ZyCov-D Vaccine: ಅ.2ರಂದು ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಜೈಕೋವ್-ಡಿ ಬೆಲೆ ನಿಗದಿ ಬಗ್ಗೆ ಚರ್ಚೆ
Zydus Cadila Vaccine | ಈ ವಾರ ಜೈಡಸ್ ಕ್ಯಾಡಿಲಾ ಕಂಪನಿಯ ಜೊತೆಗೆ ಕೇಂದ್ರ ಸರ್ಕಾರ ಲಸಿಕೆಯ ಬೆಲೆ ನಿಗದಿ ಬಗ್ಗೆ ಮಾತುಕತೆ ನಡೆಸಲಿದೆ. ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್-ಡಿ ಕೊರೊನಾ ಲಸಿಕೆಯು ಡಿಎನ್ಎ ಆಧಾರಿತ ಲಸಿಕೆಯಾಗಿದೆ.
ನವದೆಹಲಿ: ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮಾತ್ರವಲ್ಲದೆ ಭಾರತದ ಮತ್ತೊಂದು ಕೊರೊನಾ ಲಸಿಕೆ ಅಂದರೆ ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್ ಡಿ ಲಸಿಕೆ. ಈಗಾಗಲೇ ಡಿಸಿಜಿಐ ಜೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಈಗ ಜೈಕೋವ್-ಡಿ ಲಸಿಕೆಯನ್ನು ಭಾರತದ ಸಾರ್ವತ್ರಿಕ ಲಸಿಕಾ ಅಭಿಯಾನದಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೈಡಸ್ ಕ್ಯಾಡಿಲಾ ಕಂಪನಿಯಿಂದ ಲಸಿಕೆಯನ್ನು ಖರೀದಿಸಲು ಬೆಲೆ ನಿಗದಿ ಬಗ್ಗೆ ಈ ವಾರ ಚರ್ಚೆಯಾಗಲಿದೆ. ಬಹುತೇಕ ಆಕ್ಟೋಬರ್ 2ರಂದು ದೇಶಕ್ಕೆ ಮತ್ತೊಂದು ಲಸಿಕೆಯನ್ನು ನೀಡುವ ಸಾಧ್ಯತೆ ಇದೆ.
ಭಾರತದಲ್ಲಿ ಕೊರೊನಾ ಲಸಿಕೆಯ ಸಾರ್ವತ್ರಿಕ ಅಭಿಯಾನಕ್ಕೆ ವೇಗ ಸಿಕ್ಕಿದೆ. ಈಗ ಈ ಲಸಿಕಾ ಅಭಿಯಾನಕ್ಕೆ ಮತ್ತೊಂದು ಲಸಿಕೆಯು ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದೆ. ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್-ಡಿ ಲಸಿಕೆಯನ್ನು ಕಂಪನಿಯಿಂದ ಖರೀದಿಸಿ ಸಾರ್ವತ್ರಿಕ ಲಸಿಕಾ ಅಭಿಯಾನದಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಈ ವಾರ ಜೈಡಸ್ ಕ್ಯಾಡಿಲಾ ಕಂಪನಿಯ ಜೊತೆಗೆ ಕೇಂದ್ರ ಸರ್ಕಾರ ಲಸಿಕೆಯ ಬೆಲೆ ನಿಗದಿ ಬಗ್ಗೆ ಮಾತುಕತೆ ನಡೆಸಲಿದೆ. ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್-ಡಿ ಕೊರೊನಾ ಲಸಿಕೆಯು ಡಿಎನ್ಎ ಆಧಾರಿತ ಲಸಿಕೆಯಾಗಿದೆ. ವಿಶ್ವದ ಮೊದಲ ಡಿಎನ್‌ಎ ಲಸಿಕೆಯೇ ಜೈಕೋವ್ ಡಿ ಲಸಿಕೆ. ಇದು ಭಾರತದ ಮತ್ತೊಂದು ಸ್ವದೇಶಿ ಲಸಿಕೆ. ಈಗಾಗಲೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಜೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ತನ್ನ ಒಪ್ಪಿಗೆ ನೀಡಿದೆ. ಜೈಕೋವ್-ಡಿ ಲಸಿಕೆಯನ್ನು ವಯಸ್ಕರು ಮಾತ್ರವಲ್ಲದೇ, 12 ವರ್ಷ ಮೇಲ್ಪಟ್ಟವರಿಗೂ ನೀಡಬಹುದು ಎನ್ನುವುದು ಇದರ ಮತ್ತೊಂದು ವಿಶೇಷ.
