ದೇಶದಲ್ಲಿರುವ ಪ್ರಮುಖ ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿದೆ. ಕೇಂದ್ರ ಸರ್ಕಾರಕ್ಕೆ 92 ಸಾವಿರ ಕೋಟಿ ರೂ. ಪಾವತಿಸಬೇಕೆಂದು ತೀರ್ಪು ನೀಡಿದೆ. ಇದು ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ಆದ್ರೆ, ಟೆಲಿಕಾಂ ಕಂಪನಿಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಈ ಹಿಂದೆ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರದಿಂದ ತರಾಂಗಾಂತರವನ್ನು ಹರಾಜಿನಲ್ಲಿ ಖರಿದಿಸಿದ್ವು. ಆದ್ರೆ ಇದಾದ ಬಳಿಕ ನಿವ್ವಳ ಆದಾಯದ ಹೊಂದಾಣಿಕೆ ಬಗ್ಗೆ ಕೇಂದ್ರದ ಟೆಲಿಕಾಂ ಇಲಾಖೆ ಮತ್ತು ಟೆಲಿಕಾಂ ಕಂಪನಿಗಳ ನಡುವೆ ವಿವಾದ ತಲೆದೋರಿತ್ತು. ಈ ವಿವಾದವು ಕೋರ್ಟ್ ಮೆಟ್ಟಿಲೇರಿತ್ತು. ದೆಹಲಿ ಹೈಕೋರ್ಟ್ ಟೆಲಿಕಾಂ ಕಂಪನಿಗಳ ಪರವಾಗಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಟೆಲಿಕಾಂ ಇಲಾಖೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ನಿವ್ವಳ ಆದಾಯ ಹೊಂದಾಣಿಕೆಯಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ 92 ಸಾವಿರ ಕೋಟಿ ರೂ ಪಾವತಿಸಬೇಕೆಂದು ತೀರ್ಪು ನೀಡಿದೆ. ಜಸ್ಟೀಸ್ ಅರುಣ್ ಮಿಶ್ರಾರ ಪೀಠವು ಟೆಲಿಕಾಂ ಕಂಪನಿಗಳು ಕೇಂದ್ರಕ್ಕೆ ಹಣ ಪಾವತಿಯ ಕಾಲಮಿತಿ ನಿಗದಿಗೆ ಪ್ರತ್ಯೇಕ ಆದೇಶ ನೀಡುವುದಾಗಿ ಹೇಳಿದ್ದಾರೆ.
ಅತಿಹೆಚ್ಚು ಮೊತ್ತ ಪಾವತಿಸಬೇಕಿರುವ ಕಂಪನಿಗಳು:
ಏರ್ಟೆಲ್ ಕಂಪನಿಯು ಕೇಂದ್ರ ಸರ್ಕಾರಕ್ಕೆ 21 ಸಾವಿರ ಕೋಟಿ ರೂಪಾಯಿ ಪಾವತಿಸಬೇಕಿದೆ. ಐಡಿಯಾ-ವೊಡಾಪೋನ್ ಕಂಪನಿಯು 10ಸಾವಿರ ಕೋಟಿ ಹಣವನ್ನು ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕು. ಆದ್ರೆ ಈಗಾಗ್ಲೇ ಜಿಯೋ ಕಂಪನಿಯ ಪೈಪೋಟಿ ಎದುರಿಸಲಾಗದೇ ಈ ಎರಡೂ ಕಂಪನಿಗಳು 1 ಲಕ್ಷ ಕೋಟಿ ರೂಪಾಯಿ ನಷ್ಟದಲ್ಲಿ ಮುಳುಗಿವೆ.
ಆರ್ಥಿಕ ಹಿಂಜರಿತಕ್ಕೆ ನಲುಗಿದ್ದ ಕೇಂದ್ರಕ್ಕೆ ಬಂಪರ್!
ಸುಪ್ರೀಂ ಕೋರ್ಟ್ ತೀರ್ಪಿನಿಂದ ಟೆಲಿಕಾಂ ಕಂಪನಿಗಳಿಗೆ ಹಿನ್ನಡೆ ಆಗಿದೆ. ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 92 ಸಾವಿರ ಕೋಟಿ ರೂಪಾಯಿ ಹರಿದು ಬರಲಿದೆ. ಆದಾಯ ಕೊರತೆ, ಜಿಡಿಪಿ ಕುಸಿತದಿಂದ ಕಂಗಾಲಾಗಿರುವ ಕೇಂದ್ರ ಸರ್ಕಾರಕ್ಕೆ ಒಂಥರಾ ಗಿಫ್ಟ್ ಆಗಲಿದೆ. ಇದೇ ಹಣವನ್ನು ಸರ್ಕಾರ, ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಬಳಸಲು ಅವಕಾಶ ಸಿಗಲಿದೆ.
ಇದರಿಂದ ಈ ಕಂಪನಿಗಳ ನಷ್ಟ ಮತ್ತು ಸಾಲದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಆದ್ರೆ, ನಷ್ಟ ತುಂಬಿಕೊಳ್ಳಲು ಫೋನ್ ಕಾಲ್ ದರ ಜಾಸ್ತಿ ಮಾಡಿದ್ರೆ, ಗ್ರಾಹಕರನ್ನ ಕಳೆದುಕೊಳ್ಳಬೇಕಾಗುತ್ತೆ. ಗ್ರಾಹಕರು ಅಗ್ಗದ ದರದ ಸೇವೆ ನೀಡುವ ಬೇರೆ ಕಂಪನಿಗಳತ್ತ ವಲಸೆ ಹೋಗ್ತಾರೆ. ಇದ್ರಿಂದಾಗಿ ಟೆಲಿಕಾಂ ಕಂಪನಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಂತೂ ಸುಳ್ಳಲ್ಲ.
Published On - 9:01 am, Fri, 25 October 19