Budget Session: ಇಂದಿನಿಂದ ಸಂಸತ್ನಲ್ಲಿ ಬಜೆಟ್ ಅಧಿವೇಶನ ಪುನರಾರಂಭ: ಉಕ್ರೇನ್ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ಸಾಧ್ಯತೆ
Parliament: ಅಧಿವೇಶನದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಉಕ್ರೇನ್ ಯುದ್ಧವನ್ನು ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇಂದಿನಿಂದ ಮತ್ತೆ ಅರಂಭವಾಗಲಿರುವ ಅಧಿವೇಶನದ ಬಗ್ಗೆ ನೀವು ತಿಳಿಯಬೇಕಿರುವ 10 ಮುಖ್ಯ ಮಾಹಿತಿ ಇಲ್ಲಿದೆ.
ಸಂಸತ್ತಿನಲ್ಲಿ ಬಜೆಟ್ ಅಧಿವೇಶನವು (Parliament Session) ಇಂದಿನಿಂದ (ಮಾರ್ಚ್ 14) ಮತ್ತೆ ಆರಂಭವಾಗಲಿದೆ. ಬಿಜೆಪಿಯು ಐದು ರಾಜ್ಯಗಳಲ್ಲಿ ಮೇಲುಗೈ ಸಾಧಿಸಿದ ನಂತರ ನಡೆಯುತ್ತಿರುವ ಆರಂಭವಾಗುತ್ತಿರುವ ಕಲಾಪದಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆಗಳಿವೆ. ಈ ಗೆಲುವನ್ನು ಬಿಜೆಪಿಯು ಜನಪರ ಮತ್ತು ಅಭಿವೃದ್ಧಿ ಪರ ರಾಜಕಾರಣಕ್ಕೆ ಸಿಕ್ಕ ಮನ್ನಣೆ ಎಂದು ವ್ಯಾಖ್ಯಾನಿಸಿದೆ. ಸೋಲಿನ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಭಾನುವಾರ ದೆಹಲಿಯಲ್ಲಿ ಆತ್ಮಾವಲೋಕನ ಸಭೆ ಮತ್ತು ಸಂಸದೀಯ ಪಕ್ಷದ ಸಭೆ ನಡೆಸಿತು. ಅಧಿವೇಶನದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಉಕ್ರೇನ್ ಯುದ್ಧವನ್ನು ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿತು. ಬಜೆಟ್ ಅಧಿವೇಶನವು ಈ ಮೊದಲು ಫೆಬ್ರುವರಿ 1ರಿಂದ 11ರವರೆಗೆ ನಡೆದಿತ್ತು. ಇಂದಿನಿಂದ ಮತ್ತೆ ಅರಂಭವಾಗಲಿರುವ ಅಧಿವೇಶನದ ಬಗ್ಗೆ ನೀವು ತಿಳಿಯಬೇಕಿರುವ 10 ಮುಖ್ಯ ಮಾಹಿತಿ ಇಲ್ಲಿದೆ.
- ಭಾರತದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಈ ಬಾರಿ ಸಂಸತ್ ಅಧಿವೇಶನದಲ್ಲಿ ನಿರ್ಬಂಧಗಳು ಮೊದಲಿನಷ್ಟು ಇರುವ ಸಾಧ್ಯತೆ ಕಡಿಮೆ. ಬಜೆಟ್ ಅಧಿವೇಶನವು ಆರಂಭವಾದಾಗ ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ವ್ಯಾಪಕವಾಗಿ ಹರಡುತ್ತಿತ್ತು.
- ಸೋನಿಯಾ ಗಾಂಧಿ ಅವರೊಂದಿಗೆ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ನಾವು ನಿರುದ್ಯೋಗ, ಹಣದುಬ್ಬರ ಮತ್ತು ಕನಿಷ್ಠ ಬೆಂಬಲ ಬೆಲೆ ವಿಚಾರವನ್ನು ಪ್ರಧಾನವಾಗಿ ಪ್ರಸ್ತಾಪಿಸಲಿದ್ದೇವೆ. ಉಕ್ರೇನ್ನಿಂದ ಬರುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಯಕಲ್ಪ ಒದಗಿಸುವ ವಿಚಾರದ ಬಗ್ಗೆಯೂ ಮಾತನಾಡುತ್ತೇವೆ ಎಂದರು.
- ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಜಮ್ಮು ಮತ್ತು ಕಾಶ್ಮೀರದ ಬಜೆಟ್ ಅನ್ನೂ ಮಂಡಿಸಲಿದ್ದಾರೆ. 2022-23ನೇ ಸಾಲಿನ ಜಮ್ಮು ಮತ್ತು ಕಾಶ್ಮೀರದ ಅಯವ್ಯಯವನ್ನು ವಿತ್ತ ಸಚಿವೆ ಮಂಡಿಸಲಿದ್ದಾರೆ ಎಂದು ಹಣಕಾಸು ಇಲಾಖೆಯ ಪ್ರಕಟಣೆ ತಿಳಿಸಿದೆ.
