ಕಾಂಗ್ರೆಸ್​ ಹಿಡಿತದಿಂದ ಜಾರಿತು ಪಂಜಾಬ್; ಇನ್ನು ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ

ಕಾಂಗ್ರೆಸ್​ ಹಿಡಿತದಿಂದ ಜಾರಿತು ಪಂಜಾಬ್; ಇನ್ನು ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ
ಸೋನಿಯಾ ಗಾಂಧಿ - ರಾಹುಲ್ ಗಾಂಧಿ

ನಿರ್ಣಾಯಕ ಚುನಾವಣೆಯಲ್ಲೂ ಗೆಲ್ಲಲಾಗದೆ ಕೈಗೆ ಸಿಕ್ಕ ರಾಜ್ಯಗಳನ್ನೂ ಬಿಟ್ಟುಕೊಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಸರಿಯಾದ ನಾಯಕತ್ವ ಇಲ್ಲದೇ ಇರುವುದು ಮತ್ತು ಪಕ್ಷದೊಳಗಿನ ಸಂಘರ್ಷ ಪ್ರತಿ ರಾಜ್ಯದಿಂದ ಕಾಂಗ್ರೆಸ್ ಅನ್ನು ಅಳಿಸಿಹಾಕುತ್ತಿದೆ.

Rashmi Kallakatta

|

Mar 10, 2022 | 3:35 PM

ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ ಮತ್ತು ಮಣಿಪುರ ವಿಧಾನಸಭಾ ಚುನಾವಣೆಯ (Assembly Elections 2022) ಫಲಿತಾಂಶ ಹೊರಬೀಳುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ (Congress) ಮಂಕಾಗುತ್ತಿರುವುದು ಸ್ಪಷ್ಟವಾಗಿದೆ. ನಿರ್ಣಾಯಕ ಚುನಾವಣೆಯಲ್ಲೂ ಗೆಲ್ಲಲಾಗದೆ ಕೈಗೆ ಸಿಕ್ಕ ರಾಜ್ಯಗಳನ್ನೂ ಬಿಟ್ಟುಕೊಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಸರಿಯಾದ ನಾಯಕತ್ವ ಇಲ್ಲದೇ ಇರುವುದು ಮತ್ತು ಪಕ್ಷದೊಳಗಿನ ಸಂಘರ್ಷ ಪ್ರತಿ ರಾಜ್ಯದಿಂದ ಕಾಂಗ್ರೆಸ್ ಅನ್ನು ಅಳಿಸಿಹಾಕುತ್ತಿದೆ. ಪ್ರತಿಸ್ಪರ್ಧಿಗಳಿಲ್ಲದ ದೇಶದ ಅತಿದೊಡ್ಡ ಶಕ್ತಿಗಳಲ್ಲಿ ಒಂದಾಗಿದ್ದ ಕಾಂಗ್ರೆಸ್ ಈಗ ಕೇವಲ ಎರಡು ರಾಜ್ಯಗಳಿಗೆ (ರಾಜಸ್ಥಾನ ಮತ್ತು ಛತ್ತೀಸ್‌ಗಢ) ಸೀಮಿತವಾಗಿದೆ. ಸದೃಢ ನಾಯಕತ್ವದ ಕೊರತೆ ಇಂದಿಗೂ ಕಾಂಗ್ರೆಸ್​​ನ ಶಾಪ. 2017ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಕಾರ್ಯಕರ್ತರಲ್ಲಿ ಉತ್ಸಾಹ, ಭರವಸೆ ಮೂಡಿತ್ತು. ಆದರೆ 2019ರ ಚುನಾವಣೆಯಲ್ಲಿ ಆದ ಭಾರೀ ಹಿನ್ನಡೆಯ ಸಂಪೂರ್ಣ ಹೊಣೆ ಹೊತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಪಕ್ಷವನ್ನು ಅನಾಥವಾಗಿಸಿದರು. ನಾಯಕತ್ವ ಇಲ್ಲದೇ ಇರುವ ಕಾಂಗ್ರೆಸ್ ಅನ್ನು ಮುನ್ನಡೆಸಲು ಸೋನಿಯಾ ಗಾಂಧಿ ಮರಳಿ ಬಂದರು. ಅಧಿಕಾರ ವಹಿಸಿಕೊಳ್ಳುವಾಗಲೇ ಅವರಿಗೆ ‘ಹಂಗಾಮಿ ಅಧ್ಯಕ್ಷ’ ಎಂಬ ಬಿರುದು ನೀಡಲಾಗಿತ್ತು. ಶೀಘ್ರದಲ್ಲೇ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಘೋಷಿಸಲಾಯಿತು. ರಾಷ್ಟ್ರೀಯ ನಾಯಕತ್ವ ಮತ್ತು ಪದಾಧಿಕಾರಿಗಳ ಬೇಡಿಕೆಗೆ ರಾಹುಲ್ ಗಾಂಧಿ ಮಣಿಯಲಿಲ್ಲ. ರಾಹುಲ್ ವಯನಾಡ್ ಸಂಸದರು ಮಾತ್ರ ಎಂಬಂತೆ ಉಳಿದುಕೊಂಡರು.

