ಕೊಚ್ಚಿ: ಕೇರಳದಲ್ಲಿ ಇಂದು(ಶುಕ್ರವಾರ) ಪಾಪ್ಯುಲರ್ ಫ್ರಂಟ್ (PFI) ಘೋಷಿಸಿದ ಹರತಾಳದಲ್ಲಿ 70 ಕೆಎಸ್ಆರ್ಟಿಸಿ (KSRTC) ಬಸ್ಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ಹೇಳಿದೆ. ಸುಮಾರು 45 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಗಣಿಸುವ ಮುನ್ನವೇ ನ್ಯಾಯಾಲಯಕ್ಕೆ ಹಾಜರಾಗಿದ್ದ ಅಡ್ವೊಕೇಟ್ ಜನರಲ್ (AG) ಅವರು ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ನಡೆದ ದಾಳಿ ಬಗ್ಗೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ಗಮನಕ್ಕೆ ತಂದರು. ವಿಷಯದ ಬಗ್ಗೆ ಆಘಾತ ವ್ಯಕ್ತಪಡಿಸಿದ ನ್ಯಾಯಾಲಯ, ಕೆಎಸ್‌ಆರ್‌ಟಿಸಿಯನ್ನು ಮುಟ್ಟಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಿಸಿ ಮುಟ್ಟುವವರೆಗೆ ಅದರಮೇಲೆ ಕಲ್ಲು ತೂರಾಟ ಮುಂದುವರಿಯುತ್ತದೆ ಎಂದು ಹೇಳಿದೆ. ಸರಿಯಾದ ಉದ್ದೇಶ ಹೊಂದಿದವರು ಇಂತಹ ಹಿಂಸೆ ಮಾಡುವುದಿಲ್ಲ. ಈ ದೇಶದಲ್ಲಿ ಕಾನೂನುಗಳಿವೆ. ಕಾನೂನಿನ ಭಯವಿಲ್ಲದವರು ಈ ರೀತಿ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹರತಾಳ ವೇಳೆ ಬಸ್ಸುಗಳಿಗೆ ಕಲ್ಲು ತೂರಾಟ, ಕಣ್ಣೂರಿನಲ್ಲಿ ಪೆಟ್ರೋಲ್ ಬಾಂಬ್ ಎಸೆತ
ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ಘೋಷಿಸಿದ ಹರತಾಳದ ವೇಳೆ ವ್ಯಾಪಕ ಹಿಂಸಾಚಾರ, ಕಲ್ಲು ತೂರಾಟ ಮತ್ತು ಗಲಭೆ ಪ್ರಕರಣ ವರದಿ ಆಗಿದೆ. ಹಿಂಸಾಚಾರದಲ್ಲಿ 170 ಜನರನ್ನು ಬಂಧಿಸಲಾಗಿದೆ. ಕಣ್ಣೂರಿನ ಪಯ್ಯನ್ನೂರಿನಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಲು ಬಂದಾಗ ಸ್ಥಳೀಯರು ತಡೆದಿದ್ದಾರೆ. ಹರತಾಳ ಬೆಂಬಲಿಗರನ್ನು ಸ್ಥಳೀಯರು ಥಳಿಸಿ ಬಂದ್ ವಿರುದ್ಧ ಪ್ರತಿಭಟಿಸಿದ್ದಾರೆ. ನಾಲ್ವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದು, ಅವರನ್ನು ನಂತರ ಪೊಲೀಸರಿಗೊಪ್ಪಿಸಲಾಗಿದೆ.
ಇಡೀ ರಾಜ್ಯದಲ್ಲಿ 157 ಪ್ರಕರಣಗಳು ದಾಖಲಾಗಿವೆ. ಕಣ್ಣೂರು ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳಿದ್ದು ಮುನ್ನೆಚ್ಚರಿಕೆ ಕ್ರಮಗಳಿಗಾಗಿ 368 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರ ಎಸಗಿದವರನ್ನು ಬಂಧಿಸಲಾಗುವುದು ಎಂದು ಎಡಿಜಿಪಿ ವಿಜಯ್ ಸಾಖೆರೆ ಹೇಳಿದ್ದಾರೆ.
