
ನವದೆಹಲಿ, ಅಕ್ಟೋಬರ್ 27: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಸೋನಿಯಾ ಗಾಂಧಿ, “ನನ್ನ ಪತಿ ರಾಜೀವ್ ಗಾಂಧಿ ಈ ದೇಶದ ಪ್ರಧಾನಮಂತ್ರಿಯಾಗುವುದಕ್ಕೆ ನಾನು ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸಿದ್ದೆ” ಎಂದು ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಮುಂಬರುವ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಬಿಡುಗಡೆಯಾದಾಗ ರಾಜಕೀಯ ವಲಯದಲ್ಲಿ ರಾದ್ಧಾಂತ ಉಂಟಾಗುವುದು ಖಚಿತ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, “ನನ್ನ ಪತಿ ಪ್ರಧಾನಿಯಾಗಬೇಕು ಎಂದು ಹೇಳಿದಾಗ ನಾನು ಅದನ್ನು ತೀವ್ರವಾಗಿ ವಿರೋಧಿಸಿದ್ದೆ. ಈ ಪುಸ್ತಕವು ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನನ್ನದೇ ದೃಷ್ಟಿಕೋನದಲ್ಲಿ ಜಗತ್ತಿನ ಮುಂದಿಡಲು ಅವಕಾಶ ಮಾಡಿಕೊಟ್ಟಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕತೆಗೆ ಹೊಸ ಪ್ರಕಾಶನ; ನ. 10ರಂದು ಹಾರ್ಪರ್ ಕಾಲಿನ್ಸ್ನಿಂದ ಬಿಲಾಂಗಿಂಗ್ ಪ್ರಕಟ
ಆತ್ಮಚರಿತ್ರೆಯ ಬಿಡುಗಡೆಯಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಮಾತನಾಡುತ್ತಾ, “ಕೆಲವರು ನನ್ನ ಕುರಿತು ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬಹುದು, ಇನ್ನು ಕೆಲವರ ಅಭಿಪ್ರಾಯ ಮತ್ತಷ್ಟು ಕೆಟ್ಟದಾಗಬಹುದು. ಆದರೆ ನಾನು ಈ ಪುಸ್ತಕ ಬರೆದಮೇಲೆ, ಸಾರ್ವಜನಿಕ ಜೀವನದಲ್ಲಿದ್ದ ಮೇಲೆ ಇದು ಸಹಜ. ಇಲ್ಲಿ ಎಲ್ಲರೂ ಹೇಳುವಂತೆ ಸಣ್ಣ ರಾದ್ಧಾಂತವಾಗುವುದು ಖಚಿತ” ಎಂದು ಅವರು ನಗುತ್ತಾ ಹೇಳಿದ್ದಾರೆ.
ರಾಜೀವ್ ಗಾಂಧಿ ಪ್ರಧಾನಿಯಾಗುವುದಕ್ಕೆ ಸೋನಿಯಾ ವಿರೋಧ ಮಾಡಿದ್ದರ ಕುರಿತು ಜೇವಿಯರ್ ಮೊರೊ ಅವರ ‘ರೆಡ್ ಸಾರಿ’ ಎಂಬ ಕಾದಂಬರಿಯಲ್ಲಿ ಮೊದಲ ಬಾರಿಗೆ ಉಲ್ಲೇಖಿಸಲಾಗಿತ್ತು. ರಾಜೀವ್ ಗಾಂಧಿ ಅವರ ಆ ನಿರ್ಧಾರವನ್ನು ಸೋನಿಯಾ ಗಾಂಧಿ “ಮರಣದಂಡನೆ”ಯಂತೆ ಕಂಡಿದ್ದರು ಹಾಗೂ ಪ್ರಮಾಣವಚನ ಸ್ವೀಕರಿಸದಂತೆ ಕಣ್ಣೀರು ಹಾಕಿ ಅವರನ್ನು ತಡೆದಿದ್ದರು ಎಂದು ಅದರಲ್ಲಿ ವಿವರಿಸಲಾಗಿತ್ತು.