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಇರುವ ಹಿರಿಯ ನಾಯಕರನ್ನೂ ಒಗ್ಗೂಡಿಸಲು ಸಾಧ್ಯವಾಗದಿರುವುದು ಕಾಂಗ್ರೆಸ್ಸಿನ ಮತ್ತೊಂದು ದೊಡ್ಡ ಸಮಸ್ಯೆ. ಏತನ್ಮಧ್ಯೆ, ನಾಯಕರಾದ ಕಪಿಲ್ ಸಿಬಲ್, ಶಶಿ ತರೂರ್ ಮತ್ತು ಮನೀಶ್ ತಿವಾರಿ ಸೇರಿದಂತೆ ಪಕ್ಷದೊಳಗಿನ 23 ಹಿರಿಯ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಕಾಂಗ್ರೆಸ್‌ಗೆ ಸ್ಪಷ್ಟ ಮತ್ತು ಸಕ್ರಿಯ ಅಧ್ಯಕ್ಷರನ್ನು ಹೊಂದಬೇಕೆಂದು ಪತ್ರದಲ್ಲಿ ಕರೆ ನೀಡಲಾಗಿತ್ತು. ಇದು ಪಕ್ಷದೊಳಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪಕ್ಷವು ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವ ಹೊತ್ತಲ್ಲಿ ಈ ಪತ್ರ ಬರಬಾರದಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದರು . ಅದೇ ವೇಳೆ ನಾಯಕರ ಕಾರ್ಯವೈಖರಿಯಿಂದ ಬಿಜೆಪಿಗೆ ಲಾಭವಾಗುತ್ತಿದೆ ಎಂಬ ಸುಳಿವು ನೀಡಿದರು. ಪಕ್ಷದ ಅಧ್ಯಕ್ಷರು ಆಸ್ಪತ್ರೆಯಲ್ಲಿದ್ದಾಗ ಬರೆದ ಪತ್ರ ಸರಿಯಾದ ಕ್ರಮವಲ್ಲ. ಪಕ್ಷದೊಳಗಿನ ವಿಷಯಗಳು ಮಾಧ್ಯಮಗಳಲ್ಲಿ ಅಲ್ಲ, ಕಾರ್ಯಕಾರಿ ಸಮಿತಿ ಮತ್ತು ಪಕ್ಷದಲ್ಲಿ ಚರ್ಚೆಯಾಗಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದು ನಂತರ ಮುಖಂಡರ ಅಸಮಾಧಾನಕ್ಕೆ ಕಾರಣವಾಯಿತು. ಇದರ ಭಾಗವಾಗಿ ಚುನಾವಣಾ ಪ್ರಚಾರದ ವೇಳೆ ಹಲವರನ್ನು ಹೊರಗಿಡಲಾಗಿದೆ ಎಂಬ ವರದಿಗಳು ಬಂದಿದ್ದವು.

