ದೆಹಲಿ: ಆಮ್ಲಜನಕ ಸಾಂದ್ರಕ ಆಮದಿನ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಚಾರಕ್ಕೆ ಸಂಬಂಧಿಸಿ ಪ್ರಮುಖ ಬೆಳವಣಿಗೆ ಇಂದು (ಜೂನ್ 1) ನಡೆದಿದೆ. ದೆಹಲಿ ಹೈಕೋರ್ಟ್ ನೀಡಿದ್ದ ಜಿಎಸ್‌ಟಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಸೂಚಿಸಿದೆ. ಆಕ್ಸಿಜನ್ ಸಾಂದ್ರಕ ಮೇಲೆ ಜಿಎಸ್‌ಟಿ ವಿಧಿಸುವುದು ಅಸಂವಿಧಾನಿಕ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ಆ ಬಳಿಕ, ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಿಂದ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದೀಗ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಹೊರಡಿಸಿದೆ.
ಆಗಸ್ಟ್ 31ರವರೆಗೆ ಕೊವಿಡ್ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಉಪಕರಣಗಳ ಆಮದಿನ ಮೇಲೆ ಜಿಎಸ್‌ಟಿ ವಿನಾಯತಿ ನೀಡಲು ಮೇ 28ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 43ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಬ್ಲ್ಯಾಕ್ ಫಂಗಸ್‌ಗೆ ನೀಡುವ ಔಷಧಕ್ಕೂ ಜಿಎಸ್‌ಟಿ ವಿನಾಯತಿ ಘೋಷಿಸಲಾಗಿತ್ತು. ಜಿಎಸ್‌ಟಿ ಮಂಡಳಿಯ ಸಭೆ ಮುಗಿಸಿದ ನಂತರ ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಜನರು ಮೊದಲೇ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ನಿಂದ ಜನರ ದುಡಿಮೆ, ಸಂಪಾದನೆಗೂ ಹೊಡೆತ ಬಿದ್ದಿದೆ. ಕೊರೊನಾದಿಂದ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇಂಥ ಸ್ಥಿತಿಯಲ್ಲಿ ಜೀವ ಉಳಿಸುವ ಔಷಧಿಗಳು, ಕೊರೊನಾ ಲಸಿಕೆ, ವೆಂಟಿಲೇಟರ್ಗಳ ಮೇಲೆಲ್ಲಾ ಜಿಎಸ್‌ಟಿ ವಿಧಿಸಿ ತೆರಿಗೆ ಸಂಗ್ರಹಿಸುವುದು ಎಷ್ಟು ಸರಿ ಎಂಬ ಚರ್ಚೆಗಳು ನಡೆಯುತ್ತಿದೆ. ಹೀಗಾಗಿ ಈಗ ಕೊರೊನಾ ಲಸಿಕೆ, ಔಷಧಿಗಳ ಮೇಲೆ ಜಿಎಸ್‌ಟಿ ಇರಬೇಕೇ ಬೇಡವೇ? ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಜಿಎಸ್‌ಟಿ ಮಂಡಳಿಯ ಸಭೆ ಕರೆಯಲಾಗಿತ್ತು.
ಜಿಎಸ್‌ಟಿ ಬಗ್ಗೆ ಈ ಸಭೆಯಲ್ಲಿ ಕೈಗೊಂಡ ತೀರ್ಮಾನವೇ ಅಂತಿಮ. ಹೀಗಾಗಿ ಇಂದು (ಮೇ 28) ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆ ಮಹತ್ವ ಪಡೆದುಕೊಂಡಿತ್ತು. ರಾಜ್ಯ ಸರ್ಕಾರಗಳ ಒತ್ತಾಯದ ಮೇರೆಗೆ 7 ತಿಂಗಳ ಬಳಿಕ ಜಿಎಸ್‌ಟಿ ಮಂಡಳಿಯ ಸಭೆಯನ್ನು ಕರೆಯಲಾಗಿತ್ತು. ಜಿಎಸ್‌ಟಿ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಹಿಸಿದ್ದರು. ಕೇಂದ್ರದ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲ ರಾಜ್ಯದ ಹಣಕಾಸು ಸಚಿವರು ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಕೊರೊನಾಗೆ 13 ತಿಂಗಳ ಮಗು ಬಲಿ, ಆಕ್ಸಿಜನ್ ಕೊರತೆ ಕಾರಣವೆಂದು ಕಣ್ಣೀರಿಟ್ಟ ತಂದೆ
ಪ್ರತಿ ಜಿಲ್ಲೆಗಳಲ್ಲಿ ಹೆಚ್ಚುವರಿ ಆಕ್ಸಿಜನ್ ಸಂಗ್ರಹಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ
Published On - 3:19 pm, Tue, 1 June 21