
ನವದೆಹಲಿ, ಅಕ್ಟೋಬರ್ 28: ಟಾಟಾ ಸಮೂಹ ಸಂಸ್ಥೆಗಳ ನಾಯಕತ್ವ ಬಿಕ್ಕಟ್ಟಿನ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಟುವಾಗಿ ತಿರುಗೇಟು ನೀಡಿದ್ದಾರೆ. “ವಾಣಿಜ್ಯ ಹಾಗೂ ಕಾನೂನಾತ್ಮಕ ವಿಷಯಗಳನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ ಮತ್ತು ದೇಶದ ಉದ್ಯಮ ನಾಯಕರ ಮಧ್ಯೆ ಅಪನಂಬಿಕೆ ಹಾಗೂ ವಿಷಕಾರಿ ವಾತಾವರಣ ಹರಡುವುದನ್ನು ಬಿಡಿ” ಎಂದು ಸಚಿವರು ರಾಹುಲ್ ಗಾಂಧಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಯೊಂದನ್ನೂ ರಾಜಕೀಯಗೊಳಿಸಬೇಡಿ:
“ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರೇ, ಪ್ರತಿಯೊಂದು ವಿಷಯವನ್ನೂ ರಾಜಕೀಯಗೊಳಿಸುವುದನ್ನು ನಿಲ್ಲಿಸಿ ಎಂದು ನಾನು ನಿಮಗೊಮ್ಮೆ ಸಲಹೆ ನೀಡುತ್ತೇನೆ. ವಾಣಿಜ್ಯ ಮತ್ತು ಕಾನೂನಾತ್ಮಕ ವಿಚಾರಗಳಿಗೆ ಹಗುರವಾಗಿ ಅಪರಾಧಿಕ ಬಣ್ಣ ಬಳಿಯುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಭಾರತೀಯ ಉದ್ಯಮ ವಲಯ ಮತ್ತು ನಮ್ಮ ಉದ್ಯಮಿಗಳ ಯಶಸ್ಸನ್ನು ನೀವು ಸತತವಾಗಿ ನಿಂದಿಸುತ್ತಾ ಬಂದಿದ್ದೀರಿ. ಈಗ ನಮ್ಮ ಉದ್ಯಮ ನಾಯಕರನ್ನು ಪ್ರಚೋದಿಸಿ ಅಪನಂಬಿಕೆ ಹಾಗೂ ವಿಷಕಾರಿ ವಾತಾವರಣ ಸೃಷ್ಟಿಸಲು ಅವರನ್ನೂ ಜೊತೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದೀರಾ?” ಎಂದಿದ್ದಾರೆ.
ಇದನ್ನೂ ಓದಿ: ಟಾಟಾ ಗ್ರೂಪ್ ವಿವಾದ; ‘ಮೋದಿ ಸರ್ಕಾರ ಉದ್ಯಮಿಗಳನ್ನು ಆಟದ ಬೊಂಬೆಯಾಗಿಸಿಕೊಂಡಿದೆ’ ಎಂದು ರಾಹುಲ್ ವಾಗ್ದಾಳಿ
“ದಶಕಗಳ ಕಾಲ ಕಾಂಗ್ರೆಸ್ ಸರ್ಕಾರಗಳು ತಂದಿದ್ದ ‘ಲೈಸೆನ್ಸ್-ಕೋಟಾ ರಾಜ್’ ಭಾರತೀಯ ಉದ್ಯಮಿಗಳ ಉತ್ಸಾಹವನ್ನು ಹತ್ತಿಕ್ಕಿ ಕೋಟ್ಯಂತರ ಜನರನ್ನು ಬಡತನಕ್ಕೆ ತಳ್ಳಿತ್ತು. ಆದರೆ, ಮೋದಿ ಸರ್ಕಾರವು ಉದ್ಯಮ ರಂಗವನ್ನು ದೇಶದ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಶಕ್ತಿ ಎಂದು ಗೌರವಿಸುತ್ತದೆ” ಎಂದಿದ್ದಾರೆ.
ನ್ಯಾಯಾಂಗದ ಮೇಲೆ ನಂಬಿಕೆ ಇರಲಿ:
“ಸಂವಿಧಾನ ಮತ್ತು ದೇಶದ ನ್ಯಾಯಾಲಯಗಳು ನ್ಯಾಯವನ್ನು ಎತ್ತಿಹಿಡಿಯಲು ಸಮರ್ಥವಾಗಿವೆ. ರಾಹುಲ್ ಗಾಂಧಿಯವರೇ, ಸಂಸ್ಥೆಗಳನ್ನು, ರೈತರನ್ನು ಹಾಗೂ ಯುವಕರ ಭವಿಷ್ಯವನ್ನು ಗಟ್ಟಿಗೊಳಿಸಲು ಬೆಂಬಲ ನೀಡುವುದು ಎಲ್ಲಾ ರಾಜಕೀಯ ಪಕ್ಷಗಳು, ನಾಯಕರು ಮತ್ತು ಸರ್ಕಾರಗಳ ಹೊಣೆಯಾಗಿದೆ. ನಿಮ್ಮ ಕಿರಿದಾದ ರಾಜಕೀಯ ಹಿತಾಸಕ್ತಿಗಾಗಿ ಆಧಾರರಹಿತ ಆರೋಪಗಳನ್ನು ಮಾಡುವ ಬದಲು ರಚನಾತ್ಮಕವಾಗಿ ತೊಡಗಿಸಿಕೊಳ್ಳಿ. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಒದಗಿಸುತ್ತದೆ ಮತ್ತು ನ್ಯಾಯಾಲಯಗಳು ಅದನ್ನು ಕಾಯ್ದುಕೊಳ್ಳುತ್ತವೆ. ನೀವು, ನಿಮ್ಮ ಪಕ್ಷ ಮತ್ತು ನಿಮ್ಮ ಪಕ್ಷದ ಪ್ರಧಾನಿಗಳು ನ್ಯಾಯಾಂಗವನ್ನು ನಡೆಸಿಕೊಂಡ ಕೆಟ್ಟ ರೀತಿಯನ್ನು ಇತಿಹಾಸವೇ ಕಂಡಿದೆ. ಆದ್ದರಿಂದ ರಾಹುಲ್ ಗಾಂಧಿಯವರೇ, ಪ್ರತಿಯೊಂದರಲ್ಲೂ ಭೂತಗಳನ್ನು ಕಾಣುವುದನ್ನು ನಿಲ್ಲಿಸಿ” ಎಂದು ಸಚಿವೆ ನಿರ್ಮಲಾ ಲೇವಡಿ ಮಾಡಿದ್ದಾರೆ.
