ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಕಳೆದ ವರ್ಷ ನಡೆದ ಹಿಂಸಾಚಾರದೊಂದಿಗೆ ಸಂಬಂಧವಿಟ್ಟುಕೊಂಡ ಆರೋಪದ ಮೇಲೆ ಬಂಧನಕ್ಕೊಳಗಾಗಿ ಸುಮಾರು ಒಂದು ವರ್ಷ ಜೈಲುವಾಸ ಅನುಭವಿಸಿ ಗುರುವಾರದಂದು ದೆಹಲಿ ಹೈಕೋರ್ಟ್ ಬಿಡುಗಡೆ ಮಾಡುವಂತೆ ಆದೇಶ ನೀಡಿದ ನಂತರ ಹೊರಬಂದಿರುವ ಅಸಿಫ್ ಇಕ್ಬಾಲ್ ತನ್ಹಾ, ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ಅವರಿಗೆ ಸಿಕ್ಕಿರುವ ಜಾಮೀನನ್ನು ತಡೆಹಿಡಿಯಲು ಸುಪ್ರೀಮ್ ಕೊರ್ಟ್ ನಿರಾಕರಿಸಿದೆ. ‘ಇದು ಇಡೀ ಭಾರತದ ಮೇಲೆ ಪ್ರಭಾವ ಬೀರುವ ಪ್ರಕರಣವಾಗಿರುವುದರಿಂದ ನಾವು ಒಂದು ನೋಟೀಸನ್ನು ಜಾರಿಮಾಡಿ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವಂತೆ ಹೇಳುತ್ತೇವೆ,’ ಎಂದು ಅಪೆಕ್ಸ್ ಕೋರ್ಟ್ ಹೇಳಿದೆ.
ವಿದ್ಯಾರ್ಥಿ ಹೋರಾಟಗಾರರಾಗಿರುವ ಅಸಿಫ್ ಇಕ್ಬಾಲ್ ತನ್ಹಾ, ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ತನ್ನ ಇಲಾಖೆ ಕುರಿತು ಮಾಡಿರುವ ಕಾಮೆಂಟ್ಗಳನ್ನು ಪ್ರಶ್ನಿಸಿರುವ ದೆಹಲಿ ಪೊಲೀಸ್ಗೂ ಸರ್ವೋಚ್ಛ ನ್ಯಾಯಾಲಯ ನೋಟೀಸೊಂದನ್ನು ಜಾರಿ ಮಾಡಿದೆ.
ಆದೇಶವನ್ನು ಒಂದು ದೃಷ್ಟಾಂತದಂತೆ ಪರಿಗಣಿಸಲಾಗದು ಮತ್ತು ಕೋರ್ಟಿನ ಕಲಾಪಗಳು ನಡೆಯುವಾಗ ಸದರಿ ಆದೇಶವನ್ನೇ ಆಧಾರವಾಗಿಟ್ಟುಕೊಳ್ಳುವ ಪ್ರಯತ್ನವನ್ನು ಎರಡೂ ಪಕ್ಷಗಳು ಮಾಡಬಾರದು ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. ಮೂವರಿಗೆ ಜಾಮಿನು ನೀಡಿರುವ ಈ ಹಂತದಲ್ಲಿ ತಾನು ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. ಸದರಿ ಪ್ರಕರಣವನ್ನು ಜುಲೈ 19 ರ ನಂತರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು.
ನ್ಯಾಯಮೂರ್ತಿ ಸಿದ್ದಾರ್ಥ್ ಮೃದಲ್ ಮತ್ತು ನ್ಯಾಯಮೂರ್ತಿ ಎ ಜೆ ಭಾಂಭನಿ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ನ ಒಂದು ಪೀಠವು ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಯಾಗಿರುವ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ನೀಡಿತು.
ದೆಹಲಿ ಈಶಾನ್ಯ ಭಾಗದಲ್ಲಿ ನಡೆದಿದ್ದ ಗಲಭೆಗಳಿಗೆ ಸಂಬಂಧಿಸಿದಂತೆ ಈ ಮೂವರಿಗೆ ದೆಹಲಿ ಹೈಕೋರ್ಟ್ ಮಂಗಳವಾರದಂದು ಜಾಮೀನು ನೀಡಿತ್ತು.
ಮಂಗಳವಾರದಂದು ನೀಡಿದ ಜಾಮೀನು ಆದೇಶದಲ್ಲಿ ದೆಹಲಿ ಹೈಕೋರ್ಟ್ ಮೂವರು ವಿದ್ಯಾರ್ಥಿಗಳ ವಿರುದ್ಧ ಮಾಡಿರುವ ಆರೋಪಗಳು ಅವರನ್ನೇ ಪ್ರಮುಖ ತಪ್ಪಿತಸ್ಥರೆಂದು ಹೇಳುವುದಿಲ್ಲ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬರುವ ಯಾವುದೇ ಅಪರಾಧ ಅವರು ಎಸಗಿಲ್ಲ ಎಂದು ಹೇಳಿದೆ. ಅಲ್ಲದೆ, ಜಾಮೀನು ನೀಡುವಾಗ ಅವರ ಮೇಲೆ ಹೆಚ್ಚುವರಿ ನಿಂಧನೆಗಳನ್ನು ಹೇರುವ ಅಗತ್ಯವೂ ಇಲ್ಲವೆಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಬಿನ್ನಾಭಿಪ್ರಾಯವನ್ನು ಮಟ್ಟಹಾಕಲು ಭಯೋತ್ಪಾದಕ ಚಟುವಟಿಕೆ ಮತ್ತು ಸಂವಿಧಾನಬದ್ಧವಾಗಿ ಲಭ್ಯವಾಗುವ ಪ್ರತಿಭಟನೆ ಮಾಡುವ ಹಕ್ಕಿನ ನಡುವೆ ಇರುವ ಗೆರೆ ಸರ್ಕಾರದ ದೃಷ್ಟಿಯಲ್ಲಿ ಕೊಂಚಮಟ್ಟಿಗೆ ಮಸುಕಾದಂತೆ ಕಾಣುತ್ತಿದೆ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
ಇದನ್ನೂ ಓದಿ: ಗೌತಮ್ ಗಂಭೀರ್ಗೆ ಕ್ಲೀನ್ ಚಿಟ್ ನೀಡಿದಕ್ಕೆ ಕಾನೂನು ಆಧಾರವಿಲ್ಲ: ಔಷಧ ನಿಯಂತ್ರಕವನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್