AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸಲು ಪೆಂಗ್ವಿನ್ ಇಂಡಿಯಾ ನಿರಾಕರಿಸಿದ್ದೇಕೆ? ಅಸಲಿ ಕಾರಣ ಆರ್‌ಎಸ್‌ಎಸ್, ಚೀನಾ, ಮೋದಿ ಕುರಿತ ವಿಷಯ

ಸೋನಿಯಾ ಗಾಂಧಿ ಅವರ ಆತ್ಮಕತೆ ಭಾರತದಲ್ಲಿ ಪ್ರಕಟಿಸುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಚೀನಾ ಗಡಿ, ಪ್ರಧಾನಿ ಮೋದಿ ನಾಯಕತ್ವ ಹಾಗೂ ಆರ್‌ಎಸ್‌ಎಸ್ ಕುರಿತ ಬರಹಗಳೇ ಪೆಂಗ್ವಿನ್ ಇಂಡಿಯಾ ಜೊತೆಗಿನ ಚರ್ಚೆಯಲ್ಲಿ ಪ್ರಮುಖ ವಿಷಯಗಳಾಗಿದ್ದವು ಮತ್ತು ಪೆಂಗ್ವಿನ್ ಇಂಡಿಯಾ ಪ್ರಕಟಿಸಲು ನಿರಾಕರಿಸಿದ್ದಕ್ಕೆ ಕಾರಣ ಎನ್ನಲಾಗಿದೆ.

ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸಲು ಪೆಂಗ್ವಿನ್ ಇಂಡಿಯಾ ನಿರಾಕರಿಸಿದ್ದೇಕೆ? ಅಸಲಿ ಕಾರಣ ಆರ್‌ಎಸ್‌ಎಸ್, ಚೀನಾ, ಮೋದಿ ಕುರಿತ ವಿಷಯ
‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಮುಖಪುಟದ ಪ್ರತಿ ಹಾಗೂ ಸೋನಿಯಾ ಗಾಂಧಿ
ಗಣಪತಿ ಶರ್ಮಾ
|

Updated on: Aug 29, 2026 | 11:46 AM

Share

ಮುಖ್ಯಾಂಶಗಳು

  • ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಣೆ ವಿವಾದ
  • ಚೀನಾ, ಮೋದಿ, ಆರ್‌ಎಸ್‌ಎಸ್ ಬರಹಗಳೇ ಕೇಂದ್ರಬಿಂದು
  • ಪೆಂಗ್ವಿನ್ ಇಂಡಿಯಾ ಪ್ರಕಟಿಸಲು ನಿಕಾರಿಸಿದ್ದಕ್ಕೆ ಕಾರಣ ಬಯಲು

ನವದೆಹಲಿ, ಆಗಸ್ಟ್ 29: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಮುಂಬರುವ ಆತ್ಮಕತೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love)’ ಭಾರತದಲ್ಲಿ ಪ್ರಕಟಿಸುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಾಶನ ಭಾರತದಲ್ಲಿ ಪುಸ್ತಕ ಪ್ರಕಟಣೆಯಿಂದ ಹಿಂದೆ ಸರಿದಿರುವುದರ ಹಿಂದೆ ಮೂರು ಪ್ರಮುಖ ವಿಷಯಗಳಿವೆ ಎನ್ನಲಾಗಿದೆ. ಚೀನಾ ಗಡಿ ವಿಚಾರ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಕೇಂದ್ರ ಸರ್ಕಾರದ ನೀತಿಗಳು ಮತ್ತು ಆರ್‌ಎಸ್‌ಎಸ್‌ನ ಪ್ರಭಾವ ಕುರಿತ ಬರಹಗಳು ಪ್ರಕಾಶಕರು ಹಾಗೂ ಸೋನಿಯಾ ಗಾಂಧಿ ನಡುವಿನ ಚರ್ಚೆಯ ಕೇಂದ್ರಬಿಂದುವಾಗಿದ್ದವು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮೂರು ಪ್ರಮುಖ ವಿಷಯಗಳೇ ವಿವಾದಕ್ಕೆ ಕಾರಣ?

ಕಾಂಗ್ರೆಸ್ ಮೂಲಗಳ ಪ್ರಕಾರ, ಆತ್ಮಕತೆಯ ಹಸ್ತಪ್ರತಿಯಲ್ಲಿ ಚೀನಾ ಗಡಿಯಲ್ಲಿನ ಅತಿಕ್ರಮಣಗಳು ಮತ್ತು ಗಡಿ ಪರಿಸ್ಥಿತಿ ಕುರಿತು ಸುದೀರ್ಘವಾಗಿ ಉಲ್ಲೇಖಿಸಲಾಗಿದೆ. ಚೀನಾ ಗಡಿ ವಿಚಾರವನ್ನು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಹಲವು ಬಾರಿ ಸಂಸತ್ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ, ಈ ಭಾಗವೂ ಪುಸ್ತಕದ ಪ್ರಮುಖ ರಾಜಕೀಯ ವಿಷಯವಾಗಿದೆ.

ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ಅವರ ಕಾರ್ಯವೈಖರಿ ಹಾಗೂ ಕೇಂದ್ರ ಸರ್ಕಾರದ ಹಲವು ಪ್ರಮುಖ ನೀತಿಗಳ ಕುರಿತು ಸೋನಿಯಾ ಗಾಂಧಿ ಅಭಿಪ್ರಾಯ ಮತ್ತು ಅನುಭವಗಳನ್ನು ದಾಖಲಿಸಿದ್ದಾರೆ.

ಮೂರನೇ ಪ್ರಮುಖ ವಿಚಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್). ದೇಶದ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳ ಮೇಲೆ ಆರ್‌ಎಸ್‌ಎಸ್‌ನ ಪ್ರಭಾವದ ಕುರಿತು ಸೋನಿಯಾ ಗಾಂಧಿ ತಮ್ಮ ದೃಷ್ಟಿಕೋನವನ್ನು ಆತ್ಮಕತೆಯಲ್ಲಿ ದಾಖಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಕೆಲವು ಭಾಗ ಬದಲಿಸುವಂತೆ ಸೂಚನೆ?

ಹಸ್ತಪ್ರತಿಯಲ್ಲಿನ ಕೆಲವು ಭಾಗಗಳನ್ನು ತಿದ್ದುಪಡಿ ಮಾಡುವ ಅಥವಾ ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಸಲಹೆ ನೀಡಿತ್ತು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಆದರೆ, ಆ ಭಾಗಗಳು ತಮ್ಮ ವೈಯಕ್ತಿಕ ಅನುಭವ ಮತ್ತು ದೃಷ್ಟಿಕೋನವನ್ನು ಆಧರಿಸಿವೆ ಎಂಬ ನಿಲುವು ಹೊಂದಿರುವ ಸೋನಿಯಾ ಗಾಂಧಿ, ಅವುಗಳಲ್ಲಿ ಬದಲಾವಣೆ ಮಾಡಲು ಒಪ್ಪಲಿಲ್ಲ.

ಈ ಬೆಳವಣಿಗೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಟೀಕಿಸಿದ್ದು, ಪುಸ್ತಕದ ವಿಚಾರದಲ್ಲಿ ಒತ್ತಡ ಹೇರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದೆ.

ಪೆಂಗ್ವಿನ್ ಇಂಡಿಯಾ ಹೇಳಿದ್ದೇನು?

