ಗುಲಾಬಿ ಹೂವಿನ ಗಿಡದ ಕೆಳಗೆ ಮೊದಲ ಮಗುವಿನ ಅಂತ್ಯಕ್ರಿಯೆ: ಸೋನಿಯಾ ಆತ್ಮಕಥನದಲ್ಲಿ ಮನಕಲಕುವ ಸಂಗತಿ
ಸೋನಿಯಾ ಗಾಂಧಿಯವರ ಆತ್ಮಕಥೆ "ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಅವರ ವೈಯಕ್ತಿಕ ನೋವನ್ನು ತೆರೆದಿಟ್ಟಿದೆ. ರಾಜೀವ್ ಗಾಂಧಿಯವರೊಂದಿಗೆ ತಮ್ಮ ಮೊದಲ ಗಂಡು ಮಗುವನ್ನು ಕಳೆದುಕೊಂಡ ದುಃಖದ ಘಟನೆಯನ್ನು ವಿವರಿಸಿದ್ದಾರೆ. 1969ರಲ್ಲಿ ಅವಧಿಗೂ ಮುನ್ನ ಜನಿಸಿದ ಮಗು ಕೆಲವೇ ಗಂಟೆಗಳಲ್ಲಿ ಮೃತಪಟ್ಟಿತ್ತು. ಗುಲಾಬಿ ಗಿಡದ ಕೆಳಗೆ ಅಂತ್ಯಕ್ರಿಯೆ ನಡೆಸಿದ ಆ ಮನಕಲಕುವ ಸನ್ನಿವೇಶ, ಇಂದಿರಾ ಗಾಂಧಿಯವರ ಸಾಂತ್ವನ ಮತ್ತು ರಾಹುಲ್ ಜನನವನ್ನು ಪುಸ್ತಕದಲ್ಲಿ ಹೇಳಿದ್ದಾರೆ.

ನವದೆಹಲಿ, ನವೆಂಬರ್ 10: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಹೊಸ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ನಲ್ಲಿ, ರಾಜೀವ್ ಗಾಂಧಿ ಅವರೊಂದಿಗೆ ಜೀವನದಲ್ಲಿ ಎದುರಿಸಿದ ಮರೆಯಲಾಗದ ವೈಯಕ್ತಿಕ ನೋವೊಂದನ್ನು ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಜನಿಸುವುದಕ್ಕೂ ಒಂದು ವರ್ಷಕ್ಕೂ ಮೊದಲು, ದಂಪತಿ ತಮ್ಮ ಮೊದಲ ಗಂಡು ಮಗುವನ್ನು ಕಳೆದುಕೊಂಡಿದ್ದರು. ಈ ದುಃಖದ ಘಟನೆ ಮತ್ತು ಆ ಸಮಯದಲ್ಲಿ ಕುಟುಂಬ ಅನುಭವಿಸಿದ ನೋವನ್ನು ಸೋನಿಯಾ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
1969ರಲ್ಲಿ ನಡೆದ ಆ ದುಃಖದ ಘಟನೆ
ಸೋನಿಯಾ ಗಾಂಧಿ ಅವರ ಪ್ರಕಾರ, 1969ರ ಜನವರಿಯಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ದಿನಾಂಕಕ್ಕೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ, ಜನವರಿ 18ರಂದು ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಮಗು ಅವಧಿಗೂ ಮುನ್ನ ಜನಿಸಿದ್ದರೂ ಆರೋಗ್ಯವಾಗಿ ಕಾಣಿಸುತ್ತಿತ್ತು.
ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇರಿಸಲಾಗಿತ್ತು. ಅದರ ಮೊದಲ ಅಳುವಿನ ಸದ್ದು ಕೇಳಿದ ಸೋನಿಯಾ ಅವರಿಗೆ ಸಂತೋಷವಾಗಿತ್ತು. ನಂತರ ರಾಜೀವ್ ಗಾಂಧಿ ಅವರನ್ನು ಮಗುವಿನ ಬಳಿ ಕರೆದುಕೊಂಡು ಹೋದರು. ಮಗುವಿನ ದಟ್ಟ ಕಪ್ಪು ಕೂದಲು ಮತ್ತು ಉದ್ದನೆಯ ಬೆರಳುಗಳನ್ನು ಕಂಡು ದಂಪತಿ ಭಾವುಕರಾಗಿದ್ದರು.
ಆದರೆ ಆ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ. ಮಗು ಕೆಲವೇ ಗಂಟೆಗಳಲ್ಲಿ ಮೃತಪಟ್ಟಿತು. ಮಗುವಿನ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ವೈದ್ಯರು ಮೊದಲೇ ಎಚ್ಚರಿಕೆ ನೀಡಿದ್ದರು. ಮರುದಿನ ಬೆಳಗ್ಗೆ ಮಗುವಿನ ಸಾವಿನ ಸುದ್ದಿ ತಿಳಿದಾಗ ಸೋನಿಯಾ ಮತ್ತು ರಾಜೀವ್ ತೀವ್ರ ಆಘಾತಕ್ಕೊಳಗಾದರು.
ಇದನ್ನೂ ಓದಿ: ಮಹತ್ವಾಕಾಂಕ್ಷೆ ಹೊಂದುವುದು ಅಪರಾಧವೇ?: ಸೋನಿಯಾ ಗಾಂಧಿ ವಿರುದ್ಧ ಪ್ರಣಬ್ ಮುಖರ್ಜಿ ಪುತ್ರಿ ತಿರುಗೇಟು
ಮಗುವಿನ ಅಗಲಿಕೆಯಿಂದ ಕಣ್ಣೀರಿಟ್ಟಿದ್ದ ರಾಜೀವ್ ಗಾಂಧಿ
ಸೋನಿಯಾ ಅವರೊಂದಿಗೆ ರಾಜೀವ್ ಗಾಂಧಿ ಕೂಡ ಮಗುವಿನ ಸಾವಿನಿಂದ ತೀವ್ರವಾಗಿ ದುಃಖಿತರಾದರು. ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಹೊರಹಾಕದ ರಾಜೀವ್, ಆ ದಿನ ಪತ್ನಿಯ ಪಕ್ಕದಲ್ಲೇ ಕುಳಿತು ಕಣ್ಣೀರಿಟ್ಟಿದ್ದರು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.
ಆ ಸಮಯದಲ್ಲಿ ಪ್ರವಾಸದಲ್ಲಿದ್ದ ಇಂದಿರಾ ಗಾಂಧಿ ವಿಷಯ ತಿಳಿದ ತಕ್ಷಣ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಆಸ್ಪತ್ರೆಗೆ ಬಂದಿದ್ದರು. ದುಃಖದಲ್ಲಿದ್ದ ಸೋನಿಯಾ ಮತ್ತು ರಾಜೀವ್ ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಿದ್ದರು. ಇಂದಿರಾ ಅವರ ಕಣ್ಣುಗಳು ಕೆಂಪಾಗಿ, ಊದಿಕೊಂಡಿದ್ದವು ಎಂದು ಸೋನಿಯಾ ಪುಸ್ತಕದಲ್ಲಿ ಬರೆದಿದ್ದಾರೆ.
ಮಗುವನ್ನು ನದಿಗೆ ಬಿಡಲು ಒಪ್ಪದ ಸೋನಿಯಾ
ಮಗುವಿನ ಅಂತ್ಯಕ್ರಿಯೆ ಹೇಗೆ ಮಾಡಬೇಕು ಎಂಬ ಚರ್ಚೆಯೂ ಕುಟುಂಬಕ್ಕೆ ಮತ್ತೊಂದು ನೋವು ತಂದಿತ್ತು. ಆ ಕಾಲದಲ್ಲಿ ನವಜಾತ ಶಿಶುಗಳ ಅಂತ್ಯಕ್ರಿಯೆಗೆ ಸಂಬಂಧಿಸಿದ ಕೆಲವು ಸಂಪ್ರದಾಯಗಳ ಪ್ರಕಾರ ಮಗುವಿನ ದೇಹವನ್ನು ನದಿಗೆ ಬಿಡುವ ವಿಚಾರವೂ ಪ್ರಸ್ತಾಪವಾಗಿತ್ತು. ಆದರೆ ಇದಕ್ಕೆ ಸೋನಿಯಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಮಗುವನ್ನು ಯಾವುದೇ ಕಾರಣಕ್ಕೂ ನದಿಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಹಿಂದೆ ದೆಹಲಿಯ ಓಖ್ಲಾ ಬ್ಯಾರೇಜ್ ಬಳಿ ನೀರಿನಲ್ಲಿ ಸಿಲುಕಿದ್ದ ಶವವೊಂದನ್ನು ನೋಡಿದ ನೆನಪು ಅವರಿಗೆ ಕಾಡುತ್ತಿತ್ತು.
ಕೊನೆಗೆ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಫಿರೋಜ್ ಗಾಂಧಿ ಅವರ ತೋಟದಲ್ಲಿ ಮಗುವನ್ನು ಹೂಳಲು ಕುಟುಂಬ ನಿರ್ಧರಿಸಿತು. ರಾಜೀವ್ ಗಾಂಧಿ ಮತ್ತು ಅವರ ಸಹೋದರ ಸಂಜಯ್ ಗಾಂಧಿ, ಗುಲಾಬಿ ಬಣ್ಣದ ಬೌಗೆನ್ವಿಲ್ಲಾ ಗಿಡದ ಕೆಳಗೆ ಮಗುವಿನ ಅಂತ್ಯಕ್ರಿಯೆ ನೆರವೇರಿಸಿದರು. ಆ ಸ್ಥಳಕ್ಕೆ ಹೋದಾಗಲೆಲ್ಲ ಕುಟುಂಬದವರು ಅಲ್ಲಿ ಹೂವೊಂದನ್ನು ಇಟ್ಟು ಬರುತ್ತಿದ್ದರು ಎಂದು ಸೋನಿಯಾ ಹೇಳಿದ್ದಾರೆ.
1970ರಲ್ಲಿ ಜನಿಸಿದ ರಾಹುಲ್ ಗಾಂಧಿ ಮೊದಲ ಮಗುವನ್ನು ಕಳೆದುಕೊಂಡ ಕೆಲವು ತಿಂಗಳ ಬಳಿಕ ಸೋನಿಯಾ ಮತ್ತೆ ಗರ್ಭಿಣಿಯಾದರು. ಆದರೆ ಹಿಂದಿನ ಅನುಭವದಿಂದಾಗಿ ಈ ಬಾರಿ ಕುಟುಂಬದಲ್ಲಿ ಸಂತೋಷಕ್ಕಿಂತ ಆತಂಕವೇ ಹೆಚ್ಚಾಗಿತ್ತು. ಜೂನ್ 19, 1970ರಂದು ರಾಹುಲ್ ಗಾಂಧಿ ಜನಿಸಿದರು.
ಸೋನಿಯಾ ಗಾಂಧಿಯವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಆತ್ಮಚರಿತ್ರೆ 2026ರ ನವೆಂಬರ್ 10ರಂದು ಬಿಡುಗಡೆಯಾಗಿದೆ. ಇಟಲಿಯಲ್ಲಿನ ಬಾಲ್ಯದಿಂದ ಹಿಡಿದು ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮ, ಕುಟುಂಬ ಜೀವನ, ವೈಯಕ್ತಿಕ ನೋವುಗಳು ಮತ್ತು ರಾಜಕೀಯ ಪ್ರವೇಶದವರೆಗಿನ ಹಲವು ಅನುಭವಗಳನ್ನು ಈ ಪುಸ್ತಕ ಒಳಗೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