ಏನಿದು ‘ಟಾಟಾ ಸನ್ಸ್’ ನಾಯಕತ್ವ ವಿವಾದ?
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಮರು ನೇಮಕ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಅಕ್ಟೋಬರ್ 26ರಂದು ಟಾಟಾ ಸಂಸ್ಥೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಅವರು ಎತ್ತಿರುವ ಪ್ರಮುಖ ಆಕ್ಷೇಪಗಳು ಹೀಗಿವೆ.
ನಿಯಮಾವಳಿ ಉಲ್ಲಂಘನೆ: ಸೆಪ್ಟೆಂಬರ್ 17ರಂದು ನಡೆದ ಸಭೆಯಲ್ಲಿ ಚಂದ್ರಶೇಖರನ್ ಮರು ನೇಮಕದ ನಿರ್ಣಯವನ್ನು ಮಂಡಿಸಲಾಗಿತ್ತು. ಆದರೆ ಸಭೆಯ ಮೂಲ ಅಜೆಂಡಾದಲ್ಲಿ ಈ ವಿಷಯವೇ ಇರಲಿಲ್ಲ ಮತ್ತು ಸಂಸ್ಥೆಯ ‘ಆರ್ಟಿಕಲ್ಸ್ ಆಫ್ ಅಸೋಸಿಯೇಷನ್’ ಪ್ರಕಾರ ಅಗತ್ಯವಿದ್ದ ಆಯ್ಕೆ ಸಮಿತಿ ಅಥವಾ ಅವರ ಶಿಫಾರಸು ಇರಲಿಲ್ಲ ಎಂದು ನೋಯೆಲ್ ಟಾಟಾ ಆರೋಪಿಸಿದ್ದಾರೆ.
ಸಭೆಯ ವೀಡಿಯೊ ರೇಕಾರ್ಡಿಂಗ್ ನಿರಾಕರಣೆ: ಸಭೆ ನಡೆದು ಮೂರು ವಾರಗಳು ಕಳೆದರೂ ಅದರ ವೀಡಿಯೊ/ಆಡಿಯೊ ರೆಕಾರ್ಡಿಂಗ್, ಅಂತಿಮ ನಡಾವಳಿ ಅಥವಾ ಪ್ರಮಾಣೀಕೃತ ಪ್ರತಿಯನ್ನು ತಮಗೆ ಒದಗಿಸಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಮಾಹಿತಿಗೆ 7 ದಿನಗಳ ಗಡುವು: ಕಂಪನಿ ರಿಜಿಸ್ಟ್ರಾರ್ ಗೆ ಈ ನಿರ್ಣಯದ ಸಿಂಧುತ್ವ ವಿವಾದದಲ್ಲಿದೆ ಎಂದು ಲಿಖಿತವಾಗಿ ತಿಳಿಸುವಂತೆ ಹಾಗೂ 7 ದಿನಗಳ ಒಳಗಾಗಿ ಸಭೆಯ ಸಂಪೂರ್ಣ ಆಡಿಯೊ, ವೀಡಿಯೊ ಮತ್ತು ಸಭೆಯ ನಡಾವಳಿಗಳನ್ನು ತಮಗೆ ಒದಗಿಸುವಂತೆ ನೋಯೆಲ್ ಟಾಟಾ ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಮಾಡಿದ ಆರೋಪವೇನು?:
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ಟಾಟಾ ಸಂಸ್ಥೆಯನ್ನು ಕ್ರಿಮಿನಲಿ ನಾಶಪಡಿಸಲಾಗುತ್ತಿದೆ, ಆದರೂ ದೇಶದ ಯಾವೊಬ್ಬ ಉದ್ಯಮಿ ಅಥವಾ ನಾಯಕನೂ ಇದರ ವಿರುದ್ಧ ಮಾತನಾಡಲು ಧೈರ್ಯ ಮಾಡುತ್ತಿಲ್ಲ.. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಿಮ್ಮನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುವವರೆಗೆ ಇನ್ನು ಎಷ್ಟು ದಿನ ಮೌನವಾಗಿರುತ್ತೀರಿ?” ಎಂದು ಉದ್ಯಮಿಗಳಿಗೆ ಪ್ರಶ್ನಿಸಿದ್ದರು. ಹಾಗೇ, ಭಾರತೀಯ ಉದ್ಯಮ ರಂಗವು ಬಿಜೆಪಿಯ ಆಟದ ವಸ್ತುವಲ್ಲ ಎಂದು ಟೀಕಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