ಇದನ್ನೂ ಓದಿ: ‘ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸದಂತೆ ಬಾಹ್ಯ ಒತ್ತಡವಿರಲಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ
“ನನ್ನ ಕುರಿತು ಅನೇಕ ಸಂಗತಿಗಳನ್ನು ಬರೆಯಲಾಗಿತ್ತು, ಅವುಗಳಲ್ಲಿ ಹೆಚ್ಚಿನವು ಸತ್ಯಕ್ಕೆ ದೂರವಾಗಿದ್ದವು ಅಥವಾ ಅತಿಶಯೋಕ್ತಿಯಿಂದ ಕೂಡಿದ್ದವು. ಹಾಗಾಗಿ ಸತ್ಯ ಘಟನೆಗಳನ್ನು ಮೂಲ ರೂಪದಲ್ಲೇ ದಾಖಲಿಸಲು ನನಗೆ ಈ ಆತ್ಮಚರಿತ್ರೆ ಅವಕಾಶ ಮಾಡಿಕೊಟ್ಟಿದೆ. ಈ ಪುಸ್ತಕ ಓದಿದ ನಂತರ ಕೆಲವರು ನನ್ನ ಕುರಿತಾದ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬಹುದು, ಇನ್ನು ಕೆಲವರ ಅಭಿಪ್ರಾಯ ಮತ್ತಷ್ಟು ಕೆಟ್ಟದಾಗಬಹುದು” ಎಂದಿದ್ದಾರೆ.
ಈ ಪುಸ್ತಕವು ಯುದ್ಧೋತ್ತರ ಇಟಲಿಯ ವೆನೆಟೋದಲ್ಲಿನ ಸೋನಿಯಾ ಗಾಂಧಿಯವರ ಬಾಲ್ಯ, 1965ರಲ್ಲಿ ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿಯ ಭೇಟಿ, ವಿವಾಹ, ಅತ್ತೆ ಇಂದಿರಾ ಗಾಂಧಿ ಅವರೊಂದಿಗಿನ ಬಾಂಧವ್ಯ ಮತ್ತು ಭಾರತೀಯ ಸಂಸ್ಕೃತಿಗೆ ಒಗ್ಗಿಕೊಂಡ ಹಾದಿಯನ್ನು ವಿವರಿಸುತ್ತದೆ.
ಗಾಂಧಿ ಕುಟುಂಬಕ್ಕಾದ ಭೀಕರ ಆಘಾತಗಳು:
1980ರಲ್ಲಿ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಸಾವು, 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಹಾಗೂ 1991ರಲ್ಲಿ ರಾಜೀವ್ ಗಾಂಧಿ ಅವರ ಭೀಕರ ಹತ್ಯೆಯ ದುರಂತಗಳನ್ನು ಈ ಪುಸ್ತಕ ನೆನಪಿಸುತ್ತದೆ. 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ಯುಪಿಎ ಗೆಲುವು ಸಾಧಿಸಿದಾಗ, ಪ್ರಮುಖ ನಾಯಕಿಯಾಗಿದ್ದರೂ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿ ಡಾ. ಮನಮೋಹನ್ ಸಿಂಗ್ ಅವರಿಗೆ ಅವಕಾಶ ಮಾಡಿಕೊಟ್ಟ ಮಹತ್ವದ ರಾಜಕೀಯ ನಿರ್ಧಾರದ ಕುರಿತೂ ಪುಸ್ತಕ ಬೆಳಕು ಚೆಲ್ಲುತ್ತದೆ.
ಇಟಲಿಯಿಂದ ಭಾರತದ ರಾಜಕೀಯದವರೆಗೆ ಸಾಗಿದ ತಮ್ಮ ಪಯಣವನ್ನು “ಪ್ರೀತಿ, ಕರ್ತವ್ಯ, ನಷ್ಟ ಮತ್ತು ತನ್ನವರನ್ನು ಕಂಡುಕೊಳ್ಳುವ ಕಥೆ” ಎಂದು ಬಣ್ಣಿಸಿರುವ ಸೋನಿಯಾ ಗಾಂಧಿ ಅವರ ಈ ಬಹುನಿರೀಕ್ಷಿತ ಪುಸ್ತಕವು 2026ರ ನವೆಂಬರ್ 10ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