ದೆಹಲಿ: ಸೋನಿಯಾ ಗಾಂಧಿ (Sonia Gandhi) ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 5 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೆ ನಾಯಕತ್ವ ಬದಲಾವಣೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಸುಮಾರು 4 ಗಂಟೆಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ(CWC Meeeting) ಸೋನಿಯಾ ಅವರೇ ಅಧ್ಯಕ್ಷರಾಗಿ ಮುಂದುವರಿಯಲು ನಿರ್ಧಾರ ಕೈಗೊಳ್ಳಲಾಗಿದೆ. ಸೋನಿಯಾ ಗಾಂಧಿ ಅವರ ಜತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi), ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೆಸಿ ವೇಣುಗೋಪಾಲ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಪಿ ಚಿದಂಬರಂ ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸಿದ್ದರು. 23 ನಾಯಕರ ಗುಂಪಿನಿಂದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ ಮತ್ತು ಮುಕುಲ್ ವಾಸ್ನಿಕ್ ಮಾತ್ರ ಈ ಸಭೆಯಲ್ಲಿ ಭಾಗವಹಿಸಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಭೆಗೆ ಹಾಜರಾಗಿರಲಿಲ್ಲ. ಪಕ್ಷದ ಹಿರಿಯ ನಾಯಕ ಎ ಕೆ ಆ್ಯಂಟನಿ ಅವರು ಕೊವಿಡ್ ಪಾಸಿಟಿವ್ ಆಗಿದ್ದರಿಂದ ಸಭೆಗೆ ಹಾಜರಿರಲಿಲ್ಲ.
Congress interim president Sonia will lead us & will take future steps. We all have faith in her leadership: Congress leader Mallikarjun Kharge after the party’s working committee meeting pic.twitter.com/1l5ahufDjd
— ANI (@ANI) March 13, 2022
‘ಸೋನಿಯಾ ಗಾಂಧಿ ನಮ್ಮನ್ನು ಮುನ್ನಡೆಸುತ್ತಾರೆ’
ಪಕ್ಷದ ಕಾರ್ಯಕಾರಿ ಸಮಿತಿ ಸಭೆಯ ನಂತರ ಮಾತನಾಡಿದ ಖರ್ಗೆ, ”ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ನಮ್ಮನ್ನು ಮುನ್ನಡೆಸಲಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಆಕೆಯ ನಾಯಕತ್ವದಲ್ಲಿ ನಮಗೆಲ್ಲರಿಗೂ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಎಐಸಿಸಿ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ”ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ಬಗ್ಗೆ ವಿವರವಾದ ಚರ್ಚೆ ನಡೆಸಲಾಯಿತು. ನಾವು ವಿಷಯಗಳನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಮತ್ತು ಮುಂಬರುವ ಚುನಾವಣೆಗೆ ನಾವು ಹೇಗೆ ತಯಾರಿ ನಡೆಸುತ್ತೇವೆ ಎಂದು ಚರ್ಚಿಸಿದ್ದೇವೆ ಎಂದಿದ್ದಾರೆ.
ಪಕ್ಷವು ಶೀಘ್ರದಲ್ಲೇ “ಚಿಂತನ್ ಶಿವರ್” (ಚಿಂತನ- ಮಂಥನ ಕಾರ್ಯಕ್ರಮ) ನಡೆಸಲಿದೆ ಎಂದು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾರ್ಯಕಾರಿ ಸಮಿತಿಯ ಸಂಜೆಯ ಸಭೆಯ ನಂತರ ಮೂಲಗಳು ತಿಳಿಸಿವೆ. ಸಭೆಯಲ್ಲಿ 50 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ಚುನಾವಣೆ ನಡೆದ ಐದು ರಾಜ್ಯಗಳಾದ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಮಣಿಪುರ ಮತ್ತು ಪಂಜಾಬ್‌ನ ಕಾಂಗ್ರೆಸ್‌ನ ಶಾಸಕರು ಮತ್ತು ಸಂಸದರು ಭಾಗವಹಿಸಿದ್ದರು.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಭಾಷಣದಲ್ಲಿ ಪಕ್ಷಕ್ಕೆ ಅನಿಸಿದರೆ ನಾವು ಮೂವರೂ (ನಾನು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ) ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು, ಆದರೆ ಸಿಡಬ್ಲ್ಯುಸಿ ಇದನ್ನು ಸರ್ವಾನುಮತದಿಂದ ತಿರಸ್ಕರಿಸಿದೆ ಎಂದು ಮೂಲಗಳು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
2024ರ ಲೋಕಸಭೆ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗಳಲ್ಲಿ ಚುನಾವಣಾ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಸಂಪೂರ್ಣ ಸಿದ್ಧವಾಗಿದೆ. ಸಿಡಬ್ಲ್ಯುಸಿ ಸರ್ವಾನುಮತದಿಂದ ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ತನ್ನ ನಂಬಿಕೆಯನ್ನು ಪುನರುಚ್ಚರಿಸಿತು ಮತ್ತು ಅವರನ್ನು ಮುನ್ನಡೆಸಲು ವಿನಂತಿಸಿತು ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಪಂಜಾಬ್ನಲ್ಲಿ ಅಧಿಕಾರ ಕಳೆದುಕೊಂಡಿತು, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿಯೂ ಪರಾಭವಗೊಂಡಿತು. ರಾಜಕೀಯವಾಗಿ ನಿರ್ಣಾಯಕ ಉತ್ತರ ಪ್ರದೇಶದಲ್ಲಿ ಪಕ್ಷದ ಲೆಕ್ಕಾಚಾರವು ಅತ್ಯಂತ ಕೆಳಮಟ್ಟಕ್ಕೆ ಕುಸಿಯಿತು. ಸೋನಿಯಾ ಗಾಂಧಿ ಕೆಲ ಸಮಯದಿಂದ ಸಕ್ರಿಯವಾಗಿ ಪ್ರಚಾರ ಮಾಡದಿದ್ದರೂ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಾಗಿದ್ದರು. ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಸಹೋದರ-ಸಹೋದರಿ ಜೋಡಿಯೂ ಪ್ರಮುಖ ಪಾತ್ರ ವಹಿಸಿತ್ತು.
ಇದನ್ನೂ ಓದಿ: CWC meeting ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟ ಸಾಧ್ಯತೆ
Published On - 9:16 pm, Sun, 13 March 22