- ಬಜೆಟ್ ಅಧಿವೇಶನದ ಮೊದಲರ್ಧದಲ್ಲಿ ಈ ವರ್ಷದ ಮುಂಗಡ ಪತ್ರವನ್ನು ಕೇಂದ್ರ ಹಣಕಾಸು ಸಚಿವರು ಮಂಡಿಸಿದ್ದರು. ಮುಂದಿನ ಐದು ವರ್ಷಗಳ ಅವಧಿಯಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ವಿತ್ತ ಸಚಿವರು ಹೇಳಿದ್ದರು. ಈ ಬಜೆಟ್ ಭಾರತದ ಮುಂದಿನ 25 ವರ್ಷದ ಆರ್ಥಿಕ ಪ್ರಗತಿಯ ಹಾದಿ ತೋರಲಿದೆ. ಭಾರತವು ಸ್ವಾತಂತ್ರ್ಯ ಪಡೆದು 100 ವರ್ಷವಾಗುವ ಹೊತ್ತಿಗೆ ಹೇಗಿರಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಹೇಳಿದ್ದರು.
- ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದರು. ‘ಭಾರತದ ಬಡವರು ದೇಶದ ಅತಿ ಶ್ರೀಮಂತ ನೂರು ಜನರು ದೇಶದ 55 ಕೋಟಿ ಜನರಿಗಿಂತಲೂ ಹೆಚ್ಚು ಆದಾಯ ಪಡೆದದ್ದನ್ನು ಗಮನಿಸಿದ್ದಾರೆ. ನಮ್ಮ ದೇಶ ಎಲ್ಲಿಗೆ ಬಂದು ನಿಂತಿದೆಯೋ ಅದರ ಬಗ್ಗೆ ತೀವ್ರ ಆತಂಕವಿದೆ. ದೇಶ ಮತ್ತು ದೇಶದ ಜನರು ದೊಡ್ಡ ಗಂಡಾಂತರದಲ್ಲಿದ್ದಾರೆ’ ಎಂದು ರಾಹುಲ್ ಹೇಳಿದ್ದರು. ಬಿಜೆಪಿ ಮತ್ತು ಆರ್ಎಸ್ಎಸ್ ದೇಶದ ತಳಪಾಯದೊಂದಿಗೆ ಆಟವಾಡುತ್ತಿವೆ ಎಂದಿದ್ದರು.
- ರಾಹುಲ್ ಗಾಂಧಿ ಆರೋಪಗಳಿಗೆ ಉತ್ತರಿಸಿದ್ದ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ದುರಾಡಳಿತ ಮತ್ತು ಭ್ರಷ್ಟಾಚಾರವು ತಾಂಡವವಾಡುತ್ತಿತ್ತು’ ಎಂದು ಹೇಳಿದ್ದರು. ‘ಕುರುಡು ಪ್ರತಿಪಕ್ಷವು ದೇಶದ ಪ್ರಜಾಪ್ರಭುತ್ವವನ್ನು ಅಲುಗಾಡಿಸುತ್ತಿದೆ’ ಎಂದು ಹೇಳಿದ್ದರು.
- ‘ತುಕ್ಡೆ ತುಕ್ಡೆ ಗ್ಯಾಂಗ್ನೊಂದಿಗೆ ಕೈಜೋಡಿಸಿದ ನಂತರ ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿ ಸ್ಪಷ್ಟವಾಗಿ ಎಲ್ಲರಿಗೂ ಗೋಚರಿಸಿತು. ಹಲವು ಚುನಾವಣೆಗಳನ್ನು ಸೋತ ನಂತರವೂ ನಿಮ್ಮ ಅಹಂಕಾರ ಕಡಿಮೆಯಾಗಿಲ್ಲ. ಇದು ಎಂದಿಗೂ ಹೋಗುವುದಿಲ್ಲ, ಏಕೆಂದರೆ ನೀವು ರೂಪಿಸಿಕೊಂಡಿರುವ ವ್ಯವಸ್ಥೆ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದರು.
- ಕಲಾಪ ನಡೆಯುವ ಸ್ಥಳ, ಗ್ಯಾಲರಿ ಮತ್ತು ಛೇಂಬರ್ಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದ ಬಜೆಟ್ ಅಧಿವೇಶನದಲ್ಲಿ 11 ಕಲಾಪಗಳು ನಡೆದಿದ್ದವು.
- ಬಜೆಟ್ ಅಧಿವೇಶನವು ಏಪ್ರಿಲ್ 8ಕ್ಕೆ ಕೊನೆಗೊಳ್ಳಲಿದೆ. ಎರಡನೇ ಹಂತದಲ್ಲಿ 19 ಕಲಾಪಗಳು ನಡೆಯಲಿವೆ.
- ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಎರಡು ಹೊಸ ಮಸೂದೆಗಳನ್ನು ಮಂಡಿಸಲಾಗಿತ್ತು. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಸಂವಿಧಾನ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ) ಆದೇಶ (ತಿದ್ದುಪಡಿ) ಮಸೂದೆ, 2002 ಮಂಡಿಸಲಾಗಿತ್ತು. ಮುಂದಿನ ಅವಧಿಯಲ್ಲಿ ಒಟ್ಟು 14 ಮಸೂದೆಗಳು ಮತ್ತು ಹಣಕಾಸು ವಿಧೇಯಕಗಳನ್ನು ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
Published On - 7:51 am, Mon, 14 March 22