1980ರ ವೋಟರ್ ಐಡಿ ವಿವಾದಕ್ಕೆ ಮತ್ತೆ ರೆಕ್ಕೆಪುಕ್ಕ: ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ತಿರಸ್ಕರಿಸಿದ್ದ ಕೋರ್ಟ್‌ಗೆ ಛೀಮಾರಿ
ಸೋನಿಯಾ ಗಾಂಧಿಯವರ 1980ರ ಮತದಾರರ ಪಟ್ಟಿ ಸೇರ್ಪಡೆ ವಿವಾದಕ್ಕೆ ದೆಹಲಿ ವಿಶೇಷ ನ್ಯಾಯಾಲಯ ಮರುಜೀವ ನೀಡಿದೆ. ಭಾರತೀಯ ಪೌರತ್ವ ಪಡೆಯುವ ಮುನ್ನವೇ ನಕಲಿ ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗಿದೆ ಎಂಬ ಆರೋಪದ ಅರ್ಜಿಯನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ಕೋರ್ಟ್ ರದ್ದುಗೊಳಿಸಿದೆ. ಅಕ್ಟೋಬರ್ 29 ರಿಂದ ಕೆಳ ನ್ಯಾಯಾಲಯದಲ್ಲಿ ಹೊಸದಾಗಿ ವಿಚಾರಣೆ ನಡೆಯಲಿದೆ. ಇದು ಮಹತ್ವದ ರಾಜಕೀಯ ಪರಿಣಾಮ ಬೀರಲಿದೆ.

ನವದೆಹಲಿ,ಸೆಪ್ಟೆಂಬರ್ 21: ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಕಲಿ ದಾಖಲೆಗಳನ್ನು ಬಳಸಲಾಗಿದೆ ಎಂಬ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧದ ದೂರಿಗೆ ದೆಹಲಿ ನ್ಯಾಯಾಲಯದಲ್ಲಿ ಮರುಜೀವ ಬಂದಿದೆ. ಎಫ್‌ಐಆರ್ ದಾಖಲಿಸಲು ನಿರಾಕರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿರುವ ವಿಶೇಷ ನ್ಯಾಯಾಲಯ, ಪೊಲೀಸರಿಂದ ಸ್ಥಿತಿಗತಿ ವರದಿ ಪಡೆಯದೆ ಹೊರಡಿಸಲಾದ ಆ ತೀರ್ಪು ಕಾನೂನು ದೋಷಗಳಿಂದ ಕೂಡಿದೆ ಎಂದು ಆಕ್ಷೇಪಿಸಿ, ಸೆಪ್ಟೆಂಬರ್ 29 ರಿಂದ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಎಸಿಜೆಎಂ ನ್ಯಾಯಾಲಯಕ್ಕೆ ಸೂಚಿಸಿದೆ.
1980 ರ ದಶಕದ ಮತದಾರರ ಪಟ್ಟಿ ಸೇರ್ಪಡೆ ವಿವಾದದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯದಿಂದ ಹಿನ್ನಡೆಯಾಗಿದೆ. ಭಾರತದ ನಾಗರಿಕರಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಗೆ ಸೇರಿದ ಆರೋಪದ ಅರ್ಜಿಯನ್ನು ವಿವರಣೆ ಇಲ್ಲದೆ ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ಕೋರ್ಟ್ ರದ್ದುಪಡಿಸಿದೆ. ಎರಡೂ ಕಡೆಯ ವಾದಗಳನ್ನು ಹಾಗೂ ಪೊಲೀಸರ ಹೇಳಿಕೆಗಳನ್ನು ಕೂಲಂಕಷವಾಗಿ ಆಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕೆಳ ನ್ಯಾಯಾಲಯಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಸೋನಿಯಾ ಗಾಂಧಿ ಅವರಿಗೆ 1983 ರಲ್ಲಿ ಭಾರತೀಯ ಪೌರತ್ವ ಸಿಗುವ ಮುನ್ನವೇ 1980 ರ ನವದೆಹಲಿ ಮತದಾರರ ಪಟ್ಟಿಯಲ್ಲಿ ಅವರ ಹೆಸರಿತ್ತು ಎಂಬ ಹಳೆಯ ವಿವಾದ ಮತ್ತೆ ಕೋರ್ಟ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ದೆಹಲಿ ಪೊಲೀಸರಿಂದ ಪ್ರಕರಣದ ಸ್ಥಿತಿಗತಿ ವರದಿ ಪಡೆಯದೆ ಮತ್ತು ದೂರಿನಲ್ಲಿರುವ ನಕಲಿ ದಾಖಲೆ ಸೃಷ್ಟಿಯ ಗಂಭೀರ ಆರೋಪಗಳನ್ನು ಸಮಗ್ರವಾಗಿ ಪರಿಶೀಲಿಸದೆ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಆದೇಶವು ಕಾನೂನಿನ ಸ್ಪಷ್ಟ ದೋಷದಿಂದ ಕೂಡಿದೆ ಎಂದು ನ್ಯಾಯಾಲಯ ಹೇಳಿದೆ.
