ಎರಡು ವರ್ಷದ ನಂತರ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಮೈಮುಲ್ ಚುನಾವಣೆ ಹಿನ್ನಡೆ ಬೆನ್ನಲ್ಲೇ ಸಾ.ರಾ.ಮಹೇಶ್ ಘೋಷಣೆ
ಈ ಹಿಂದೆ ಜಿ.ಟಿ.ದೇವೇಗೌಡ ಅವರು ಹೇಳಿದ್ದ ‘ಶಕುನಿ, ಮಂಥರೆ..’ ಹೇಳಿಕೆಗೆ ತಿರುಗೇಟು ನೀಡಿ, ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿರಲಿಲ್ಲ, ಮಂಥರೆ ಇರಲಿಲ್ಲ ಅಂದಿದ್ರೆ ರಾಮಾಯಣ ನಡೆಯುತ್ತಿರಲಿಲ್ಲ. ಅವರಿಬ್ಬರೂ ಧರ್ಮ ರಾಜ್ಯ ಸ್ಥಾಪನೆಗೆ ಕಾರಣಕರ್ತರು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಮೈಸೂರು: ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದ್ದ ಮೈಮುಲ್ ಚುನಾವಣೆಯಲ್ಲಿ ಅಂತಿಮವಾಗಿ ಜಿ.ಟಿ.ದೇವೇಗೌಡ ಮೇಲುಗೈ ಸಾಧಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾ.ರಾ.ಮಹೇಶ್ ಮಾತನಾಡುವ ವೇಳೆ ಗದ್ಗದಿತರಾಗಿ, ನಾನು 2 ವರ್ಷದ ಬಳಿಕ ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗುತ್ತೇನೆ. ಯಾರ ವಿಚಾರವನ್ನೂ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿರುವುದು ಮೈಸೂರಿನ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮೈಮುಲ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಸಾ.ರಾ.ಮಹೇಶ್, ಸುದ್ದಿಗೋಷ್ಠಿಯಲ್ಲಿ ಜಿ.ಟಿ.ದೇವೇಗೌಡ ಅವರ ಬಗ್ಗೆ ಮಾತನಾಡಿದ್ದು, ನನ್ನಿಂದ ಜಿ.ಟಿ.ದೇವೇಗೌಡರಿಗೆ ತೊಂದರೆ ಆಗಿದೆ ಎಂದು ಚಾಮುಂಡೇಶ್ವರಿ ತಾಯಿ ಮೇಲೆ ಪ್ರಮಾಣ ಮಾಡಲಿ. ಅವರು ಪ್ರಮಾಣ ಮಾಡಿದ್ದೇ ಆದಲ್ಲಿ ನಾನು ರಾಜಕೀಯದಲ್ಲೇ ಇರುವುದಿಲ್ಲ. ಅವರ ಬಗ್ಗೆ ನನಗೆ ಸಾಕಷ್ಟು ಗೌರವ ಇದೆ. ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೀನಿ? ನನ್ನನ್ನು ಏಕೆ ಪದೇಪದೆ ದೂಷಣೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಜಿ.ಟಿ.ದೇವೇಗೌಡ ಅವರು ಹೇಳಿದ್ದ ‘ಶಕುನಿ, ಮಂಥರೆ..’ ಹೇಳಿಕೆಗೆ ತಿರುಗೇಟು ನೀಡಿ, ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿರಲಿಲ್ಲ, ಮಂಥರೆ ಇರಲಿಲ್ಲ ಅಂದಿದ್ರೆ ರಾಮಾಯಣ ನಡೆಯುತ್ತಿರಲಿಲ್ಲ. ಅವರಿಬ್ಬರೂ ಧರ್ಮ ರಾಜ್ಯ ಸ್ಥಾಪನೆಗೆ ಕಾರಣಕರ್ತರು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಜಿ.ಟಿ.ದೇವೇಗೌಡ ಹುಣಸೂರು, ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರಾ? ಅವರು ಕಾಂಗ್ರೆಸ್ ಕಾರ್ಯಕತರಿಗೇ ಮಣೆ ಹಾಕುತ್ತಾರೆ. ಹೆಚ್.ಡಿ.ಕೋಟೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮಣೆ ಹಾಕಿದ್ದಾರೆ. ಮೈಸೂರು ತಾಲೂಕಿನಲ್ಲಿಯೂ ಅದೇ ರೀತಿ ಮಾಡಿದ್ದಾರೆ. 4 ವಿಭಾಗದಲ್ಲಿ ಒಂದೇ ಒಂದು ಸೀಟು ಜೆಡಿಎಸ್‌ಗೆ ನೀಡಿಲ್ಲ. 2 ಕಡೆ ಬಿಜೆಪಿ, ಕಾಂಗ್ರೆಸ್, ಜಿ.ಟಿ.ದೇವೇಗೌಡ ಒಂದಾದರು. ಇಷ್ಟೆಲ್ಲಾ ಮಾಡಿ, ಈ ಚುನಾವಣೆಯಲ್ಲಿ ಪಕ್ಷವನ್ನು ತರಬಾರದೆಂದು ಹೇಳುತ್ತಾರೆ. ಇಷ್ಟಕ್ಕೂ ಪಕ್ಷವನ್ನು ತಂದವರು ಯಾರು ಎಂದು ಸಾ.ರಾ.ಮಹೇಶ್ ಪ್ರಶ್ನೆ ಎತ್ತಿದ್ದಾರೆ.
