ನವದೆಹಲಿ: ವಿಶ್ವವಿಖ್ಯಾತ ತಾಜ್ ಮಹಲ್‌ನ (Taj Mahal) 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದೆ. ಈ ನಿರ್ದೇಶನವನ್ನು ಪಾಲಿಸುವಂತೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೋರ್ಟ್ ಸೂಚಿಸಿದೆ. 17ನೇ ಶತಮಾನದಲ್ಲಿ ಬಿಳಿ ಅಮೃತಶಿಲೆಯಲ್ಲಿ ನಿರ್ಮಿಸಲಾದ ಈ ತಾಜ್ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.
ತಾಜ್ ಮಹಲ್ ಬಳಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡುವ ಮೂಲಕ ಈ ಸ್ಮಾರಕದ ಸಂರಕ್ಷಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ಗೆ ಹಿರಿಯ ವಕೀಲ ಎಡಿಎನ್ ರಾವ್ ಅವರ ಸಲ್ಲಿಕೆಗಳನ್ನು ನ್ಯಾಯಪೀಠವು ಪರಿಶೀಲಿಸಿತು. 2000ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಇದೇ ರೀತಿಯ ಆದೇಶವನ್ನು ನೀಡಿತ್ತು. ಆದರೆ, ಸಮಯದ ದೀರ್ಘಾವಧಿಯ ದೃಷ್ಟಿಯಿಂದ ಆ ನಿರ್ದೇಶನವನ್ನು ಪುನರುಚ್ಚರಿಸುವುದು ಸೂಕ್ತವಾಗಿದೆ ಎಂದು ವಕೀಲ ರಾವ್ ಹೇಳಿದರು.
ಇದನ್ನೂ ಓದಿ: Taj Mahal Rooms Pictures ತಾಜ್ ಮಹಲ್‌ನ ಮುಚ್ಚಿದ ಕೊಠಡಿಗಳ ಚಿತ್ರ ಬಿಡುಗಡೆ ಮಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ
ಹಿರಿಯ ವಕೀಲರ ಮಾತಿಗೆ ಸಮ್ಮತಿಸಿದ ನ್ಯಾಯಪೀಠವು ತಾಜ್‌ಮಹಲ್‌ನ 500 ಮೀಟರ್ ವ್ಯಾಪ್ತಿಯನ್ನು ತಕ್ಷಣವೇ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಂದ ತೆರವುಗೊಳಿಸುವಂತೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ. 500 ಮೀಟರ್ ವ್ಯಾಪ್ತಿಯ ಹೊರಗೆ ಜಾಗ ಮಂಜೂರು ಮಾಡಿರುವ ಅಂಗಡಿ ಮಾಲೀಕರ ಗುಂಪಿನ ಅರ್ಜಿಯ ಮೇರೆಗೆ ಈ ಆದೇಶ ಬಂದಿದೆ. ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಎಂಸಿ ಧಿಂಗ್ರಾ ಅವರು ಸ್ಮಾರಕದ ಪಶ್ಚಿಮ ದ್ವಾರದ ಬಳಿ ಅಕ್ರಮ ವ್ಯಾಪಾರ ಚಟುವಟಿಕೆಗಳು ಬೆಳಕಿಗೆ ಬಂದಿದ್ದರಿಂದ ಹಿಂದಿನ ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ದೂರಿದ್ದಾರೆ. ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಲು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಸೂಕ್ತ ಆದೇಶಗಳನ್ನು ನೀಡುವಂತೆ ವಕೀಲ ಧಿಂಗ್ರಾ ಪೀಠವನ್ನು ಒತ್ತಾಯಿಸಿದ್ದಾರೆ.
No commercial activities within 500 metres of Taj Mahal: SC
Read @ANI Story | https://t.co/IBynhw78xE#TajMahal #Agra #SupremeCourtOfIndia pic.twitter.com/bdFwieyhWo
— ANI Digital (@ani_digital) September 27, 2022
1631ರಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಪತ್ನಿ ಮುಮ್ತಾಜ್ ಮಹಲ್ ಅವರ ಸ್ಮರಣಾರ್ಥವಾಗಿ ತಾಜ್ ಮಹಲ್ ಅನ್ನು ನಿರ್ಮಿಸಲಾಗಿತ್ತು. ಈ ಸ್ಮಾರಕ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಕೂಡ ಆಗಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಉತ್ತರ ಪ್ರದೇಶದ ಆಗ್ರಾ, ಫಿರೋಜಾಬಾದ್, ಮಥುರಾ, ಹತ್ರಾಸ್ ಮತ್ತು ಇಟಾ ಮತ್ತು ರಾಜಸ್ಥಾನದ ಭರತ್‌ಪುರ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಸುಮಾರು 10,400 ಚದರ ಕಿ.ಮೀ ವಿಸ್ತೀರ್ಣವಿರುವ ಪರಿಸರ ಮಾಲಿನ್ಯದಿಂದ ಸ್ಮಾರಕವನ್ನು ರಕ್ಷಿಸಲು ತಾಜ್ ಟ್ರೆಪೆಜಿಯಂ ವಲಯವನ್ನು (ಟಿಟಿಜೆಡ್) ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗ ಅಲ್ಲ,ಕಾರಂಜಿ; ತಾಜ್ ಮಹಲ್‌ನ ಕಾರಂಜಿಗಳನ್ನು ಮುಚ್ಚಿ: ಅಸಾದುದ್ದೀನ್ ಓವೈಸಿ
ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಲೂ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಾದ ನಿಯಮಗಳ ಜೊತೆಗೆ, ಬೇರೆ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವಂತಿಲ್ಲ. ಈ ಸ್ಮಾರಕದ ಬಳಿ ಮರವನ್ನು ಸುಡುವುದನ್ನು ಮತ್ತು ಇಡೀ ಪ್ರದೇಶದಲ್ಲಿ ಪುರಸಭೆಯ ಘನತ್ಯಾಜ್ಯ ಮತ್ತು ಕೃಷಿ ತ್ಯಾಜ್ಯವನ್ನು ಸುಡುವುದನ್ನು ನಿಷೇಧಿಸಲಾಗಿದೆ. ತಾಜ್ ಮಹಲ್ ಬಳಿ ಅಕ್ರಮ ವ್ಯವಹಾರ ನಡೆಸಲಾಗುತ್ತಿದ್ದು, ಇದು ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
Published On - 1:21 pm, Tue, 27 September 22