‘ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸದಂತೆ ಬಾಹ್ಯ ಒತ್ತಡವಿರಲಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕತೆಯನ್ನು ಪ್ರಕಟಿಸದಿರಲು ನಿರ್ಧಾರ ಮಾಡಿದ್ದರ ಹಿಂದೆ ಯಾವುದೇ ಬಾಹ್ಯ ಒತ್ತಡವಿಲ್ಲ ಎಂದು 'ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ' (PRHI) ಸ್ಪಷ್ಟಪಡಿಸಿದೆ. ಸೋನಿಯಾ ಗಾಂಧಿಯವರ 'ಬಿಲಾಂಗಿಂಗ್' ಪುಸ್ತಕದ ಪ್ರಕಟಣೆ ಕುರಿತ ಮಾತುಕತೆಗಳು ಒಂದು ನಿರ್ದಿಷ್ಟ ವಿಚಾರದ ಕುರಿತ ಭಿನ್ನಾಭಿಪ್ರಾಯದಿಂದಾಗಿ ಸ್ಥಗಿತಗೊಂಡಿವೆ ಎಂದು ಸಂಸ್ಥೆ ತಿಳಿಸಿದೆ. ಸೋನಿಯಾ ಗಾಂಧಿಯವರ ಪುಸ್ತಕವನ್ನು ಪ್ರಕಟಿಸದಂತೆ ಕೇಂದ್ರ ಸರ್ಕಾರ ಒತ್ತಡ ಹೇರಿದೆ ಎಂಬ ಕಾಂಗ್ರೆಸ್ ಆರೋಪದ ಬೆನ್ನಲ್ಲೇ ಪೆಂಗ್ವಿನ್ ಇಂಡಿಯಾ ಈ ಸ್ಪಷ್ಟನೆ ನೀಡಿದೆ.

ನವದೆಹಲಿ, ಸೆಪ್ಟೆಂಬರ್ 1: ಸೋನಿಯಾ ಗಾಂಧಿಯವರ (Sonia Gandhi) ಬಹು ನಿರೀಕ್ಷಿತ ಆತ್ಮಕತೆಯಾದ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪ್ರಕಟ ಮಾಡುವುದಿಲ್ಲ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಘೋಷಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರ ಪೆಂಗ್ವಿನ್ ಇಂಡಿಯಾ ಮೇಲೆ ಒತ್ತಡ ಹೇರಿ ಈ ಪುಸ್ತಕದ ಪ್ರಕಟಣೆಯಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ, ಆ ಆರೋಪಕ್ಕೆ ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಪುಸ್ತಕ ಪ್ರಕಟಣೆ ಸಂಬಂಧ ಯಾವುದೇ ರೀತಿಯ ಬಾಹ್ಯ ಅಥವಾ ರಾಜಕೀಯ ಒತ್ತಡಗಳಿಲ್ಲ ಎಂದು ತಿಳಿಸಿದೆ.
ಸೋನಿಯಾ ಗಾಂಧಿಯವರ ಆತ್ಮಕತೆಯ ಪ್ರಕಟಣೆಗೆ ಸಂಬಂಧಿಸಿದಂತೆ ಕೇವಲ ಒಂದು ನಿರ್ದಿಷ್ಟ ವಿಚಾರದ ಕುರಿತು ಪ್ರಕಾಶಕರು ಮತ್ತು ಲೇಖಕರಾದ ಸೋನಿಯಾ ಗಾಂಧಿ ನಡುವೆ ಭಿನ್ನಾಭಿಪ್ರಾಯವಿದೆಯೇ ಹೊರತು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಪೆಂಗ್ವಿನ್ ಇಂಡಿಯಾ ತಿಳಿಸಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸದಂತೆ ಕೇಂದ್ರ ಸರ್ಕಾರ ಒತ್ತಡ ಹಾಕಿದೆ; ಕಾಂಗ್ರೆಸ್ ಆರೋಪ
ಸೋನಿಯಾ ಗಾಂಧಿ ಅವರ ರಾಜಕೀಯ ಹಾಗೂ ವೈಯಕ್ತಿಕ ಜೀವನದ ಮಹತ್ವದ ಘಟನೆಗಳನ್ನು ಒಳಗೊಂಡಿರುವ ಈ ಪುಸ್ತಕವು ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದು, ಆಂತರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಈ ಪುಸ್ತಕವನ್ನು ‘ಪೆಂಗ್ವಿನ್ ರಾಂಡಮ್ ಹೌಸ್ ಎಲ್‌ಎಲ್‌ಸಿ’ಯ ಭಾಗವಾಗಿರುವ ‘ಆಲ್ಫ್ರೆಡ್ ಎ. ಕ್ನಾಪ್‌ಫ್’ (Alfred A. Knopf) ಸಂಸ್ಥೆಯು ನವೆಂಬರ್ 10ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದೆ. ಆದರೆ, ಭಾರತದಲ್ಲಿ ಮಾತ್ರ ಪೆಂಗ್ವಿನ್ ಇಂಡಿಯಾ ಈ ಪುಸ್ತಕ ಪ್ರಕಟಿಸುವುದಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಆರೋಪವೇನು?:
ಭಾರತದಲ್ಲಿ ಈ ಪುಸ್ತಕದ ಪ್ರಕಟಣೆಯ ಕುರಿತು ಉಂಟಾಗಿರುವ ಅನಿಶ್ಚಿತತೆಯ ಹಿಂದೆ ಕೇಂದ್ರ ಸರ್ಕಾರದ ಒತ್ತಡವಿದೆ ಎಂದು ಹಲವು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಮೋದಿ ಆಡಳಿತಾವಧಿಯಲ್ಲಿ ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಕುರಿತಾದ ಭಾಗಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಮೇಲೆ ಒತ್ತಡ ಹೇರಲಾಗಿತ್ತು ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು.
ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ:
ಆದರೆ, ಹೊರಗಿನ ಯಾವುದೇ ಒತ್ತಡದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪೆಂಗ್ವಿನ್ ಇಂಡಿಯಾ ಹೇಳಿದೆ. “ಸೋನಿಯಾ ಗಾಂಧಿ ಆತ್ಮಕತೆ ‘ಬಿಲಾಂಗಿಂಗ್’ ಕುರಿತಾದ ಕೆಲವು ತಪ್ಪು ಕಲ್ಪನೆಗಳನ್ನು ಸರಿಪಡಿಸುವುದು ನಮಗೆ ಮುಖ್ಯ ಎನಿಸಿದೆ. ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದಲ್ಲಿ ನಾವೆಲ್ಲರೂ ಈ ಪುಸ್ತಕವನ್ನು ಪ್ರಕಟಿಸಲು ತುಂಬಾ ಉತ್ಸುಕರಾಗಿದ್ದೆವು” ಎಂದು PRHI ವಕ್ತಾರರಾದ ಪಲ್ಲವಿ ನಾರಾಯಣ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಈ ಪುಸ್ತಕದ ವಿಷಯವು ಗೌಪ್ಯವಾಗಿರುವುದರಿಂದ ಮತ್ತು ನಿರ್ಬಂಧಕ್ಕೆ ಒಳಪಟ್ಟಿರುವುದರಿಂದ, ಇಲ್ಲಿ ಯಾವುದೇ ರೀತಿಯ ಬಾಹ್ಯ ಒತ್ತಡವಿರಲಿಲ್ಲ” ಎಂದು ಪ್ರಕಾಶನ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ‘ಸೋನಿಯಾ ಗಾಂಧಿ ಆತ್ಮಕತೆಯನ್ನು ನಾವು ಪ್ರಕಟಿಸುವುದಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ
“ಕೆಲವು ವಿಷಯಗಳಲ್ಲಿ ಲೇಖಕರ ತಂಡವು ಬದಲಾವಣೆಗಳಿಗೆ ಒಪ್ಪಿಕೊಂಡರೆ, ಇತರ ವಿಷಯಗಳಲ್ಲಿ ನಾವು ಲೇಖಕರ ನಿಲುವನ್ನು ಸ್ವೀಕರಿಸಿದ್ದೆವು. ಆದರೆ ದುರದೃಷ್ಟವಶಾತ್, ಅಂತಿಮವಾಗಿ ಒಂದು ನಿರ್ದಿಷ್ಟ ವಿಚಾರದ ಕುರಿತು ಪರಸ್ಪರ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ” ಎಂದು ಸಂಸ್ಥೆ ತಿಳಿಸಿದೆ. ಇದರ ಬೆನ್ನಲ್ಲೇ, ತಮಗೆ ಪುಸ್ತಕದ ಪ್ರಕಟಣೆಯನ್ನು ಮುಂದುವರಿಸಲು ಇಷ್ಟವಿಲ್ಲ ಎಂದು ಲೇಖಕರ ತಂಡ ತಿಳಿಸಿದ್ದು, ತಾವು ಆ ನಿರ್ಧಾರವನ್ನು ಗೌರವಿಸುವುದಾಗಿ ಪೆಂಗ್ವಿನ್ ಇಂಡಿಯಾ ಹೇಳಿದೆ.
“ಒಂದು ಪ್ರಕಾಶನ ಸಂಸ್ಥೆಯಾಗಿ, ಪುಸ್ತಕದ ಹಿತದೃಷ್ಟಿಯಿಂದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮತ್ತು ಲೇಖಕರಿಗೆ ಶಿಫಾರಸುಗಳನ್ನು ನೀಡುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿಯಾಗಿದೆ” ಎಂದು ಹೇಳಿರುವ ಪೆಂಗ್ವಿನ್ ಇಂಡಿಯಾ, ಚರ್ಚೆಯ ಸಮಯದಲ್ಲಿ ಪುಸ್ತಕವನ್ನು ಪ್ರಕಟಿಸಲು ತಾವು ಸಿದ್ಧ ಮತ್ತು ಕಾತುರದಿಂದಿದ್ದೆವು ಎಂದು ಹೇಳಿದೆ. ಹಾಗೇ, ಲೇಖಕರೊಂದಿಗಿನ ಗೌಪ್ಯ ಚರ್ಚೆಗಳ ಕುರಿತು ಇನ್ನು ಮುಂದೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಪ್ರಕಾಶಕರು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Tue, 1 September 26