ಜೈಕೋವ್-ಡಿ ಲಸಿಕೆಯ ಬೆಲೆ ನಿಗದಿ ಬಗ್ಗೆ ಈ ವಾರ ಅಂತಿಮ ಹಂತದ ಮಾತುಕತೆಗಳು ನಡೆಯಲಿವೆ. ಕಂಪನಿಗೆ ಬೆಲೆ ಬಗ್ಗೆ ವಿವರ ಸಲ್ಲಿಸಲು ಜೈಡಸ್ ಕ್ಯಾಡಿಲಾ ಕಂಪನಿಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಲಸಿಕೆಯ ಬೆಲೆ ನಿಗದಿ ಬಗ್ಗೆ ಕೇಂದ್ರ ಸರ್ಕಾರ-ಕಂಪನಿ ನಡುವೆ ಮಾತುಕತೆಯ ಸಂಧಾನ ನಡೆಯುತ್ತಿದೆ. ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದೆ.
ಕೇಂದ್ರ ಸರ್ಕಾರವು ಆಕ್ಟೋಬರ್ 2ರಂದು ಜೈಕೋವ್-ಡಿ ಲಸಿಕೆಯನ್ನು ಅಧಿಕೃತವಾಗಿ ಜನರಿಗೆ ನೀಡುವುದನ್ನು ಆರಂಭಿಸಲು ಬಯಸಿದೆ. ಆಕ್ಟೋಬರ್ 2 ಮಹಾತ್ಮ ಗಾಂಧೀಜಿ ಜನ್ಮದಿನ. ಅಂದೇ ಜೈಕೋವ್-ಡಿ ಲಸಿಕೆಯನ್ನು ಲಾಂಚ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಈಗ ಲಸಿಕೆಯ ಬೆಲೆ ನಿಗದಿಯ ಮಾತುಕತೆಗೆ ವೇಗ ಸಿಕ್ಕಿದೆ. ರಾಷ್ಟ್ರೀಯ ಕೋವಿಡ್ ಲಸಿಕಾ ತಜ್ಞರ ಸಮಿತಿಯ ಮುಖ್ಯಸ್ಥರಾದ ವಿ.ಕೆ. ಪೌಲ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗ ಜೈಡಸ್ ಕ್ಯಾಡಿಲಾ ಕಂಪನಿಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಲಸಿಕೆಯ ಬೆಲೆ ನಿಗದಿ ಮಾಡುವರು. ಜೈಕೋವ್-ಡಿ ಲಸಿಕೆಯು ಕೊವಿಶೀಲ್ಡ್ ಲಸಿಕೆಯ ಬೆಲೆಗಿಂತ ಹೆಚ್ಚಾಗಿರಲಿದೆ. ಆದರೇ, ಉಳಿದ ಲಸಿಕೆಗಳ ಜೊತೆಗೆ ಜೈಕೋವ್ ಡಿ ಲಸಿಕೆಯ ಬೆಲೆಯನ್ನು ಹೋಲಿಕೆ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊವಿಶೀಲ್ಡ್ ಲಸಿಕೆಯನ್ನು ಕೇಂದ್ರ ಸರ್ಕಾರವು ಪ್ರತಿ ಡೋಸ್ ಗೆ 157.50 ರೂಪಾಯಿ ದರದಲ್ಲಿ ಖರೀದಿಸುತ್ತಿದೆ. ಆದರೇ, ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯನ್ನು ಪ್ರತಿ ಡೋಸ್ ಗೆ 225 ರೂಪಾಯಿಗೆ ಖರೀದಿಸುತ್ತಿದೆ.
