ಟ್ರೇಲರ್ ಮೂಲಕ ಗುಡುಗಿದ ‘ಕಾಮನ್ ಮ್ಯಾನ್’ ಗೌರಿಶಂಕರ್; ಸೆ.25ಕ್ಕೆ ರಿಲೀಸ್
ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಸಿಎಂ ಆದರೆ ಹೇಗಿರುತ್ತದೆ? ಆತ ಯಾವ ರೀತಿ ಆಡಳಿತ ನಡೆಸಬಹುದು? ಏನೆಲ್ಲ ಸುಧಾರಣೆ ಮಾಡಬಹುದು? ಅವನಿಗೆ ಏನೆಲ್ಲ ಸವಾಲುಗಳು ಎದುರಾಗಬಹುದು ಎಂಬುದನ್ನು ಕಾಮನ್ ಮ್ಯಾನ್ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಸೆಪ್ಟೆಂಬರ್ 25ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಲಾಯಿತು.

ಡಾ. ಎನ್. ನರಸಿಂಹ ಮೂರ್ತಿ ಅವರು ಕಥೆ ಬರೆದು ‘ಸುರಭಿ ಫಿಲ್ಮ್ಸ್’ ಮೂಲಕ ‘ಕಾಮನ್ ಮ್ಯಾನ್’ ಸಿನಿಮಾವನ್ನು ನಿರ್ಮಿಸಿದ್ದಾರೆ. ಕೌಟುಂಬಿಕ ಕಥಾಹಂದರದ ಸಿನಿಮಾಗಳಿಂದ ಖ್ಯಾತರಾದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಅವರ ನಿರ್ದೇಶನದ 106ನೇ ಸಿನಿಮಾ. ‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸೋನಾ ಲದ್ವಾ ಅವರು ನಾಯಕಿ ಆಗಿದ್ದಾರೆ. ವಿ. ಮನೋಹರ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
‘ಟ್ರೇಲರ್ ನೋಡಿದಾಗ ಪ್ರೇಕ್ಷಕರಲ್ಲಿ ಸಹಜವಾಗಿಯೇ ಕೌತುಕ ಮೂಡುತ್ತದೆ. ವಿಧಾನಸೌಧದ ಮೇಲೆ ನನಗೂ ಹಕ್ಕಿದೆ, ಅದನ್ನು ನನಗೆ ಬರೆದುಕೊಡಿ ಎಂದು ಸಾಮಾನ್ಯ ಪ್ರಜೆಯೊಬ್ಬ ಕೇಳುವ ಅಂಶವೇ ಹೊಸದಾಗಿದೆ. ಈ ಚಿತ್ರದ ಕಥಾವಸ್ತು ಹಾಗೂ ಟ್ರೇಲರ್‌ನಲ್ಲಿ ಜನರನ್ನು ಥಿಯೇಟರ್‌ಗೆ ಸೆಳೆಯುವ ಗಟ್ಟಿತನವಿದೆ. ಈ ಸಿನಿಮಾದಿಂದ ಗೌರಿಶಂಕರ್ ಅವರ ಹೆಸರು ಎತ್ತರಕ್ಕೆ ಬೆಳೆಯಲಿ. ಈ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಕಾಣಲಿ’ ಎಂದು ವಿ. ಮನೋಹರ್ ಅವರು ಶುಭಕೋರಿದರು.
ಈ ವೇಳೆ ನಟ ಗೌರಿಶಂಕರ್ ಅವರು ಮಾತನಾಡಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ‘ಸಿನಿಮಾದ ಕಥಾವಸ್ತು ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಈ ಸಿನಿಮಾ ಮಾಡಿದ್ದಕ್ಕೆ ನರಸಿಂಹ ಮೂರ್ತಿ ಅವರಿಗೆ ಧನ್ಯವಾದಗಳು. ಸರಿಯಾದ ಸಮಯಕ್ಕೆ ಸಿನಿಮಾ ಮಾಡಿ ಮುಗಿಸುವುದು ಸುಲಭವಲ್ಲ. ಅದನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಇಲ್ಲಿ ಹಣಕ್ಕಿಂತಲೂ ಹೆಚ್ಚಾಗಿ ಬೇಕಾಗಿರುವುದು ಆಸಕ್ತಿ. ನಿರ್ಮಾಪಕರು ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ. ರಂಗಭೂಮಿಯ ಅನುಭವ ಅವರಿಗೆ ಇದೆ. ಅವರಿಗೆ ಯಶಸ್ಸು ಸಿಗಬೇಕು’ ಎಂದು ಅವರು ಹೇಳಿದರು.
‘ಕಾಮನ್ ಮ್ಯಾನ್’ ಸಿನಿಮಾ ಟ್ರೇಲರ್:
‘ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಇದ್ದಲ್ಲಿ ಒಂದು ಚೈತನ್ಯ ಇರುತ್ತದೆ. ಹೊಸಬರು ಹೇಳುವುದನ್ನು ಕೂಡ ಅವರು ತಾಳ್ಮೆಯಿಂದ ಕೇಳುತ್ತಾರೆ. ಅವರ ವ್ಯಕ್ತಿತ್ವದಿಂದಲೇ ಅವರಿಗೆ ಗೌರವ ಸಿಗುತ್ತಿದೆ. 106 ಸಿನಿಮಾ ಮಾಡಿದರೂ ಕೂಡ ಅವರ ವ್ಯಕ್ತಿತ್ವದಲ್ಲಿ ಅದೇ ವಿನಯ ಇದೆ. ಅವರನ್ನು ನೋಡಿ ನಾವೆಲ್ಲ ಕಲಿಯುವುದು ತುಂಬಾ ಇದೆ’ ಎಂದು ಗೌರಿ ಶಂಕರ್ ಅವರು ಹೇಳಿದರು.
‘ಸಿನಿಮಾದಲ್ಲಿ ಹಾಡುಗಳು ತಾವಾಗಿಯೇ ಹುಟ್ಟಿಬರಬೇಕು. ಅದಕ್ಕೆ ಬೇಕಾದ ಸಾಹಿತ್ಯ, ಕಂಠ ಎಲ್ಲವೂ ಕೂಡಿಬಂದಿವೆ. ಚಿತ್ರರಂಗದಲ್ಲಿ ವಿನಯ್ ಚಂದ್ರ ಅವರು ಭರವಸೆಯ ಸಂಗೀತ ನಿರ್ದೇಶಕನಾಗಿ ಬೆಳೆಯುತ್ತಾರೆ. ಜನರಿಗೆ ಇಷ್ಟ ಆಗುವಂತಹ ಹಾಡುಗಳನ್ನು ನೀಡುವ ಪ್ರತಿಭೆ, ಸಾಮರ್ಥ್ಯ ಅವರಿಗೆ ಇದೆ’ ಎಂದು ಗೌರಿ ಶಂಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಸಿನಿಮಾದಲ್ಲೂ ‘ಕಾಮನ್ ಮ್ಯಾನ್’ ಸದ್ದು
ಹಿರಿಯ ನಟರಾದ ಅಶೋಕ್, ರಮೇಶ್ ಭಟ್, ಗಣೇಶ್ ರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 4-5 ಭಾಷೆಗಳಿಗೆ ಈ ಸಿನಿಮಾ ಡಬ್ ಆಗಿದೆ. ಕನ್ನಡದಲ್ಲಿ ಸಿಗುವ ಪ್ರತಿಕ್ರಿಯೆಯನ್ನು ಆಧರಿಸಿ ಇನ್ನುಳಿದ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಗೌರಿ ಶಂಕರ್ ಅವರು ತಿಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