ಮತ್ತೊಂದೆಡೆ, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ ಭಾರತ ಘಟಕವು ತಾನು ಈ ಪುಸ್ತಕದ ಪ್ರಕಾಶಕರಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಕಾಶಕರಾಗಿ ಪುಸ್ತಕದ ವಿಷಯವನ್ನು ಪರಿಶೀಲಿಸುವುದು ಹಾಗೂ ಲೇಖಕರಿಗೆ ಅಗತ್ಯ ಸಲಹೆಗಳನ್ನು ನೀಡುವುದು ತಮ್ಮ ಜವಾಬ್ದಾರಿಯ ಭಾಗವಾಗಿದೆ ಎಂದು ಸಂಸ್ಥೆ ಹೇಳಿದೆ. ಅಲ್ಲದೆ, ಚರ್ಚೆಗಳು ಗೌಪ್ಯವಾಗಿರುವುದರಿಂದ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಪುಸ್ತಕವನ್ನು ಪ್ರಕಟಿಸುವ ಆಸಕ್ತಿ ತಮಗಿತ್ತು ಎಂದೂ ಪೆಂಗ್ವಿನ್ ಇಂಡಿಯಾ ಹೇಳಿಕೊಂಡಿದೆ. ಇದೀಗ ಭಾರತದಲ್ಲಿ ಪುಸ್ತಕದ ಪ್ರಕಟಣೆಯ ಹಕ್ಕುಗಳನ್ನು ಪಡೆಯಲು ಇತರ ಪ್ರಕಾಶನ ಸಂಸ್ಥೆಗಳೂ ಆಸಕ್ತಿ ತೋರಿವೆ.

ನವೆಂಬರ್ 10ರಂದು ಪುಸ್ತಕ ಬಿಡುಗಡೆ

ಅಮೆರಿಕದ ಪ್ರಕಾಶನ ಸಂಸ್ಥೆ ಆಲ್ಫ್ರೆಡ್ ಎ. ನಾಫ್, ಪೆಂಗ್ವಿನ್ ರಾಂಡಮ್ ಹೌಸ್‌ನ ಭಾಗವಾಗಿದ್ದು, ಸೋನಿಯಾ ಗಾಂಧಿ ಅವರ ಆತ್ಮಕತೆಯನ್ನು ನವೆಂಬರ್ 10ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇ-ಬುಕ್ ಆವೃತ್ತಿಗೆ ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದೆ.

ಆತ್ಮಕತೆಯಲ್ಲಿ ಸೋನಿಯಾ ಗಾಂಧಿ ಅವರ ಬಾಲ್ಯದಿಂದ ಹಿಡಿದು ಭಾರತಕ್ಕೆ ಬಂದ ಬಳಿಕದ ಜೀವನ, ರಾಜೀವ್ ಗಾಂಧಿ ಅವರೊಂದಿಗಿನ ವಿವಾಹ, ಇಂದಿರಾ ಗಾಂಧಿ ಅವರ ಸೊಸೆಯಾಗಿ ಕಳೆದ ವರ್ಷಗಳು ಹಾಗೂ ನಂತರ ರಾಜಕೀಯ ಪ್ರವೇಶಿಸಿದ ಸಂದರ್ಭಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ‘ಸೋನಿಯಾ ಗಾಂಧಿ ಆತ್ಮಕತೆಯನ್ನು ನಾವು ಪ್ರಕಟಿಸುವುದಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ

1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ತಮ್ಮ ಜೀವನದಲ್ಲಿ ಸಂಭವಿಸಿದ ಬದಲಾವಣೆ, 1991ರಲ್ಲಿ ರಾಜೀವ್ ಗಾಂಧಿ ಹತ್ಯೆ, ಕಾಂಗ್ರೆಸ್ ಅಧ್ಯಕ್ಷೆಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಅವಧಿ ಹಾಗೂ 2004ರಲ್ಲಿ ಪ್ರಧಾನಿಯಾಗುವ ಅವಕಾಶವನ್ನು ತಿರಸ್ಕರಿಸಿದ ನಿರ್ಧಾರ ಸೇರಿದಂತೆ ಹಲವು ಪ್ರಮುಖ ಘಟನೆಗಳ ಕುರಿತು ಆತ್ಮಕತೆಯಲ್ಲಿ ವಿವರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us