ಕಣ್ಣೂರಿನ ಪಲ್ಲೋಟ್ ಚರ್ಚ್ ನಲ್ಲಿ ಲಾರಿಯೊಂದಕ್ಕೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಇರಿಟ್ಟಿಯಿಂದ ತಲಶ್ಶೇರಿ ಕಡೆಗೆ ಬರುತ್ತಿದ್ದ ಲಾರಿಯ ಮೇಲೆ ದಾಳಿ ನಡೆದಿದ್ದು ಲಾರಿಯ ಗಾಜು ಒಡೆದಿದೆ. ದಾಳಿಕೋರರನ್ನು ಗುರುತಿಸಲಾಗಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ. ಕಣ್ಣೂರಿನಲ್ಲಿ ಮಿಲ್ಮಾ ಟೀ ಸ್ಟಾಲ್ ಧ್ವಂಸ ಮಾಡಲಾಗಿದ್ದು ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕನ ತಲೆಗೆ ಗಾಯವಾಗಿದೆ. ಕಣ್ಣೂರು ಉಳಿಯಿ ಎಂಬಲ್ಲಿ ಆಯುರ್ವೇದ ಆಸ್ಪತ್ರೆ ಬಳಿ ಬೈಕ್ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಕಲ್ಯಾಶ್ಶೇರಿಯಲ್ಲಿ ಬಾಂಬ್ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಟ್ಟನೂರಿನ ಆರ್ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ. ಕಿಟಕಿಯ ಗಾಜು ಒಡೆದಿದ್ದು, ಕಚೇರಿಯಲ್ಲಿದ್ದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಸ್ಕೂಟಿಯಲ್ಲಿ ಬಂದ ಇಬ್ಬರು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಕೊಲ್ಲಂನಲ್ಲಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಬೈಕ್ ನಲ್ಲಿ ಬಂದು ಪೊಲೀಸರಿಗೆ ಡಿಕ್ಕಿ ಹೊಡೆದಿದ್ದಾರೆ. ಕೊಟ್ಟಾಯಂ ಸಂಕ್ರಾಂತಿಯಲ್ಲಿ ಲಾಟರಿ ಅಂಗಡಿ ಧ್ವಂಸ ಮಾಡಲಾಗಿದೆ. ಚಂಗನಾಶ್ಶೇರಿಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ವೈದ್ಯರೊಬ್ಬರು ಗಾಯಗೊಂಡಿದ್ದಾರೆ. ಎರ್ರಾಟುಪೇಟೆಯಲ್ಲೂ ಸಂಘರ್ಷ ನಡೆದಿದೆ.
ತ್ರಿಶೂರ್ ಚಾವಕ್ಕಾಡ್ ಆಂಬ್ಯುಲೆನ್ಸ್ ಮೇಲೆ ಕಲ್ಲು ತೂರಾಟ ನಡೆದಿದೆ. ನೆಡುಂಬಶ್ಶೇರಿ ಮತ್ತು ಕೋಯಿಕ್ಕೋಡ್‌ನಲ್ಲಿ ಹೋಟೆಲ್‌ಗಳನ್ನು ಧ್ವಂಸಗೊಳಿಸಲಾಗಿದೆ.. ಹೋಟೆಲ್ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕೂಡ ದುಷ್ಕರ್ಮಿಗಳು ಒಡೆದಿದ್ದಾರೆ.
ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ಕೆಎಸ್ಆರ್ಟಿಸಿ ಬಸ್ಸುಗಳಿಗೆ ಹೆಚ್ಚಿನ ಹಾನಿಯಾಗಿದೆ. ಲಾರಿಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಚಾಲಕರು ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದಾರೆ. ತಿರುವನಂತಪುರದಲ್ಲಿ ಕಬ್ಬಿಣದ ರಾಡ್ನಿಂದ ಲಾರಿ ಚಾಲಕ ಜಿನು ಗಾಯಗೊಂಡಿದ್ದಾರೆ. ಹಿಂಸಾಚಾರದ ನಂತರ, ಹಲವಾರು ಜಿಲ್ಲೆಗಳಲ್ಲಿ ಕೆಎಸ್ಆರ್ಟಿಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಲವಡೆ ಪೊಲೀಸ್ ಭದ್ರತೆಯಲ್ಲಿ ಬಸ್‌ಗಳು ಸಂಚಾರ ನಡೆಸಿವೆ
ಹಿಂದಿನ ಆದೇಶವನ್ನು ಉಲ್ಲಂಘಿಸಿ ಮಿಂಚಿನ ಹರತಾಳ ನಡೆಸಿರುವ ಪಾಪ್ಯುಲರ್ ಫ್ರಂಟ್ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುತ್ತಿರುವುದಾಗಿ ಹೈಕೋರ್ಟ್ ಮಾಹಿತಿ ನೀಡಿದೆ. ಕೇರಳದಲ್ಲಿಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹರತಾಳ ನಡೆದಿದೆ.
Published On - 7:50 pm, Fri, 23 September 22