ಜಿಟಿಡಿ ಆಲದ ಮರ ಇದ್ದಂತೆ, ಅದು ಬೇರು ಬಿಟ್ಟರೆ ಬೇರೆ ಸಸಿ ಬೆಳೆಯಲು ಬಿಡಲ್ಲ ಎಂಎಲ್ಸಿ ಚುನಾವಣೆಯಲ್ಲಿ ಲಕ್ಷ್ಮಣ ಸವದಿಗೆ ಮತ ಹಾಕಿದ್ರಿ, ಮೈಸೂರು ಮೇಯರ್ ಚುನಾವಣೆಗೆ ಬರ್ತೀನೆಂದು ಬರಲಿಲ್ಲ. ಹುಣಸೂರು ಉಪಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಿದ್ರಿ? ಹೀಗೆಲ್ಲಾ ಮಾಡುವ ನಿಮ್ಮ ನಿಲುವು ಏನು? ಎಂದು ಜಿ.ಟಿ.ದೇವೇಗೌಡರನ್ನು ಕಟುವಾಗಿ ಪ್ರಶ್ನಿಸಿರುವ ಶಾಸಕ ಸಾ.ರಾ.ಮಹೇಶ್, ಜಿಟಿಡಿ ಆಲದ ಮರ ಇದ್ದಂತೆ, ಅದು ಬೇರುಬಿಟ್ಟರೆ ಬೇರೆ ಸಸಿ ಬೆಳೆಯಲು ಬಿಡಲ್ಲ ಎಂದು ಕುಹಕವಾಡಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ, ಜೆಡಿಎಸ್ ಕಾರ್ಯಕರ್ತರು ಹಾಗೂ ಸಾ.ರಾ.ಮಹೇಶ್ ಬೆಂಬಲಿಗರನ್ನು ನಿರ್ನಾಮ ಮಾಡುವ ಯತ್ನವಾಗುತ್ತಿದೆ ಎಂಬ ಧಾಟಿಯಲ್ಲಿ ಆರೋಪಿಸಿರುವ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಎಂಬ ಮರಕ್ಕೆ ಜೆಡಿಎಸ್ ಕಾರ್ಯಕರ್ತರು ನೀರು ಹಾಕಿದ್ದಾರೆ. ಆದರೆ, ಅವರು ಯಾರನ್ನೂ ಬೆಳೆಯಲಿಕ್ಕೆ ಬಿಟ್ಟಿಲ್ಲ. ಹೀಗಾಗಿ ನಾವು ಬೇರೆ ಸಸಿ ನೆಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಅಂತೆಯೇ ಸಾ.ರಾ.ಮಹೇಶ್ ಹೆಚ್.ಡಿ.ಕುಮಾರಸ್ವಾಮಿ ಅವರ ದಾರಿ ತಪ್ಪಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತ್ಯುತ್ತರಿಸಿ, ಯಾರನ್ನ ಯಾರೂ ದಾರಿ ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಈಗ ಹೆಚ್.ಡಿ.ಕುಮಾರಸ್ವಾಮಿ ದಾರಿ ತಪ್ಪಿದ್ದರೆ ತಾನೇ? ಹಾಗೆ ಹೇಳಲು ಸಾಧ್ಯ. ನಾನು ಹೆಚ್.ಡಿ.ಕುಮಾರಸ್ವಾಮಿ ವಿಚಾರದಲ್ಲಿ ನಿಷ್ಠಾವಂತ ಕಾರ್ಯಕರ್ತ. ನಾನು ಅಧಿಕಾರಕ್ಕಾಗಿ ಆಸೆ ಪಡುವವನಲ್ಲ. ಜಿ.ಟಿ.ದೇವೇಗೌಡರಿಗಿಂತ ನಾನೇ 6 ತಿಂಗಳು ಜಾಸ್ತಿ ಶಾಸಕನಾಗಿದ್ದೇನೆ. 172 ತಿಂಗಳು ಜಿ.ಟಿ.ದೇವೇಗೌಡರು ಶಾಸಕರಾಗಿದ್ದಾರೆ, ನಾನು 180 ತಿಂಗಳು ಶಾಸಕನಾಗಿದ್ದೇನೆ ಎಂದು ಹೇಳಿರುವ ಸಾ.ರಾ.ಮಹೇಶ್, ಈಗಾಗಲೇ ಒಬ್ಬರು ಚಾಮುಂಡಿಬೆಟ್ಟದಲ್ಲಿ ಕಣ್ಣೀರು ಹಾಕಿಸಿ ಅನುಭವಿಸುತ್ತಿದ್ದಾರೆ. ಸತ್ಯಾಸತ್ಯತೆ ಚಾಮುಂಡೇಶ್ವರಿ ಮುಂದೆ ನಿರ್ಧಾರವಾಗಲಿ ಎನ್ನುವ ಮೂಲಕ ಜಿ.ಟಿ.ದೇವೇಗೌಡರಿಗೆ ಮಾತಿನಲ್ಲೇ ಚಾಟಿ ಬಿಸಿದ್ದಾರೆ.
ಮೈಮುಲ್ ಚುನಾವಣೆ: ರಣಾಂಗಣವಾದ ಮತದಾನ ಕೇಂದ್ರ, ಜಿ.ಟಿ. ದೇವೇಗೌಡ-ಹೆಚ್.ಡಿ. ಕುಮಾರಸ್ವಾಮಿ ಬಣಗಳ ನಡುವೆ ಗಲಾಟೆ
ಸಹಕಾರಿ ಕ್ಷೇತ್ರದಲ್ಲಿ ನನಗೆ ಅನುಭವ ಇಲ್ಲವೆಂದು HDK ಹೇಳಿದ್ದರು -ಮೈಮುಲ್ ಚುನಾವಣೆಯಲ್ಲಿ GTD ಬಣಕ್ಕೆ ಭರ್ಜರಿ ಜಯ