ನಾಯಕತ್ವದ ವಿವಾದದಲ್ಲಿ ರಾಜ್ಯಗಳನ್ನು ಕೈಬಿಡುವ ವಾಡಿಕೆಯನ್ನು ಈ ಬಾರಿಯೂ ಕಾಂಗ್ರೆಸ್ ಮುರಿದಿಲ್ಲ. ಈ ಬಾರಿ ನಾಯಕತ್ವದ ವಿವಾದದಿಂದಲೇ ಕಾಂಗ್ರೆಸ್ ಪಂಜಾಬ್ ನಲ್ಲಿ ಸೋತಿದ್ದು. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನಡುವಿನ ವಿವಾದವನ್ನು ಹೇಗೆ ಬಗೆಹರಿಸಬೇಕೆಂಬುದರ ಬಗ್ಗೆ ಕಾಂಗ್ರೆಸ್ ನಾಯಕತ್ವಕ್ಕೆ ಗೊತ್ತಿರಲಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಪಕ್ಷದಲ್ಲಿ ಸದಾ ಧ್ವನಿಯಾಗಿದ್ದ ಸಿಧು ಅವರನ್ನು ರಕ್ಷಿಸಲು ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಅಮರಿಂದರ್ ಅವರನ್ನು ಬದಲಿಸಿದಾಗ ಪಂಜಾಬ್ ಜನತೆ ಕಾಂಗ್ರೆಸ್ ಅನ್ನು ಕೈಬಿಟ್ಟರು. ಅಮರಿಂದರ್ ಕಾಂಗ್ರೆಸ್ ತೊರೆದು ಪಂಜಾಬ್ ಲೋಕ್ ಕಾಂಗ್ರೆಸ್ ಪಾರ್ಟಿ ಆರಂಭಿಸಿ ಬಿಜೆಪಿ ಜತೆ ನಿಂತರೂ ರೂ ಪಂಜಾಬ್ ಜನತೆ ಬಿಜೆಪಿಗೆ ಹತ್ತಿರವಾಗಿಲ್ಲ. ನಾಯಕತ್ವದ ಕಿತ್ತಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದಂತೆ ಪಕ್ಷಗಳಿಗೆ ಇದು ಲಾಭ ತಂದಿದೆ. ನಾಯಕತ್ವ ಮತ್ತು ಇತರರೊಂದಿಗಿನ ವಿವಾದಗಳು ಕಾಂಗ್ರೆಸ್‌ನಿಂದ ನಾಯಕರನ್ನು ಆರಾಮವಾಗಿ ತೆಗೆದುಹಾಕಲು ಕಾರಣವಾಯಿತು.

ಇಬ್ಬರ ಜಗಳದಲ್ಲಿ ಲಾಭಗಳಿಸಿದ್ದು ಆಮ್ ಆದ್ಮಿ ಪಕ್ಷ. ಆಮ್ ಆದ್ಮಿ ಪಕ್ಷವು ರಾಷ್ಟ್ರ ರಾಜಧಾನಿ ದೆಹಲಿಯ ನಂತರ ಪಂಜಾಬ್‌ನಲ್ಲಿ ಹಿಡಿತ ಸಾಧಿಸುತ್ತಿರುವಾಗ, ಕಾಂಗ್ರೆಸ್ ಕೇವಲ ಎರಡು ರಾಜ್ಯಗಳಿಗೆ ಸೀಮಿತವಾಗಿದೆ. ಇತ್ತ, ಪ್ರಿಯಾಂಕಾ ಗಾಂಧಿ ಮುಂಚೂಣಿಯಲ್ಲಿದ್ದು ಈ ಬಾರಿ ಪ್ರಚಾರದ ನೇತೃತ್ವ ವಹಿಸಿದ್ದರು. ರಾಹುಲ್ ಗಾಂಧಿ ಕೂಡ ಸೇರಿಕೊಂಡರು. ರಾಜ್ಯಾದ್ಯಂತ ಪ್ರಚಾರಾಂದೋಲನದಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದರೂ ಕಾಂಗ್ರೆಸ್‌ಗೆ ಜನರ ಮನ ಮುಟ್ಟಲು ಸಾಧ್ಯವಾಗಿಲ್ಲ.

