ಉಕ್ರೇನ್ನಲ್ಲಿ ರಷ್ಯಾ ಮಾಡುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದ ಕಂಗಾಲಾಗಿರುವ ಭಾರತೀಯರು ಮತ್ತು ಇತರ ದೇಶಗಳ ಪ್ರಜೆಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್, ಬೇಸ್ಮೆಂಟ್ಗಳಲ್ಲಿ ಆಶ್ರಯ ಪಡೆದಿದ್ದಾರೆ. ಜೀವ ರಕ್ಷಣೆಗಾಗಿ ನೆಲದಾಳಕ್ಕೆ ಹೋಗಿರುವ ಜನರಿಗೆ ಈಗೀಗ ಊಟ-ತಿಂಡಿ ಸಿಗುತ್ತಿಲ್ಲ. ಶೌಚಗೃಹ ಇಲ್ಲದೆ ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ಬಾಂಬ್, ಮಿಸೆಲ್, ರಾಕೆಟ್, ಫೈರಿಂಗ್ ಶಬ್ದವೇ ಕಿವಿಗೆ ಅಪ್ಪಳಿಸುತ್ತಿದೆ. ಅದರಲ್ಲೂ ನಿನ್ನೆ ಖಾರ್ಕೀವ್ನಲ್ಲಿ ಭಾರತದ ವಿದ್ಯಾರ್ಥಿ ನವೀನ್ ರಷ್ಯಾ ದಾಳಿಯಿಂದ ಮೃತಪಟ್ಟ ನಂತರ ಭಾರತ ಸೇರಿ ಇನ್ನಿತರ ಕೆಲವು ದೇಶಗಳ ವಿದ್ಯಾರ್ಥಿಗಳು, ಉದ್ಯೋಗಿಗಳೆಲ್ಲ ಇಂದು ಖಾರ್ಕೀವ್ನಿಂದ ನಡೆದುಕೊಂಡೇ ಸಮೀಪದ ರೈಲ್ವೆ ಸ್ಟೇಶನ್ಗೆ ಹೊರಟಿದ್ದಾರೆ. ಭಾರತ 700 ಮಂದಿ ಸೇರಿ ಸುಮಾರು 1000 ಜನರು, ಆದದ್ದು ಆಗಲಿ, ದೇವರಿದ್ದಾನೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕೈಯಲ್ಲಿ ಭಾರತದ ಧ್ವಜ ಹಿಡಿದು, ತಮ್ಮ ಬಂಕರ್ನಿಂದ ಏಳು ಕಿಲೋಮೀಟರ್ ದೂರದಲ್ಲಿರುವ ರೈಲ್ವೆ ಸ್ಟೇಶನ್ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಇದರಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ಹಾವೇರಿ ಮೂಲದ ವೆಂಕಟೇಶ ವೈಶ್ಯರ್ ಎಂಬುವರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ವೆಂಕಟೇಶ್ ಅವರ ಪುತ್ರ ಅಮಿತ್ (23). ನಿನ್ನೆ ಮೃತಪಟ್ಟ ವಿದ್ಯಾರ್ಥಿ ನವೀನ್ ಮತ್ತು ಅಮಿತ್ ಎಲ್ಲ ಒಂದೇ ಬಂಕರ್ನಲ್ಲಿಯೇ ಇದ್ದರು. ಅಮಿತ್ ಖಾರ್ಕೀವ್ ವೈದ್ಯಕೀಯ ಕಾಲೇಜಿನಲ್ಲಿ ಐದನೇ ವರ್ಷದ ಮೆಡಿಕಲ್ ಓದುತ್ತಿದ್ದರೆ, ನವೀನ್ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ನವೀನ್ ಸಾವಿನಿಂದ ಶಾಕ್ ಆಗಿರುವ ಇವರೆಲ್ಲ, ಇನ್ನು ಬಂಕರ್ನಲ್ಲಿ ಕುಳಿತರೆ ಪ್ರಯೋಜನವಿಲ್ಲ. ಏನಾದರೂ ರಿಸ್ಕ್ ತೆಗೆದುಕೊಂಡ ವಿನಃ ಪಾರಾಗಲು ಸಾಧ್ಯವಿಲ್ಲ ಎಂದು ಗಟ್ಟಿಮನಸು ಮಾಡಿದ್ದಾರೆ. ಹೀಗಾಗಿ ಅಮಿತ್, ಅವರ ಕಸಿನ್ ಸುಮನ್ ಮತ್ತು ಇತರರೆಲ್ಲ ಸೇರಿ ಕಾಲ್ನಡಿಗೆ ಮೂಲಕ ಹೊರಟಿದ್ದಾರೆ ಎಂದು ಹೇಳಲಾಗಿದೆ.
ನವೀನ್ ಮೃತಪಟ್ಟ ಬೆನ್ನಲ್ಲೇ ಅವರ ಸೀನಿಯರ್ ಆಗಿದ್ದ ಅಮಿತ್ ಅವರ ತಂದೆ ವೆಂಕಟೇಶ್ ಅವರನ್ನು ಹಲವು ಮಾಧ್ಯಮಗಳು ಮಾತನಾಡಿಸಿವೆ. ಪಿಟಿಐಗೆ ಕೂಡ ವೆಂಕಟೇಶ್ ಪ್ರತಿಕ್ರಿಯೆ ನೀಡಿ, ನನ್ನ ಮಗ ಸೇರಿ ಅಲ್ಲಿರುವ ಎಲ್ಲರೂ ಮೂರ್ನಾಲ್ಕು ದಿನಗಳಿಂದ ಊಟ-ತಿಂಡಿ ಮಾಡಿಲ್ಲ. ಚಾಕಲೇಟ್, ಬಿಸ್ಕಟ್ ತಿಂದುಕೊಂಡಿದ್ದಾರೆ. ಅವರ ಪರಿಸ್ಥಿತಿ ನೋಡುತ್ತಿದ್ದರೆ ಕರುಳು ಕಿವುಚಿದಂತಾಗುತ್ತದೆ ಎಂದಿದ್ದಾರೆ. ಇನ್ನೊಂದೆಡೆ, ನವೀನ್ ಮೃತದೇಹದ ಫೋಟೋ ಇಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ. ಅದನ್ನು ನೋಡಿದ ನವೀನ್ ಪಾಲಕರು, ಸೋದರ ಆಕ್ರಂದಿಸುತ್ತಿದ್ದಾರೆ.
ಮೃತ ನವೀನ್ ಕುಟುಂಬದೊಂದಿಗೆ ಈಗಾಗಲೇ ಪ್ರಧಾನಿ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನವೀನ್ ಮೃತದೇಹವನ್ನು ಭಾರತಕ್ಕೆ ತರಲು ಎಷ್ಟಾಗತ್ತೋ ಅಷ್ಟು ಪ್ರಯತ್ನ ಮಾಡುತ್ತೇನೆ. ಆದರೂ ಕಷ್ಟವಾಗಬಹುದು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಜತೆಯೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಧ್ವಜದಿಂದಾಗಿ ಉಕ್ರೇನ್ನಿಂದ ಸುರಕ್ಷಿತವಾಗಿ ಪಾರಾದ ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳು!
Published On - 2:51 pm, Wed, 2 March 22