AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಮಂದಿರ ದೇಣಿಗೆ ಕಳ್ಳತನದ ಎಲ್ಲ ಆರೋಪಿಗಳ ಗುರುತು ಪತ್ತೆ; ಸುಪ್ರೀಂ ಕೋರ್ಟ್‌ಗೆ ಎಸ್‍ಐಟಿ ಮಾಹಿತಿ

ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರದಲ್ಲಿ ಭಕ್ತರು ನೀಡಿದ್ದ ಕಾಣಿಕೆ ಹಣ ಹಾಗೂ ವಸ್ತುವಿನ ದುರುಪಯೋಗಕ್ಕೆ ಸಂಬಂಧಿಸಿದಂತೆ ನಡೆಸಲಾದ ತನಿಖೆಯಲ್ಲಿ 105 ಬಾರಿ ಕಾಣಿಕೆ ಹಣ ಕಳವು ನಡೆದಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ವಿಶೇಷ ತನಿಖಾ ತಂಡ (ಎಸ್​ಐಟಿ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ತನ್ನ ಸ್ಟೇಟಸ್ ವರದಿಯಲ್ಲಿ ತಿಳಿಸಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಸ್‍ಐಟಿ  ತನಿಖೆಯ ಪ್ರಮುಖ ವಿವರಗಳನ್ನು ಮಂಡಿಸಿದ್ದಾರೆ.

ರಾಮಮಂದಿರ ದೇಣಿಗೆ ಕಳ್ಳತನದ ಎಲ್ಲ ಆರೋಪಿಗಳ ಗುರುತು ಪತ್ತೆ; ಸುಪ್ರೀಂ ಕೋರ್ಟ್‌ಗೆ ಎಸ್‍ಐಟಿ ಮಾಹಿತಿ
ರಾಮಮಂದಿರImage Credit source: PTI
ಸುಷ್ಮಾ ಚಕ್ರೆ
|

Updated on:Sep 21, 2026 | 5:22 PM

Share

ನವದೆಹಲಿ, ಸೆಪ್ಟೆಂಬರ್ 21: ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಕಾಣಿಕೆ ಹಣ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತನಿಖೆಯು ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 25ರೊಳಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ವಿಶೇಷ ನ್ಯಾಯಾಧೀಶರ ಮುಂದೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದರು. ಈ ಪ್ರಕರಣವನ್ನು ಸಾಬೀತುಪಡಿಸಲು ಎಸ್‌ಐಟಿ ಬಳಿ ಸಾಕಷ್ಟು ಪ್ರಮಾಣದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳಿವೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ತನ್ನ ತನಿಖೆಯ ಪ್ರಗತಿಯನ್ನು ವಿವರಿಸುವ ವರದಿಯನ್ನು ಸಲ್ಲಿಸಿತು. ನ್ಯಾಯಾಲಯದ ಆದೇಶದ ಪ್ರಕಾರ, ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಸಾಕ್ಷ್ಯಗಳನ್ನು ವಿಶ್ಲೇಷಿಸಲಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೆ, ಸಾಫ್ಟ್​​ವೇರ್ ಮೂಲಕ ರಸೀದಿಗಳನ್ನು ನೀಡಲಾಗುತ್ತಿದ್ದು, ಆ ವಸ್ತುಗಳನ್ನು ಎಸ್‌ಬಿಐ ಲಾಕರ್‌ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ ಎಂದು ನ್ಯಾಯಾಲಯ ದಾಖಲಿಸಿಕೊಂಡಿದೆ.

ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ಚಂಪತ್ ರಾಯ್, ಅನಿಲ್ ಮಿಶ್ರಾಗೆ ಎಸ್​ಐಟಿ ಕ್ಲೀನ್ ಚಿಟ್

“ತನಿಖೆಯು ಬಹುತೇಕ ಪೂರ್ಣಗೊಂಡಿದ್ದು, ತನಿಖೆ ಮುಕ್ತಾಯಗೊಂಡ ನಂತರ ಸೂಕ್ತ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು” ಎಂದು ಎಸ್‌ಐಟಿ ಸಲ್ಲಿಕೆಯನ್ನು ದಾಖಲಿಸಿಕೊಳ್ಳುವಾಗ ನ್ಯಾಯಾಲಯ ತಿಳಿಸಿತು. ಇದಕ್ಕೂ ಮುನ್ನ, ಸೆಪ್ಟೆಂಬರ್ 18ರಂದು, ರಾಮಮಂದಿರದ ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ 8 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿತ್ತು.

ಬಂಧಿತ 8 ಆರೋಪಿಗಳೆಂದರೆ, ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಮಾಶಂಕರ್ ಅಲಿಯಾಸ್ ತಿನ್ನು ಯಾದವ್. ದೇವಾಲಯದ ಕಾಣಿಕೆ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಈ ಆರೋಪಿಗಳನ್ನು ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ಎಸ್‌ಐಟಿಯ ಪ್ರಾಥಮಿಕ ವರದಿಯ ನಂತರ ಜೂನ್ 25ರಂದು ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಪ್ರಸ್ತುತ ಇವರೆಲ್ಲರೂ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಹಗರಣದ ತನಿಖೆಯ ಎಸ್​ಐಟಿಗೆ ಚಾರ್ಟರ್ಡ್ ಅಕೌಂಟೆಂಟ್ ನೇಮಿಸಿ; ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

105 ಸಿಸಿಟಿವಿ ದೃಶ್ಯಾವಳಿಗಳ ಸಾಕ್ಷ್ಯ:

ಕಾಣಿಕೆ ಎಣಿಕೆ ಕೊಠಡಿ ಮತ್ತು ಸ್ಟ್ರಾಂಗ್ ರೂಮ್ ಭಾಗದ ಸಿಸಿಟಿವಿ ದೃಶ್ಯಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ ಕನಿಷ್ಠ 105 ಬಾರಿ ಹಣ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ಕಾಣಿಕೆ ಹಣವನ್ನು ಕದ್ದು ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ. ಎಸ್‍ಐಟಿ ಕಾರ್ಯಾಚರಣೆ ವೇಳೆ ಆರೋಪಿಗಳಿಂದ ಇಲ್ಲಿಯವರೆಗೆ 79.85 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಭದ್ರತಾ ನಿಯಮಗಳ ಉಲ್ಲಂಘನೆ:

ದೇವಾಲಯದ ಟ್ರಸ್ಟ್ ಮತ್ತು ಬ್ಯಾಂಕ್ ನಿಗದಿಪಡಿಸಿದ್ದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ ಕಟ್ಟುನಿಟ್ಟಿನ ಭದ್ರತೆ ಮತ್ತು ಮೇಲ್ವಿಚಾರಣೆ ನಡೆಸದಿರುವುದೇ ಈ ಕಳವಿಗೆ ಮುಖ್ಯ ಕಾರಣ ಎಂದು ಎಸ್‍ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಕಾಣಿಕೆ ಹುಂಡಿಗಳನ್ನು ವ್ಯವಸ್ಥಿತವಾಗಿ ಟ್ರ್ಯಾಕ್ ಮಾಡದಿರುವುದು, ಎಣಿಕೆ ಕೊಠಡಿಯಲ್ಲಿ ಅಗತ್ಯ ಸಿಸಿಟಿವಿ ನಿಯಂತ್ರಣ ಮತ್ತು ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯ ಈ ಕೃತ್ಯಕ್ಕೆ ದಾರಿಯಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Mon, 21 September 26

Follow Us