TTD: ತಿರುಪತಿ ದೇವಸ್ಥಾನದಲ್ಲಿ ಅನಿಯಮಿತ ಪೂಜೆ ಆರೋಪ; ಸ್ಪಷ್ಟನೆ ನೀಡಲು ಟಿಟಿಡಿಗೆ ಸುಪ್ರೀಂ ಕೋರ್ಟ್ ಆದೇಶ

| Updated By: ಸುಷ್ಮಾ ಚಕ್ರೆ

Updated on: Sep 29, 2021 | 5:15 PM

Tirupati Temple | ನಾವೆಲ್ಲರೂ ವೆಂಕಟೇಶ್ವರ ಸ್ವಾಮಿ ಭಕ್ತರಾಗಿದ್ದೇವೆ. ತಿರುಪತಿಯಲ್ಲಿ ಸಂಪ್ರದಾಯದ ಪ್ರಕಾರ ಎಲ್ಲ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಹಾಗೂ ಸೇವೆ ನಡೆಯಬೇಕೆಂಬುದು ನಾವು ಕೂಡ ಬಯಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ ಅರ್ಜಿದಾರರಿಗೆ ಹೇಳಿದ್ದಾರೆ.

TTD: ತಿರುಪತಿ ದೇವಸ್ಥಾನದಲ್ಲಿ ಅನಿಯಮಿತ ಪೂಜೆ ಆರೋಪ; ಸ್ಪಷ್ಟನೆ ನೀಡಲು ಟಿಟಿಡಿಗೆ ಸುಪ್ರೀಂ ಕೋರ್ಟ್ ಆದೇಶ
ತಿರುಪತಿ ದೇವಸ್ಥಾನ
Follow us on

ನವದೆಹಲಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಅನಿಯಮಿತವಾಗಿ ಸೇವೆ ಹಾಗೂ ಪೂಜೆಗಳನ್ನು ನಡೆಸಲಾಗುತ್ತಿದೆ ಎಂದು ಭಕ್ತರೊಬ್ಬರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಉಂಟಾಗಿರುವ ಕುಂದು ಕೊರತೆಯ ಬಗ್ಗೆ ಭಕ್ತರು ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಬೇಕು ಹಾಗೂ ಈ ಬಗ್ಗೆ ಕೋರ್ಟ್​ಗೂ ವಿವರಣೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ, ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಈ ಬಗ್ಗೆ ಸಲ್ಲಿಕೆಯಾದ ವಿಶೇಷ ಅರ್ಜಿ ವಿಚಾರಣೆಯನ್ನು ಇಂದು ನಡೆಸಿತು. ಈ ಕುರಿತು ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ತಿರುಪತಿಯನ್ನು ಎಲ್ಲ ಸೇವೆಗಳನ್ನೂ ನಿಯಮಿತವಾಗಿ ನಡೆಸುವಂತೆ ಆದೇಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 6ಕ್ಕೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಮುಂದಿನ ವಿಚಾರಣೆ ನಡೆಸಲಿದೆ. ಇದು ತಿರುಪತಿಯ ದೇವಸ್ಥಾನದ ಆಡಳಿತ ಮಂಡಳಿಗೆ ಸಂಬಂಧಿಸಿದ ವಿಷಯವಾಗಿದ್ದು, ಮುಂದಿನ ವಿಚಾರಣೆ ವೇಳೆಯೂ ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಸಾಧ್ಯತೆಗಳು ಕಡಿಮೆ. ನಾವೆಲ್ಲರೂ ವೆಂಕಟೇಶ್ವರ ಸ್ವಾಮಿ ಭಕ್ತರಾಗಿದ್ದೇವೆ. ತಿರುಪತಿಯಲ್ಲಿ ಸಂಪ್ರದಾಯದ ಪ್ರಕಾರ ಎಲ್ಲ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಹಾಗೂ ಸೇವೆ ನಡೆಯಬೇಕೆಂಬುದು ನಾವು ಕೂಡ ಬಯಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ ಅರ್ಜಿದಾರರಿಗೆ ಹೇಳಿದ್ದಾರೆ.

ಹಾಗೇ, ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಇನ್ನು ಮುಂದೆ ಕೊವಿಡ್ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅವಕಾಶ. ಅಥವಾ ಕೊರೊನಾ ನೆಗೆಟಿವ್ ವರದಿಯನ್ನು ನೀಡುವುದು ಕಡ್ಡಾಯ. ಅ. 1ರಿಂದ ಈ ಹೊಸ ನಿಯಮ ಜಾರಿಯಾಗಲಿದೆ. ಆಂಧ್ರಪ್ರದೇಶದಲ್ಲೂ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಅಥವಾ ಎರಡೋ ಡೋಸ್ ಕೊರೊನಾ ಲಸಿಕೆಯ ಸರ್ಟಿಫಿಕೆಟ್ ಎರಡರಲ್ಲಿ ಒಂದು ಕಡ್ಡಾಯವಾಗಿದೆ. ಕೊರೊನಾ ನೆಗೆಟಿವ್ ಸರ್ಟಿಫಿಕೆಟ್ ಕೂಡ 72 ಗಂಟೆಯೊಳಗೆ ಪಡೆದಿದ್ದಾಗಿರಬೇಕು.

ಇದನ್ನೂ ಓದಿ: TTD: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕೊವಿಡ್ ನೆಗೆಟಿವ್ ಸರ್ಟಿಫಿಕೆಟ್, ಕೊರೊನಾ ಲಸಿಕೆ ಕಡ್ಡಾಯ

Hassan: ತಿರುಪತಿ ಮಾದರಿಯಲ್ಲಿ ಹಾಸನಾಂಬೆ ದರ್ಶನಕ್ಕೆ ಚಿಂತನೆ: ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿಕೆ