ಭದ್ರಕ್: ಬೀದಿ ನಾಯಿಯೊಂದು ಬಾಯಲ್ಲಿ ನವಜಾತ ಶಿಶುವಿನ ಮೃತದೇಹವನ್ನು ಕಚ್ಚಿಕೊಂಡು ಓಡುತ್ತಿರುವ ದೃಶ್ಯವನ್ನು ನೋಡಿದರೆ ಮನಸಿಗೆ ಅದೆಷ್ಟು ಸಂಕಟ ಆಗಬಹುದು? ಇಂಥ ಕಲ್ಪಿಸಿಕೊಳ್ಳಲೂ ಭಯಪಡುವಂತ ಘಟನೆ ಒಡಿಶಾದ ಭದ್ರಕ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಅಲ್ಲಿದ್ದ ಸಿಬ್ಬಂದಿ, ರೋಗಿಗಳು, ರೋಗಿಗಳನ್ನು ನೋಡಿಕೊಳ್ಳಲು ಇದ್ದವರು ಈ ದೃಶ್ಯವನ್ನು ನೋಡಿ ಹೌಹಾರಿದ್ದಾರೆ. ಬೀದಿನಾಯಿಗಳ ಹಾವಳಿ, ಕ್ರೌರ್ಯ ಇದೇ ಮೊದಲಲ್ಲ.. ಹಾಗೇ ಒಡಿಶಾದಲ್ಲಿ ಮಾತ್ರವಲ್ಲ. ದೇಶಾದ್ಯಂತ ಇರುವ ಸಮಸ್ಯೆ. ವಾಹನಗಳ ಮೇಲೆ ದಾಳಿ ಇಡುವುದು. ರಾತ್ರಿ ಗುಂಪುಗುಂಪಾಗಿ ಬಂದು ಮನುಷ್ಯರ ಮೇಲೆ ದಾಳಿ ಮಾಡುವುದು. ಚಿಕ್ಕ ಮಕ್ಕಳಿಗೆ ಕಚ್ಚಿ ಗಾಯಗೊಳಿಸುವುದು.. ಇಂಥ ಘಟನೆಗಳು ಬೇಕಾದಷ್ಟು ಸಲ ನಡೆದುಹೋಗಿವೆ.
ಆದರೆ ಹಾಡ ಹಗಲಲ್ಲಿ, ಅಷ್ಟೊಂದು ಜನರು ಇರುವಾಗಲೇ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬೀದಿನಾಯಿಯೊಂದು ಪುಟ್ಟ ಶಿಶುವಿನ ಶವ ಕಚ್ಚಿಕೊಂಡು ಓಡಿಹೋಗುತ್ತಿದ್ದುದು ನಿಜಕ್ಕೂ ಆತಂಕಕಾರಿ ವಿಚಾರ. ಆ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎಂದರೂ ತಪ್ಪಾಗಲಾರದೇನೋ.
ಶಿಶುವಿನ ಮೃತದೇಹವನ್ನು ನಾಯಿ ಎಲ್ಲಿಂದ ಎತ್ತಿಕೊಂಡು ಬಂತು ಎಂಬುದು ಗೊತ್ತಿಲ್ಲ. ಆದರೆ ಅದನ್ನು ಬಾಯಲ್ಲಿ ಕಚ್ಚಿ ಹಿಡಿದು ಸೀದಾ ಸರ್ಕಾರಿ ಆಸ್ಪತ್ರೆಯ ಆವರಣಕ್ಕೆ ಬಂದಿದೆ. ಅಲ್ಲೇ ಕೆಲಹೊತ್ತು ಅತ್ತಿಂದಿತ್ತ ಓಡಾಡಿದೆ. ಅದನ್ನು ನೋಡಿದ ಜನರು ನಾಯಿಯನ್ನು ಹೆದರಿಸಿದ ತಕ್ಷಣ, ಆ ಶವವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದೆ.
ಅದು ಹೆಣ್ಣುಮಗುವಿನ ಶವ. ನಾವು ಮೊದಲು ಜೀವಂತ ಶಿಶುವನ್ನೇ ಅದು ಕಚ್ಚಿಕೊಂಡು ಹೋಗುತ್ತಿದೆ ಎಂದು ಭಾವಿಸಿದೆವು. ಆದರೆ ಬಾಯಿಂದ ನೆಲಕ್ಕೆ ಬಿದ್ದಮೇಲೆ ಹೋಗಿ ನೋಡಿದಾಗ, ಅದು ಮೃತಪಟ್ಟಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿತನವಿದೆ ಎಂದು ಗೊತ್ತಿರಲಿಲ್ಲ. ಈ ಆಸ್ಪತ್ರೆಯ ಮೇಲೆ ನಂಬಿಕೆಯೇ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ನಾಯಿ ಆಸ್ಪತ್ರೆಯ ಒಳಗೆ ಹೇಗೆ ಬಂತು? ಮಗು ಎಲ್ಲಿತ್ತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ಅವಧಿ ಪೂರ್ಣ ಆಗುವುದಕ್ಕೂ ಮೊದಲು ಜನಿಸಿದ ಮಗು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ ಸಂತೋಷ್ ಕುಮಾರ್ ಪಾತ್ರಾ ಹೇಳಿದ್ದಾರೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ಯಾರದ್ದು ಎಂದು ಗೊತ್ತಾಗುತ್ತಿದ್ದಂತೆ ಕ್ರಮ ಕೈಗೊಳ್ಳುತ್ತೇವೆ ಎಂದೂ ತಿಳಿಸಿದ್ದಾರೆ. ಹಾಗೇ ಭದ್ರಕ್ ಜಿಲ್ಲಾ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: ಎರಡು ವರ್ಷದ ನಂತರ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಮೈಮುಲ್ ಚುನಾವಣೆ ಹಿನ್ನಡೆ ಬೆನ್ನಲ್ಲೇ ಸಾ.ರಾ.ಮಹೇಶ್ ಘೋಷಣೆ
ಮಗನ ಬಲವಾದ ಏಟಿಗೆ ತತ್ತರಿಸಿ ಬಿದ್ದು ಮೃತಪಟ್ಟ ವೃದ್ಧ ತಾಯಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಮನಕಲಕುವ ದೃಶ್ಯ
Published On - 1:43 pm, Wed, 17 March 21