ಆಂಧ್ರಪ್ರದೇಶದ ವಿಶ್ವವಿದ್ಯಾಲಯವೊಂದರಲ್ಲಿ (Andhra Pradesh) ಸಿಬ್ಬಂದಿ ಸರಣಿ ಸಾವು ಸಂಭವಿಸಿದ್ದು, ಹೋಮ ಮಾಡಲು ಹಣ ಸಂಗ್ರಹಕ್ಕೆ ವಿವಿ ಆಡಳಿತವು ಮುಂದಾಗಿದೆ. ಆದರೆ ವಿಶ್ವವಿದ್ಯಾನಿಲಯದ ಈ ಕುರಿತಾದ ಸುತ್ತೋಲೆಗೆ ವಿದ್ಯಾರ್ಥಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕ್ಯಾಂಪಸ್‌ನಲ್ಲಿ ಇಂತಹ ಧಾರ್ಮಿಕ ಸಮಾರಂಭಗಳನ್ನು ನಡೆಸಬಾರದು ಎಂದು ತಿಳಿಸಿವೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು (Srikrishna Devaraya University Ananthapur) ಫೆಬ್ರವರಿ 24 ರಂದು ‘ಶ್ರೀ ಧನ್ವಂತರಿ ಮಹಾ ಮೃತ್ಯುಂಜಯ ಶಾಂತಿ ಹೋಮ’ ಎಂಬ (Sri Dhanvanthari Maha Mruthyunjaya Shanthi Homa) ಧಾರ್ಮಿಕ ಕಾರ್ಯವನ್ನು ಮಾಡಲು ಬಯಸಿದೆ ಮತ್ತು ಅದಕ್ಕಾಗಿ ಚಂದಾ ಮೂಲಕ ಹಣ ಕೋರಿದೆ, ಈ ಸಂಬಂಧ ವಿಶ್ವವಿದ್ಯಾನಿಲಯವು ಸುತ್ತೋಲೆ ಹೊರಡಿಸಿದೆ.
‘ಹೋಮದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಲು ಇಚ್ಛಿಸುವ ಎಲ್ಲ ನೌಕರರು ಬೋಧಕ ಸಿಬ್ಬಂದಿ ಕನಿಷ್ಠ 500 ರೂ. ಹಾಗೂ ಬೋಧಕೇತರ ಸಿಬ್ಬಂದಿ 100 ರೂ. ಹೋಮಕ್ಕೆ ತಗಲುವ ವೆಚ್ಚವನ್ನು ಭರಿಸಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಕಾರಣಗಳಿಂದಾಗಿ ವಿಶ್ವವಿದ್ಯಾನಿಲಯದಲ್ಲಿ 25 ಮಂದಿ ಸಿಬ್ಬಂದಿ ಸಾವನ್ನಪ್ಪಿದ ನಂತರ ಅಶುಭವನ್ನು ನಿವಾರಿಸುವ ಉದ್ದೇಶದಿಂದ ಧಾರ್ಮಿಕ ಕ್ರಿಯೆಯನ್ನು ನಡೆಸಲು ನಿರ್ಧರಿಸಲಾಗಿದೆ.
ಈ ಆಚರಣೆಗೆ ವಿದ್ಯಾರ್ಥಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕ್ಯಾಂಪಸ್‌ನಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ತಪ್ಪು ಎಂದು ಹೇಳಿದೆ. ಎಸ್‌ಕೆ ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ರಿಜಿಸ್ಟ್ರಾರ್ ಅವರು ಕೂಡಲೇ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
Also Read:
‘ನಿಜವಾಗಿಯೂ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕೆಂದಿದ್ದರೆ ವಿಶ್ವವಿದ್ಯಾಲಯದ ಹೊರಗೆ ಮಾಡಬೇಕು. ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಬೆಂಬಲ ನೀಡದೆ ಜಾತಿ, ಧರ್ಮಗಳನ್ನು ಪ್ರತಿನಿಧಿಸುವ ‘ಹೋಮ’ ನಡೆಸುವುದು ಸರಿಯಾದ ಕ್ರಮವಲ್ಲ’ ಎಂದು ಸಂಘ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಅದನ್ನು ರದ್ದುಗೊಳಿಸದಿದ್ದರೆ ಆಚರಣೆಗೆ ಅಡ್ಡಿಪಡಿಸುತ್ತೇವೆ ಎಂದೂ ಎಚ್ಚರಿಸಿವೆ.
ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಕೆ ವಿಶ್ವವಿದ್ಯಾಲಯದ ವೈಸ್ ಛಾನ್ಸಲರ್ ರಾಮಕೃಷ್ಣ ರೆಡ್ಡಿ, “ನಂಬಿಕೆಯಿಲ್ಲದವರು ಹೋಮಕ್ಕೆ ಹಾಜರಾಗುವ ಅಗತ್ಯವಿಲ್ಲ, ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಸಾಯುತ್ತಿದ್ದಾರೆ, ಆದ್ದರಿಂದ ನಾವು ಇದನ್ನು ಮಾಡುತ್ತಿದ್ದೇನೆ. ವಿದೇಶಗಳಲ್ಲಿಯೂ ಹೋಮ ಮಾಡಲಾಗುತ್ತಿದೆ” ಎಂದು ಟಿವಿ9 ತೆಲುಗುಗೆ ತಿಳಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