ಗೋವಾದಲ್ಲಿ ನಾಯಕರನ್ನೂ ನಂಬಲು ಸಾಧ್ಯವಿಲ್ಲ ಎಂಬುದನ್ನು ತೋರಿಸುವ ಕಾರ್ಯಗಳೂ ಕಾಂಗ್ರೆಸ್​​ಗೆ ಮುಳುವಾಗಿದೆ. ಚುನಾವಣೆಗೂ ಮುನ್ನವೇ ಅಭ್ಯರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ನಾಯಕರಿಗೂ ನಂಬಿಕೆ ಇಲ್ಲದ ಪರಿಸ್ಥಿತಿಯಲ್ಲಿ ಸರದಿಯವರು ಯಾರನ್ನು ನಂಬಬೇಕು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿತ್ತು.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಹೆಸರಾಗಿದ್ದ ಅಮೇಠಿ ಮತ್ತು ರಾಯ್‌ಬರೇಲಿ ಕಾಂಗ್ರೆಸ್​​​ನ್ನು ಬಹಳ ಹಿಂದೆಯೇ ಕೈ ಬಿಟ್ಟಿದ್ದಾರೆ . ಜನರು ನಿಧಾನವಾಗಿ ಕಾಂಗ್ರೆಸ್ ನಿಂದ ದೂರ ಸರಿಯುತ್ತಿದ್ದಾರೆ ಎನ್ನುವುದನ್ನು ಚುನಾವಣಾ ಫಲಿತಾಂಶ ಸೂಚಿಸುತ್ತಿದೆ. ಈ ಬಾರಿ ಗೋವಾವನ್ನು ಕಾಂಗ್ರೆಸ್ ಕೈ ಸೇರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನ ನಿರೀಕ್ಷೆ ಹುಸಿಯಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ರೈತ ಹೋರಾಟ, ಹಾಥರಸ್ ಘಟನೆಯಂತಹ ಜನರ ಮುಂದಿರುವ ಹಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆಯೇ ಎಂಬ ಅನುಮಾನವೂ ಮೂಡಿದೆ. ಕಾಂಗ್ರೆಸ್ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದರೂ ತಳಮಟ್ಟದಲ್ಲಿ ಸೃಷ್ಟಿಸಿದ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದೇ ಅವನತಿಗೆ ಕಾರಣ.

ಎಡವಿ ಮುಗ್ಗರಿಸಿ ಮತ್ತೆ ಎದ್ದು ನಿಂತ ಸಂದರ್ಭಗಳೂ ಕಾಂಗ್ರೆಸ್​​ಗೆ ಉಂಟಾಗಿದೆ. ಆದರೆ ಇತ್ತೀಚಿನ ಸಂದರ್ಭಗಳು ಅದನ್ನೂ ಹುಸಿ ಮಾಡುವಂತಿದೆ. ಕಾಂಗ್ರೆಸ್ ಗೆ ಉತ್ತಮ ನಾಯಕತ್ವ ಸಿಕ್ಕಿದರೆ ಇದು ಸರಿಹೋಗಬಹುದು ಎಂದು ಕೈ ಕಾರ್ಯಕರ್ತರು ನಂಬುತ್ತಾರೆ. ಆದರೆ ವೇಗವಾದ ರಾಜಕೀಯ ಓಟದಲ್ಲಿ ಮುನ್ನುಗ್ಗಬೇಕಾದರೆ ಸಂಯಮದ ಜತೆ ಉತ್ತಮ ನಾಯಕತ್ವ ಮತ್ತು ಪೂರ್ವ ಸಿದ್ಧತೆಗಳೂ ಅತ್ಯಗತ್ಯ.

ಇದನ್ನೂ ಓದಿ: Punjab Elections 2022 ಪಂಜಾಬ್​​ನಲ್ಲಿ ಕೇಜ್ರಿವಾಲ್​​​ ನೇತೃತ್ವದ ಆಮ್ ಆದ್ಮಿ ಪಕ್ಷ ಗೆಲುವಿನ ನಗು ಬೀರಲು ಕಾರಣವಾದ 5 ಸಂಗತಿಗಳಿವು

Follow us on

Related Stories

Most Read Stories

Click on your DTH Provider to Add TV9 Kannada