‘ರಾಮಾಯಣ’ ಸಿನಿಮಾದ ಟಿಕೆಟ್ ದರ ಶೇ. 80ರಷ್ಟು ಕಡಿತ; ಈಗ ಕೇವಲ 99 ರೂಪಾಯಿ
ಬಿಡುಗಡೆ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿರುವ ‘ರಾಮಾಯಣ’ ಸಿನಿಮಾ ಭಾರತದಾದ್ಯಂತ ಅಂದಾಜು 4,000 ಪರದೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈಗ ಚಿತ್ರತಂಡವು ಟಿಕೆಟ್ ದರ ಇಳಿಕೆಯ ಸಿಹಿಸುದ್ದಿ ನೀಡಿದೆ. ಚಿತ್ರಮಂದಿರಗಳಲ್ಲಿ ಈಗ ಕೇವಲ 99 ರೂಪಾಯಿಯಿಂದ ಟಿಕೆಟ್ ಲಭ್ಯವಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ...

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ನೆಟ್ ಕಲೆಕ್ಷನ್‌ನತ್ತ ಮುನ್ನುಗ್ಗುತ್ತಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಗಳಿಕೆಯ ವೇಗ ಕೊಂಚ ತಗ್ಗಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಈ ಸಿನಿಮಾ, ಒಂದೇ ದಿನದಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ದಾಖಲೆ ಬರೆದಿತ್ತು. ಆದರೆ, ಸೋಮವಾರದಂದು (ನವೆಂಬರ್ 23) ಚಿತ್ರದ ಗಳಿಕೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಅಂದರೆ 12 ಕೋಟಿ ರೂಪಾಯಿಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯಲು ಚಿತ್ರತಂಡವು ದೇಶಾದ್ಯಂತ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.
ಸೋಮವಾರದಂದು ಚಿತ್ರತಂಡವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಟಿಕೆಟ್ ದರ ಇಳಿಕೆಯ ಸಿಹಿಸುದ್ದಿ ನೀಡಿದೆ. ‘ಈ ಮಂಗಳವಾರ ದೊಡ್ಡ ಪರದೆಯ ಮೇಲೆ ರಾಮಾಯಣವನ್ನು ಕಣ್ತುಂಬಿಕೊಳ್ಳಿ, ಟಿಕೆಟ್ ದರ ಕೇವಲ 99 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಎಲ್ಲರಿಗೂ ಗುರುಪೂರಬ್ ಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದೆ. ಪೋಸ್ಟರ್‌ನಲ್ಲಿಯೂ ‘ಈ ಮಂಗಳವಾರ ಮತ್ತಷ್ಟು ಭವ್ಯವಾಗಲಿದೆ. ಟಿಕೆಟ್ ದರ 99 ರೂ.ನಿಂದ ಆರಂಭ’ ಎಂದು ಉಲ್ಲೇಖಿಸಲಾಗಿದೆ.
ಚಿತ್ರತಂಡದ ಈ ಘೋಷಣೆಯ ಬೆನ್ನಲ್ಲೇ ದೇಶದ ಬಹುತೇಕ ಚಿತ್ರಮಂದಿರಗಳು ‘ರಾಮಾಯಣ’ ಪ್ರದರ್ಶನದ ಟಿಕೆಟ್ ದರವನ್ನು 99 ರೂಪಾಯಿಗೆ ಇಳಿಸಿವೆ. ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಲ್ಲಿ ಈ ಹಿಂದೆ 2D ಪ್ರದರ್ಶನಗಳಿಗೆ 300ರಿಂದ 400 ರೂಪಾಯಿ ಇದ್ದ ಟಿಕೆಟ್ ದರ ಈಗ ಕೇವಲ 99 ರೂಪಾಯಿಗೆ ಲಭ್ಯವಿದೆ. ಬಹುತೇಕ ಕಡೆಗಳಲ್ಲಿ ಶೇ.50ರಿಂದ 60ರಷ್ಟು ದರ ಕಡಿತವಾಗಿದ್ದರೆ, ಕೆಲವು ಚಿತ್ರಮಂದಿರಗಳಲ್ಲಿ ಬರೋಬ್ಬರಿ ಶೇ.80ರಷ್ಟು ದರ ಇಳಿಕೆ ಮಾಡಲಾಗಿದೆ.
View this post on Instagram
ರೆಕ್ಲೈನರ್ ಸೀಟುಗಳಂತಹ ಪ್ರೀಮಿಯಂ ಟಿಕೆಟ್‌ಗಳ ದರ ಸ್ವಲ್ಪ ಹೆಚ್ಚಿದ್ದು, ಸುಮಾರು 199 ರೂಪಾಯಿಂದ 249 ರೂಪಾಯಿವರೆಗೆ ನಿಗದಿಯಾಗಿದೆ. ಅದೇ ರೀತಿ 3D ಮತ್ತು ಐಮ್ಯಾಕ್ಸ್ ಪ್ರದರ್ಶನಗಳ ದರದಲ್ಲೂ ಗಣನೀಯ ಇಳಿಕೆಯಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಈ ಹಿಂದೆ 500 ರೂಪಾಯಿಗೂ ಹೆಚ್ಚಿದ್ದ 3D ಶೋಗಳ ಟಿಕೆಟ್ ದರ ಈಗ 119 ರೂಪಾಯಿಯಿಂದ 249 ರೂಪಾಯಿವರೆಗೆ ಇದೆ. ಕೆಲವು ಪರದೆಗಳಲ್ಲಿ ಐಮ್ಯಾಕ್ಸ್ 3D ದರ 250 ರೂಪಾಯಿಗೆ ಇಳಿದಿದ್ದರೆ, ಇನ್ನು ಕೆಲವೆಡೆ 700-800 ರೂಪಾಯಿ ಪ್ರೀಮಿಯಂ ದರವನ್ನೇ ಉಳಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ‘ರಾಮಾಯಣ’ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಪುಟ್ಟಪರ್ತಿಗೆ ಭೇಟಿ ನೀಡಿದ ಸಾಯಿ ಪಲ್ಲವಿ
‘ಬುಕ್‌ಮೈಶೋ’ ಮಾಹಿತಿಯ ಪ್ರಕಾರ, ಈ ಕಡಿಮೆ ದರದ ಟಿಕೆಟ್‌ಗಳು ಕೇವಲ ಮಂಗಳವಾರಕ್ಕೆ ಮಾತ್ರ ಸೀಮಿತವಾಗಿರದೆ, ಈ ವಾರದ ಉಳಿದ ದಿನಗಳಲ್ಲೂ ಅನ್ವಯವಾಗಲಿವೆ. ಟಿಕೆಟ್ ದರವನ್ನು ಮತ್ತೆ ಯಾವಾಗ ಏರಿಸಲಾಗುವುದು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸದ್ಯ ಮೂರನೇ ವಾರದಲ್ಲಿರುವ ‘ರಾಮಾಯಣ’ ಚಿತ್ರವು ಭಾರತದಾದ್ಯಂತ ಸುಮಾರು 4000 ಪರದೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




