ನವದೆಹಲಿ, ಏಪ್ರಿಲ್ 26: ಇವಿಎಂ ಮೆಷೀನ್ನಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತಾ ಅವರು ಈ ಆದೇಶ ನೀಡಿದ್ದಾರೆ. ಏಪ್ರಿಲ್ 18ರಂದು ಸುಪ್ರೀಂ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಮೊನ್ನೆ (ಏಪ್ರಿಲ್ 24) ಚುನಾವಣಾ ಆಯೋಗದಿಂದ ಕೆಲ ಅಂಶಗಳ ಬಗ್ಗೆ ಸ್ಪಷ್ಟೀಕರಣ ಪಡೆಯಲು ವಿಚಾರಣೆ ನಡೆಸಿತ್ತು. ಇದೀಗ ನ್ಯಾಯಪೀಠ ತನ್ನ ತೀರ್ಪು ನೀಡಿದ್ದು, ಇವಿಎಂ ಮತ್ತು ವಿವಿಪ್ಯಾಟ್ ಪೂರ್ಣ ತಾಳೆಯಾಗಬೇಕೆನ್ನುವ ಮನವಿಯನ್ನು ತಿರಸ್ಕರಿಸಲು ನಿರ್ಧರಿಸಿದೆ.
‘ವಿವಿಧ ದೃಷ್ಟಿಕೋನ ಇರಬೇಕೆನ್ನುವುದು ಮುಖ್ಯ ಹೌದು. ಆದರೆ, ಒಂದು ವ್ಯವಸ್ಥೆಯನ್ನು ಕುರುಡಾಗಿ ಅನುಮಾನಿಸುವುದು ತಪ್ಪಾಗುತ್ತದೆ. ನ್ಯಾಯಾಂಗವಾಗಲೀ, ಶಾಸಕಾಂಗವಾಗಲೀ ಅರ್ಥಗರ್ಭಿತ ಟೀಕೆಗಳು ಬೇಕಾಗುತ್ತದೆ. ಪ್ರಜಾತಂತ್ರದ ಎಲ್ಲಾ ಸ್ತಂಭಗಳ ನಡುವೆ ವಿಶ್ವಾಸ ಇರುವುದು ಅಗತ್ಯ. ಈ ರೀತಿ ನಂಬಿಕೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಪ್ರಜಾತಂತ್ರದ ಧ್ವನಿಯನ್ನು ಬಲಪಡಿಸಬಹುದು,’ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬನ್ನಿ, ನಿಮ್ಮ ನಾಯಕನ ಆಯ್ಕೆ ಮಾಡಿ: ಮತದಾನದ ಬಳಿಕ ಸುಧಾಮೂರ್ತಿ ಸಂದೇಶ
ಸುಪ್ರೀಂಕೋರ್ಟ್ನ ದ್ವಿಸದಸ್ಯ ನ್ಯಾಯಪೀಠ ಈ ವೇಳೆ ಎರಡು ಮಹತ್ವದ ನಿರ್ದೇಶನ ನೀಡಿದೆ. ಇವಿಎಂ ಮೆಷೀನ್ಗಳಲ್ಲಿ ಚಿಹ್ನೆ ನಮೂದಾದ ಬಳೀಕ ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಬೇಕು. ಈ ಯೂನಿಟ್ ಅನ್ನು ಕನಿಷ್ಠ 45 ದಿನಗಳವರೆಗೆ ರಕ್ಷಿಸಿ ಇಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ವಿವಿಪ್ಯಾಟ್ ಕ್ರಾಸ್ ವೆರಿಫಿಕೇಶನ್ಗೆ ಮನವಿ ಮಾಡಿದರೆ ಇವಿಎಂ ಮೆಷೀನ್ನಲ್ಲಿರುವ ಮೈಕ್ರೋಕಂಟ್ರೋಲ್ನಲ್ಲಿನ ಬರ್ನ್ಟ್ ಮೆಮೊರಿಯನ್ನು ತಂತ್ರಜ್ಞರ ತಂಡವೊಂದು ಪರಿಶೀಲನೆ ನಡೆಸಲು ಅವಕಾಶ ಕೊಡಬೇಕು. ಇದರ ವೆಚ್ಚವನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ. ಒಂದು ವೇಳೆ ಇವಿಎಂ ತಿರುಚಲಾಗಿರುವುದು ಗೊತ್ತಾದರೆ ಅಭ್ಯರ್ಥಿಗೆ ಆ ಹಣ ರೀಫಂಡ್ ಮಾಡಬಹುದು ಎಂದೂ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದ ‘ಪೆಟ್ರೋಲ್ ಅಂಕಲ್’! ವಿಡಿಯೋ ನೋಡಿ
ಇವಿಎಂನಲ್ಲಿ ಮತ ಹಾಕಿದಾಗ ವಿವಿಪ್ಯಾಟ್ ಸ್ಲಿಪ್ ಬರುವ ವ್ಯವಸ್ಥೆ ಇದೆ. ಆದರೆ, ವಿವಿಪ್ಯಾಟ್ನಿಂದ ಬರುವ ಚೀಟಿಗಳನ್ನು ಪೂರ್ಣವಾಗಿ ಎಣಿಸಲಾಗುವುದಿಲ್ಲ. ಒಂದು ವಿಧಾನಸಭಾ ಕ್ಷೇತ್ರದ ಐದು ಆಯ್ದ ಎವಿಎಂಗಳನ್ನು ಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಿ ಕ್ರಾಸ್ ವೆರಿಫೈ ಮಾಡಲಾಗುತ್ತಿದೆ. ದೇಶಾದ್ಯಂತ ಎಲ್ಲಾ ಇವಿಎಂ ಮೆಷೀನ್ಗಳಿಗೂ ಈ ಕ್ರಾಸ್ ವೆರಿಫಿಕೇಶನ್ ಆಗಬೇಕು ಎಂಬುದು ಅರ್ಜಿದಾರರ ಮನವಿಯಾಗಿತ್ತು. ಆದರೆ, ಈ ಕೋರಿಕೆಯನ್ನು ಕೋರ್ಟ್ ಪುರಸ್ಕರಿಸಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:54 am, Fri, 26 April 24