ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(SII) ಸೆಪ್ಟೆಂಬರ್ನಿಂದ ರಷ್ಯಾದ ಕೊವಿಡ್ 19 ಲಸಿಕೆ ಸ್ಪುಟ್ನಿಕ್ ವಿ(Sputnik V Vaccine) ಯನ್ನು ಉತ್ಪಾದನೆ ಮಾಡಲಿದೆ. ಭಾರತದಲ್ಲಿ ವಾರ್ಷಿಕ 300 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆ ಮಾಡುವ ಉದ್ದೇಶದೊಂದಿಗೆ ಈ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ (RDIF) ಮಂಗಳವಾರ ಪ್ರಕಟಿಸಿದೆ.
ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಯೋಗ, ಪರೀಕ್ಷೆ ಮಾಡಲು ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸೀರಂ ಇನ್ಸ್ಟಿಟ್ಯೂಟ್ಗೆ ಜು.4ರಂದು ಭಾರತದ ಔಷಧ ನಿಯಂತ್ರಣಾ ಪ್ರಾಧಿಕಾರ (DCGI) ಅನುಮತಿ ನೀಡಿತ್ತು. ಅಂತೆಯೇ ಸೀರಂ ಇನ್ಸ್ಟಿಟ್ಯೂಟ್ನಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಬ್ಯಾಚ್ನ ಉತ್ಪಾದನೆ ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿದೆ. ಭಾರತದಲ್ಲಿ ವರ್ಷಕ್ಕೆ 300 ಮಿಲಿಯನ್ ಡೋಸ್ಗಳಷ್ಟು ಲಸಿಕೆ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ. ರಷ್ಯಾದ ಗಮಲೇಯ ಕೇಂದ್ರದಿಂದ ಸೆಲ್ ಮತ್ತು ವೆಕ್ಟರ್ ಮಾದರಿಗಳನ್ನು ಸೀರಂ ಇನ್ಸ್ಟಿಟ್ಯೂಟ್ಗೆ ಈಗಾಗಲೇ ಹಸ್ತಾಂತರಿಸಲಾಗಿದ್ದು, ಅದಕ್ಕೆ ಡಿಸಿಜಿಐ ಅನುಮೋದನೆ ಸಿಕ್ಕ ತಕ್ಷಣ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಆರ್ಡಿಐಎಫ್ ಹೇಳಿಕೆ ಬಿಡುಗಡೆ ಮಾಡಿದೆ. ಸೀರಂ ಇನ್ಸ್ಟಿಟ್ಯೂಟ್ ಸದ್ಯ ಕೊವಿಶೀಲ್ಡ್ ಲಸಿಕೆ ಮತ್ತು ಅಮೆರಿಕದ ನೊವಾವ್ಯಾಕ್ಸ್ (ಭಾರತದಲ್ಲಿ ಇದಕ್ಕೆ ಕೊವಾವ್ಯಾಕ್ಸ್ ಎಂದು ಹೆಸರಿಡಲಾಗಿದೆ) ಲಸಿಕೆಗಳನ್ನು ಉತ್ಪಾದನೆ ಮಾಡುತ್ತಿದೆ.
ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸೀರಂ ಇನ್ಸ್ಟಿಟ್ಯೂಟ್ನ ಸಿಇಒ ಆಧಾರ್ ಪೂನಾವಾಲಾ, ಆರ್ಡಿಐಎಫ್ (RDIF)ನೊಂದಿಗೆ ಪಾಲುದಾರಿಕೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ನನಗೆ ತುಂಬ ಸಂತೋಷವಾಗುತ್ತಿದೆ. ಸೆಪ್ಟೆಂಬರ್ನಲ್ಲಿ ಪ್ರಯೋಗಾತ್ಮಕ ಉತ್ಪಾದನೆ ಪ್ರಾರಂಭವಾಗಿ, ಮುಂಬರುವ ತಿಂಗಳುಗಳಲ್ಲಿ ಮಿಲಿಯನ್ಗಳಷ್ಟು ಡೋಸ್ ಲಸಿಕೆ ಉತ್ಪಾದನೆ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಮೇ ತಿಂಗಳಲ್ಲಿ ಮೊದಲ ಬಾರಿಗೆ ಹೈದರಾಬಾದ್ನಲ್ಲಿ ಚಾಲನೆಗೊಂಡ ಸ್ಪುಟ್ನಿಕ್ ವಿ ಲಸಿಕೆಯನ್ನು ಈಗಾಗಲೇ ಭಾರತದ 50 ನಗರಗಳಿಗೆ ವಿತರಿಸಲಾಗಿದೆ. ಬೆಂಗಳೂರು, ವಿಜಾಗ್, ಮುಂಬೈ, ಕೊಲ್ಕತ್ತಾ, ದೆಹಲಿ, ಚೆನ್ನೈ, ವಿಜಯವಾಡ, ಕೊಲ್ಲಾಪುರ, ಕೊಚ್ಚಿ, ರಾಯ್ಪುರ, ಚಂಡೀಗಢ, ಪುಣೆ, ನಾಗ್ಪುರ, ನಾಸಿಕ್, ಕೊಯಮತ್ತೂರು, ರಾಂಚಿ, ಜೈಪುರ, ಲಕ್ನೋ, ಪಾಟ್ನಾ, ಭುವನೇಶ್ವರ, ಅಹಮದಾಬಾದ್, ರಾಜಕೋಟ್, ಭೂಪಾಲ್, ಧಾರವಾಡ, ಕಲಬುರ್ಗಿ, ಗುಂಟೂರು, ಮಧುರೈ, ಮೈಸೂರು ಮುಂತಾದ ನಗರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ: Flipkart ನಲ್ಲಿ ಬಂಪರ್ ಡಿಸ್ಕೌಂಟ್: ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾದ Galaxy F22 ಈಗ ಖರೀದಿಗೆ ಲಭ್ಯ
(Sputnik V vaccine production will Start By September In India)