ಜೈಕೋವ್ ಡಿ ಲಸಿಕೆಯ ಮೊದಲ ಕೆಲ ಬ್ಯಾಚ್ ಲಸಿಕೆಗಳನ್ನ ಈಗಾಗಲೇ ಹಿಮಾಚಲ ಪ್ರದೇಶದ ಕಸೂಲಿಯಲ್ಲಿರುವ ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿಯಲ್ಲಿ ಸುರಕ್ಷತೆ, ಪರಿಣಾಮಕಾರಿತನದ ಬಗ್ಗೆ ಪರೀಕ್ಷಿಸಿ ಒಪ್ಪಿಗೆ ನೀಡಲಾಗಿದೆ. ಮೊದಲ ಬ್ಯಾಚ್ ಲಸಿಕೆಗಳನ್ನು ಆಕ್ಟೋಬರ್ 2 ರಿಂದಲೇ ಜನರಿಗೆ ನೀಡಲು ಪೂರ್ಣ ಪ್ರಮಾಣದ ಸಿದ್ದತೆಗಳನ್ನು ನಡೆಸಲಾಗುತ್ತಿದೆ. ಜೈಡಸ್ ಕ್ಯಾಡಿಲಾ ಕಂಪನಿಯು ಲಸಿಕೆ ನೀಡುವವರಿಗೆ ತರಬೇತಿಯನ್ನು ನೀಡಿದೆ. ಏಕೆಂದರೇ, ಜೈಕೋವ್-ಡಿ ಲಸಿಕೆಯು ಸಿರಿಂಜ್ ಮೂಲಕ ನೀಡುವ ಲಸಿಕೆಯಲ್ಲ. ಇದು ಸಿರಿಂಜ್ ಫ್ರೀ ಲಸಿಕೆ. ಜೈಕೋವ್-ಡಿ ಲಸಿಕೆಗೆ ಡಿಸಿಜಿಐ ಆಗಸ್ಟ್ 20ರಂದು ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಇದು ಮೂರು ಡೋಸ್ ಕೊರೊನಾ ಲಸಿಕೆಯಾಗಿದೆ. ಈ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದಾಗಿರುವುದರಿಂದ ಕೇಂದ್ರ ಸರ್ಕಾರವು ಕಂಪನಿಯಿಂದ ಖರೀದಿಸಿದ ಲಸಿಕೆಯಲ್ಲಿ ಬಹುಪಾಲು ಲಸಿಕೆಯನ್ನು 12 ರಿಂದ 18 ವರ್ಷದೊಳಗಿನವರಿಗೆ ನೀಡಬೇಕು ಎಂಬ ಉದ್ದೇಶ ಇಟ್ಟುಕೊಂಡಿದೆ.
ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಸಮಿತಿಯು ಇಂದು ಸಭೆ ಸೇರಿ ಮಕ್ಕಳಿಗೆ ಲಸಿಕೆ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡುವ ಸಾಧ್ಯತೆ ಇದೆ. ಕೋವಿಡ್ ವರ್ಕಿಂಗ್ ಗ್ರೂಪ್ ಪ್ರಕಾರ, ಬೇರೆ ಬೇರೆ ರೋಗಗಳಿಂದ ಬಳಲುತ್ತಿರುವ ಮಕ್ಕಳಿಗೆ ಮಾತ್ರ ಮೊದಲು ಜೈ ಕೋವ್ ಡಿ ಲಸಿಕೆಯನ್ನು ನೀಡುವುದು ಸೂಕ್ತ ಎಂಬ ಅಭಿಪ್ರಾಯ ತಳೆದಿದೆ. ಹೃದ್ರೋಗ, ಸಕ್ಕರೆ ರೋಗ ಸೇರಿದಂತೆ ಇನ್ನೂ ಕೆಲ ರೋಗಗಳಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲಿಗೆ ಜೈ ಕೋವ್ ಡಿ ಲಸಿಕೆ ನೀಡಬೇಕೆಂದು ಕೋವಿಡ್ ವರ್ಕಿಂಗ್ ಗ್ರೂಪ್ ಅಭಿಪ್ರಾಯಪಟ್ಟಿದೆ . ಆರೋಗ್ಯವಂತ ಮಕ್ಕಳಿಗೆ ಈ ವರ್ಷ ಕೊರೊನಾ ಲಸಿಕೆ ಸಿಗುವ ಸಾಧ್ಯತೆಗಳಿಲ್ಲ. ಎಲ್ಲ ಮಕ್ಕಳಿಗೂ ಕೊರೊನಾ ಲಸಿಕೆ ನೀಡುವ ಅಗತ್ಯವಿಲ್ಲ ಎಂಬುದು ಸರ್ಕಾರದ ವಾದ.
ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯು ಕೇಂದ್ರ ಸರ್ಕಾರದ ಬಯೋಟೆಕ್ನಾಲಜಿ ಇಲಾಖೆ ಹಾಗೂ ಐಸಿಎಂಆರ್ ಬೆಂಬಲದೊಂದಿಗೆ ವಿಶ್ವದ ಮೊದಲ ಡಿಎನ್ಎ ಲಸಿಕೆಯನ್ನು ಅಭಿವೃದ್ದಿಪಡಿಸಿದೆ.
ಪ್ರತಿ ತಿಂಗಳಿಗೆ 1 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಜೈಡಸ್ ಕ್ಯಾಡಿಲಾ ಕಂಪನಿಯು ಹೊಂದಿದೆ. ಆದರೇ, ಹಂತ ಹಂತವಾಗಿ ಲಸಿಕೆಯ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಲಾಗುತ್ತೆ ಎಂದು ಜೈಡಸ್ ಕ್ಯಾಡಿಲಾ ಕಂಪನಿಯ ಎಂ.ಡಿ. ಶೆರ್ವಿಲ್ ಪಟೇಲ್ ಹೇಳಿದ್ದಾರೆ. ಜೈಕೋವ್ ಡಿ ಲಸಿಕೆಯು ಶೇ. 67ರಷ್ಟು ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ವೈದ್ಯಕೀಯ ಪ್ರಯೋಗದ ಬಳಿಕ ಕಂಪನಿಯು ಹೇಳಿದೆ. ಭಾರತದ ಮೊದಲ ಮಕ್ಕಳ ಲಸಿಕೆಯೇ ಜೈಕೋವ್ ಡಿ ಲಸಿಕೆ. ಜೊತೆಗೆ ಡೆಲ್ಟಾ ವೈರಸ್ ವಿರುದ್ಧ ಜೈಕೋವ್ ಡಿ ಲಸಿಕೆಯು ಹೆಚ್ಚು ಪರಿಣಾಮಕಾರಿ. ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಈ ಲಸಿಕೆಯು ಉತ್ತೇಜನ ನೀಡಲಿದೆ.
ಇದನ್ನೂ ಓದಿ: ’ಜೈಡಸ್ ಕ್ಯಾಡಿಲಾ ಕೊವಿಡ್ 19 ಲಸಿಕೆ ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗ ಮುಕ್ತಾಯ, ಶೀಘ್ರದಲ್ಲೇ ಬಳಕೆಗೆ ಲಭ್ಯ‘
ಅಕ್ಟೋಬರ್ ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ ಜೈಡಸ್ ಕ್ಯಾಡಿಲಾ ಕೊವಿಡ್ 19 ಲಸಿಕೆ; 3 ಡೋಸ್ನ ವ್ಯಾಕ್ಸಿನ್ ಇದು