಿಯ ವರ್ಷದಲ್ಲಿ ತಪ್ಪು
ಸೋನಿಯಾ ಗಾಂಧಿ ತಮ್ಮ ಪುಸ್ತಕದ 33ನೇ ಅಧ್ಯಾಯದ 461ನೇ ಪುಟದಲ್ಲಿ ಅಣ್ಣಾ ಹಜಾರೆ ನೇತೃತ್ವದ ‘ಇಂಡಿಯಾ ಅಗೇನ್ಸ್ಟ್ ಕರಪ್ಷನ್’ ಚಳವಳಿ 2012ರಲ್ಲಿ ಮುನ್ನೆಲೆಗೆ ಬಂತು ಎಂದು ಬರೆದಿದ್ದಾರೆ. ಆದರೆ ಈ ಚಳವಳಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದು 2011ರಲ್ಲಿ. ಏಪ್ರಿಲ್ 5, 2011ರಂದು ಅಣ್ಣಾ ಹಜಾರೆ ದೆಹಲಿಯ ಜಂತರ್ ಮಂತರ್‌ನಲ್ಲಿ ಜನ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಈ ಹೋರಾಟಕ್ಕೆ ದೇಶದ ವಿವಿಧ ಭಾಗಗಳಿಂದ ಬೆಂಬಲ ವ್ಯಕ್ತವಾಗಿತ್ತು. ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ಸೇರಿದಂತೆ ಹಲವು ಪ್ರಮುಖರು ಚಳವಳಿಯಲ್ಲಿ ಭಾಗವಹಿಸಿದ್ದರು. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ದೊಡ್ಡ ರಾಜಕೀಯ ಸವಾಲಾಗಿತ್ತು. ಹೀಗಾಗಿ ಪುಸ್ತಕದಲ್ಲಿ 2012 ಎಂದು ಉಲ್ಲೇಖಿಸಿರುವುದು ತಪ್ಪು ಎಂಬ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಪ್ರಧಾನಿಯಾಗಲು ಒಪ್ಪಿದ್ದ ಸೋನಿಯಾ ಗಾಂಧಿ ಮನೆಯಲ್ಲಿ ಆ ರಾತ್ರಿ ಏನಾಯ್ತು?
ಆರೆಸ್ಸೆಸ್ ಸ್ಥಾಪನೆಯ ವರ್ಷದಲ್ಲೂ ತಪ್ಪು
ಪುಸ್ತಕದ 24ನೇ ಅಧ್ಯಾಯದ 338ನೇ ಪುಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) 1921ರಲ್ಲಿ ಸ್ಥಾಪನೆಯಾಯಿತು ಎಂದು ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ. ಆದರೆ ಆರೆಸ್ಸೆಸ್ ಸ್ಥಾಪನೆಯಾಗಿದ್ದು 1925ರ ಸೆಪ್ಟೆಂಬರ್ 27ರಂದು. ನಾಗಪುರದಲ್ಲಿ ವೈದ್ಯರಾಗಿದ್ದ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಈ ಸಂಘಟನೆಯನ್ನು ಸ್ಥಾಪಿಸಿದರು.
ಆರೆಸ್ಸೆಸ್‌ನ ಸಿದ್ಧಾಂತ ಮತ್ತು ರಾಜಕೀಯ ನಿಲುವುಗಳ ಬಗ್ಗೆ ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಟೀಕೆ ಮಾಡಿದ್ದಾರೆ. ಆದರೆ ಸಂಘಟನೆಯ ಸ್ಥಾಪನೆಯ ವರ್ಷವನ್ನು 1921 ಎಂದು ನಮೂದಿಸಿರುವುದು ಐತಿಹಾಸಿಕವಾಗಿ ತಪ್ಪಾಗಿದೆ.
ಅಹ್ಮದ್ ಪಟೇಲ್ ನಿಧನದ ವರ್ಷದಲ್ಲಿ ತಪ್ಪು
ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಆಪ್ತ ಸಹಾಯಕರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ನಿಧನದ ವರ್ಷವನ್ನೂ ಪುಸ್ತಕದಲ್ಲಿ ತಪ್ಪಾಗಿ ಉಲ್ಲೇಖಿಸಲಾಗಿದೆ. ಪುಸ್ತಕದ 29ನೇ ಅಧ್ಯಾಯದ 401ನೇ ಪುಟದಲ್ಲಿ ಅಹ್ಮದ್ ಪಟೇಲ್ ಅವರು ಕೋವಿಡ್‌ನಿಂದ 2022ರಲ್ಲಿ ನಿಧನರಾದರು ಎಂದು ಬರೆಯಲಾಗಿದೆ.
ಆದರೆ ಅಹ್ಮದ್ ಪಟೇಲ್ ನಿಧನರಾಗಿದ್ದು 2020ರ ನವೆಂಬರ್ 25ರಂದು. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದರು. ಕಾಂಗ್ರೆಸ್‌ನ ಪ್ರಮುಖ ರಾಜಕೀಯ ತಂತ್ರಗಾರರಲ್ಲಿ ಒಬ್ಬರಾಗಿದ್ದ ಅಹ್ಮದ್ ಪಟೇಲ್, ಸೋನಿಯಾ ಗಾಂಧಿ ಅವರ ಅತ್ಯಂತ ನಂಬಿಕಸ್ಥ ನಾಯಕರಾಗಿದ್ದರು. ಅವರ ನಿಧನದಿಂದ ಪಕ್ಷದಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಯಿತು ಎಂದು ಸೋನಿಯಾ ತಮ್ಮ ಆತ್ಮಚರಿತ್ರೆಯಲ್ಲಿ ನೆನಪಿಸಿಕೊಂಡಿದ್ದಾರೆ.
ಗುಜರಾತ್ ರಾಜಧಾನಿ ಬಗ್ಗೆಯೂ ತಪ್ಪು ಉಲ್ಲೇಖ?
ಇದರ ಜೊತೆಗೆ, 2002ರ ಗುಜರಾತ್ ಗಲಭೆಯ ಬಗ್ಗೆ ಬರೆದಿರುವ ಭಾಗದಲ್ಲೂ ಮತ್ತೊಂದು ತಪ್ಪು ಕಂಡುಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಗುಜರಾತ್‌ನ ರಾಜಧಾನಿ ಅಹಮದಾಬಾದ್ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಆದರೆ ಗುಜರಾತ್‌ನ ರಾಜಧಾನಿ ಗಾಂಧಿನಗರ. 1970ರಿಂದ ಗಾಂಧಿನಗರವೇ ರಾಜ್ಯದ ರಾಜಧಾನಿಯಾಗಿದೆ. ಅಹಮದಾಬಾದ್ ಗುಜರಾತ್‌ನ ಪ್ರಮುಖ ನಗರವಾಗಿದ್ದರೂ ರಾಜಧಾನಿಯಲ್ಲ.
ಪುಸ್ತಕದ ವಿಶ್ವಾಸಾರ್ಹತೆ ಬಗ್ಗೆ ಚರ್ಚೆ
ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಸುಮಾರು 544 ಪುಟಗಳ ಆತ್ಮಚರಿತ್ರೆ. ಇದರಲ್ಲಿ ಸೋನಿಯಾ ಗಾಂಧಿ ತಮ್ಮ ವೈಯಕ್ತಿಕ ಜೀವನ, ರಾಜೀವ್ ಗಾಂಧಿ ಅವರೊಂದಿಗಿನ ಬದುಕು, ನೆಹರು-ಗಾಂಧಿ ಕುಟುಂಬದ ಅನುಭವಗಳು ಮತ್ತು ಕಾಂಗ್ರೆಸ್ ರಾಜಕೀಯದಲ್ಲಿ ತಮ್ಮ ಪಾತ್ರದ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆಯಾದ ಬೆನ್ನಲ್ಲೇ ವೈಯಕ್ತಿಕ ನೆನಪುಗಳ ಜೊತೆಗೆ ಐತಿಹಾಸಿಕ ಘಟನೆಗಳನ್ನೂ ದಾಖಲಿಸಿರುವುದರಿಂದ ಅವುಗಳ ನಿಖರತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅಣ್ಣಾ ಹಜಾರೆ ಚಳವಳಿ, ಆರೆಸ್ಸೆಸ್ ಸ್ಥಾಪನೆ ಮತ್ತು ಅಹ್ಮದ್ ಪಟೇಲ್ ನಿಧನದ ವರ್ಷಗಳಲ್ಲಿನ ವ್ಯತ್ಯಾಸಗಳು ಈ ಚರ್ಚೆಗೆ ಕಾರಣವಾಗಿವೆ. ಇದರ ಜತೆಗೆ 2022ರ ಗುಜರಾತ್ ಗಲಭೆಯ ಬಗ್ಗೆ ಬರೆದಿರುವ ಭಾಗದಲ್ಲೂ ಮತ್ತೊಂದು ತಪ್ಪು ಕಂಡುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




