ಕೊವಿಡ್ ನಿರ್ವಹಣೆಯ ಸ್ವಯಂ ಪ್ರೇರಿತ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್​

ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಸ್ವಯಂ ಪ್ರೇರಿತ ಅರ್ಜಿ ದೂರು ದಾಖಲಿಸಿಕೊಂಡಿತ್ತು. ಇದೀಗ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.

ಕೊವಿಡ್ ನಿರ್ವಹಣೆಯ ಸ್ವಯಂ ಪ್ರೇರಿತ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್​
ಸುಪ್ರೀಂ ಕೋರ್ಟ್​
Follow us
shruti hegde
|

Updated on:Apr 23, 2021 | 4:21 PM

ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಅತ್ಯಂತ ಭೀಕರವಾದ ಪರಿಣಾಮ ಬೀರುತ್ತಿದೆ. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ವೈದ್ಯಕೀಯ ವ್ಯವಸ್ಥೆಯಲ್ಲಿ ಕೊರತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್​ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು. ಇದೀಗ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ಮುಂದೂಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಲ್​.ನಾಗೇಶ್ವರ ರಾವ್​, ರವೀಂದ್ರ ಭಟ್​ ಅವರಿದ್ದ ನ್ಯಾಯಪೀಠವು ಕೊವಿಡ್-19 ಸಾಂಕ್ರಾಮಿಕದಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ವಿವಿಧ ರಾಜ್ಯಗಳಲ್ಲಿನ ಸಾಂಕ್ರಾಮಿಕ ಬಿಕ್ಕಟ್ಟಿನ ನಿರ್ವಹಣೆಯ ಕುರಿತಾಗಿ ಅಲ್ಲಿನ ಹೈಕೋರ್ಟ್​ಗಳು ಕೈಗೆತ್ತಿಕೊಂಡಿದ್ದ ಸ್ವಯಂ ಪ್ರೇರಿತ ವಿಚಾರಣೆಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಮತ್ತು ಸುಪ್ರಿಂ ಕೋರ್ಟ್​ ಬಾರ್​ ಅಸೋಸಿಯೇಷನ್​ ಅಧ್ಯಕ್ಷ ವಿಕಾಸ್​ ಸಿಂಗ್​ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಲಯ, ನೀವು ಆದೇಶವನ್ನು ಓದಿದ್ದೀರಿ. ಪ್ರಕರಣವನ್ನು (ಹೈಕೋರ್ಟ್​ಗಳಿಂದ) ವರ್ಗಾಯಿಸುವ ಉದ್ದೇಶದ ಛಾಯೆ ಅದರಲ್ಲಿ ಏನಾದರೂ ಇತ್ತೇ? ಆದೇಶವನ್ನು ಅದರಲ್ಲಿ ಇಲ್ಲದ ಅಂಶಗಳ ಬಗ್ಗೆ ಟೀಕೆಗಳು ಕೇಳಿಬಂದವು. ಸಂಸ್ಥೆಯ ಗೌರವ ಈ ರೀತಿಯಾಗಿ ನಾಶವಾಗುತ್ತಿದೆ’ ಎಂದು ಹೇಳಿತು.

‘ನೀವು ಆದೇಶವನ್ನು ಓದದೆಯೇ ಪ್ರಕರಣಗಳನ್ನು ವರ್ಗಾಯಿಸುವ ಉದ್ದೇಶವನ್ನು ಸುಪ್ರೀಂಕೋರ್ಟ್​ ಹೊಂದಿದೆ ಎನ್ನುವಂತೆ ಬಿಂಬಿಸುತ್ತಿದ್ದೀರಿ’ ಎಂದು ಗುಜರಾತ್ ಬಾರ್ ಅಸೋಸಿಯೆಷನ್ ಪರವಾಗಿ ಹಾಜರಾಗಿದ್ದ ದುಶ್ಯಂತ್ ದೇವ್ ಅವರಿಗೆ ನ್ಯಾಯಮೂರ್ತಿ ರಾವ್ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವ್, ‘ಇಡೀ ದೇಶವೇ ಆ ರೀತಿಯ ಆಲೋಚನೆಯನ್ನು ಹೊಂದಿತ್ತು’ ಎಂದು ತಿಳಿಸಿದರು. ಆದರೆ ನ್ಯಾಯಮೂರ್ತಿ ಭಟ್ಟ ಅವರು ನಾವು ಅಂತಹ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಬದಲಾಗಿ ಕೇಂದ್ರ ‌ಸರಕಾರಕ್ಕೆ ಹೈಕೋರ್ಟ್​​ಗಳಿಗೆ ಉತ್ತರಿಸುವಂತೆ ತಿಳಿಸಿದ್ದೆವು ಎಂದಿದ್ದಾರೆ.

ದೇವ್ ಅವರ ಉತ್ತರ ಆಲಿಸಿದ ನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಿತು. ಅಷ್ಟರ ಒಳಗೆ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಫಿಡವಿಟ್ ಸಲ್ಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೊರೊನಾ ನಿರ್ವಹಣೆ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ (Supreme Court postponed covid-19 Control suo-motu)

Published On - 4:12 pm, Fri, 23 April 21