ದೂರುದಾರರ ಪ್ರಮುಖ ಆರೋಪ: ವಕೀಲ ವಿಕಾಸ್ ತ್ರಿಪಾಠಿ ಸಲ್ಲಿಸಿದ ಅರ್ಜಿಯ ಪ್ರಕಾರ, ಸೋನಿಯಾ ಗಾಂಧಿ ಅವರಿಗೆ 1983 ರಲ್ಲಿ ಭಾರತೀಯ ಪೌರತ್ವ ಸಿಕ್ಕಿತ್ತು. ಆದರೆ ಅದಕ್ಕೂ ಮೂರು ವರ್ಷ ಮುನ್ನ, ಅಂದರೆ 1980 ರ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರಿತ್ತು. ಬಳಿಕ 1982 ರಲ್ಲಿ ಹೆಸರನ್ನು ಕೈಬಿಟ್ಟು, 1983 ರಲ್ಲಿ ಮತ್ತೆ ಸೇರಿಸಲಾಗಿತ್ತು. ಭಾರತದ ನಾಗರಿಕರಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಆರೋಪದಡಿ ಎಫ್‌ಐಆರ್ ದಾಖಲಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.
ಮತ್ತಷ್ಟು ಓದಿ: ‘ಸೋನಿಯಾ ಗಾಂಧಿ ಆತ್ಮಕತೆಯನ್ನು ನಾವು ಪ್ರಕಟಿಸುವುದಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ
ಸೆಪ್ಟೆಂಬರ್ 29 ಕ್ಕೆ ಮರು ವಿಚಾರಣೆ: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 175(3) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮಾತ್ರ ಎಫ್‌ಐಆರ್ ಆದೇಶವನ್ನು ಪರಿಗಣಿಸಲು ಸಾಧ್ಯವಿರುವುದರಿಂದ, ಪೊಲೀಸರ ಹಾಗೂ ಎರಡೂ ಕಡೆಯ ವಾದಗಳನ್ನು ಆಲಿಸಿ ವಿವರವಾದ ತೀರ್ಪು ನೀಡುವಂತೆ ಎಸಿಜೆಎಂ ನ್ಯಾಯಾಲಯಕ್ಕೆ ಈ ಕಡತವನ್ನು ಹಿಂತಿರುಗಿಸಲಾಗಿದೆ.
ಸೋನಿಯಾ ಗಾಂಧಿ ಪೌರತ್ವ ಇತಿಹಾಸ: ಇಟಲಿ ಮೂಲದ ಸೋನಿಯಾ ಗಾಂಧಿ ಅವರು 1968 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ವಿವಾಹವಾದರು. ನಂತರ ಅವರು 1983 ರ ಏಪ್ರಿಲ್‌ನಲ್ಲಿ ಭಾರತೀಯ ಪೌರತ್ವವನ್ನು ಅಧಿಕೃತವಾಗಿ ಪಡೆದುಕೊಂಡರು. ಆದರೆ 1980 ರ ಮತದಾರರ ಪಟ್ಟಿಯ ನಮೂದುಗಳನ್ನು ವಿರೋಧ ಪಕ್ಷಗಳು ಮತ್ತು ಅರ್ಜಿದಾರರು ಹಲವು ದಶಕಗಳಿಂದ ರಾಜಕೀಯ ಹಾಗೂ ಕಾನೂನು ಅಸ್ತ್ರವಾಗಿ ಬಳಸುತ್ತಲೇ ಬಂದಿದ್ದಾರೆ.
ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಆಕ್ಷೇಪಣೆಗಳನ್ನು ಜನಪ್ರತಿನಿಧಿ ಕಾಯ್ದೆ ಅನ್ವಯ ಭಾರತೀಯ ಚುನಾವಣಾ ಆಯೋಗವೇ ನಿರ್ಧರಿಸಬೇಕಿದ್ದು, ಕ್ರಿಮಿನಲ್ ನ್ಯಾಯಾಲಯಗಳು ನೇರವಾಗಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂಬ ಆಧಾರದ ಮೇಲೆ ಈ ಹಿಂದೆ ಮ್ಯಾಜಿಸ್ಟ್ರೇಟ್ ಅರ್ಜಿಯನ್ನು ತಿರಸ್ಕರಿಸಿದ್ದರು. ಆದರೆ, ‘ನಕಲಿ ದಾಖಲೆ ಸೃಷ್ಟಿ’ಎಂಬುದು ಭಾರತೀಯ ದಂಡ ಸಂಹಿತೆಯಡಿ ಅಪರಾಧವಾಗಿರುವುದರಿಂದ ನ್ಯಾಯಾಲಯವು ಅದರ ತನಿಖೆಯನ್ನು ಕಡೆಗಣಿಸುವಂತಿಲ್ಲ ಎಂದು ಸೆಷನ್ಸ್ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮುಂದಿನ ರಾಜಕೀಯ ಪರಿಣಾಮ: ಮುಂಬರುವ ಮಹತ್ವದ ಚುನಾವಣೆಗಳ ಹೊಸ್ತಿಲಿನಲ್ಲಿ ಗಾಂಧಿ ಕುಟುಂಬದ ವಿರುದ್ಧದ ಈ ಹಳೆಯ ವಿವಾದ ಮತ್ತೆ ನ್ಯಾಯಾಲಯದ ಅಂಗಳದಲ್ಲಿ ಜೀವ ಪಡೆದಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೊಸ ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




