Lok Sabha Election 2024: ಬೆಂಗಳೂರಿನಲ್ಲಿ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದ ‘ಪೆಟ್ರೋಲ್ ಅಂಕಲ್’! ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಪೆಟ್ರೋಲ್ ಅಂಕಲ್ ಎಂದೇ ಖ್ಯಾತರಾದ ಹಿರಿಯ ನಾಗರಿಕರೊಬ್ಬರು ವಿಶಿಷ್ಟವಾಗಿ ಮತದಾನ ಜಾಗೃತಿ ಮೂಡಿಸಿದ್ದಾರೆ. ಇವರಿಗೆ ಪೆಟ್ರೋಲ್ ಅಂಕಲ್ ಎಂಬ ಹೆಸರು ಬಂದಿದ್ದೇಕೆ? ಇವರ ಮತದಾನ ಜಾಗೃತಿ ವೈರಲ್ ಆಗಲು ಕಾರಣವೇನು ಎಂಬ ಮಾಹಿತಿ ಹಾಗೂ ಮತದಾನ ಜಾಗೃತಿಯ ವೈರಲ್ ಆಗಿರುವ ವಿಡಿಯೋ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 26: ಲೋಕಸಭೆ ಚುನಾವಣೆಯ (Lok Sabha Elections) ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಿಗೆ ಇಂದು ಮತದಾನ (Karnataka Voting) ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಆದಿಯಾಗಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮಧ್ಯೆ, ಬೆಂಗಳೂರಿಲ್ಲೊಬ್ಬರು ‘ಪೆಟ್ರೋಲ್ ಅಂಕಲ್ (Petrol Uncle)’ ಎಂದೇ ಖ್ಯಾತರಾದ ವ್ಯಕ್ತಿ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದ್ದಾರೆ. ‘ಪೆಟ್ರೋಲ್ ಅಂಕಲ್’ ಎಂದೇ ಖ್ಯಾತರಾದ ಮೊಹಮ್ಮದ್ ಆರಿಫ್ ಸೇಠ್ (Mohammad Arif Sait) ಕೈಯಲ್ಲಿ ಮತದಾನ ಜಾಗೃತಿ ಪ್ಲೆಕಾರ್ಡ್ ಹಿಡಿದು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಗರದಲ್ಲಿ ಮತದಾನಕ್ಕೆ ಮುನ್ನವೇ ಅವರು ವಿಧಾನಸೌಧ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ತಲೆಯ ಮೇಲೆ ಭಿತ್ತಿಪತ್ರ ಹಿಡಿದುಕೊಂಡು ಸಂಚರಿಸಿದರು. ಹಲವಾರು ವಾಹನ ಸವಾರರನ್ನು, ನಡೆದುಕೊಂಡು ಹೋಗುತ್ತಿರುವವರನ್ನು ನಿಲ್ಲಿಸಿ ಅವರೊಂದಿಗೆ ಸಂವಹನ ನಡೆಸಿದರು. ಮತದಾನ ಜಾಗೃತಿ ಮೂಡಿಸಿದರು.
ಪ್ಲೆಕಾರ್ಡ್ ಹಿಡಿದುಕೊಂಡು ಓಡಾಡುವ ಮೂಲಕ ಅಭಿಮಾನಿಗಳಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದೇನೆ. ಈ ಮೂಲಕ ನನ್ನ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದೇನೆ ಎಂದು ಮೊಹಮ್ಮದ್ ಆರಿಫ್ ಸೇಠ್ ಹೇಳಿದ್ದಾರೆ. ‘ಬದಲಾವಣೆಗಾಗಿ ಮತ ಚಲಾಯಿಸಲಿದ್ದೇನೆಯೇ ವಿನಃ ದ್ವೇಷಕ್ಕಲ್ಲ (I’ll vote for change, not for hate) ಎಂಬ ಪ್ಲೆಕಾರ್ಡ್ ಅನ್ನು ಅವರು ಹಿಡಿದುಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದ ವಿಡಿಯೋ
An elderly gentleman on the streets of Bengaluru has a message to you. ❤️ pic.twitter.com/or0yJ9i7oe
— Shayar Guruji Haryana (@ShayarGuruji) April 25, 2024
ಯಾರಿವರು ಪೆಟ್ರೋಲ್ ಅಂಕಲ್?
ಮೊಹಮ್ಮದ್ ಆರಿಫ್ ಸೇಠ್ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ದಶಕಗಳ ಕಾಲ ಪಾದರಕ್ಷೆ ಅಂಗಡಿ ಇಟ್ಟುಕೊಂಡಿದ್ದರು. ಮಾರ್ಗ ಮಧ್ಯೆ ಇಂಧನ ಖಾಲಿಯಾಗಿ ಅಥವಾ ಇನ್ನಿತರ ಕಾರಣಗಳಿಂದ ಬಾಕಿಯಾದ ವಾಹನ ಸವಾರರಿಗೆ ನೆರವಾಗುವ ಸೇವೆಯಲ್ಲಿ ತೊಡಗಿಕೊಂಡಿದ್ದರು. 2008 ರಿಂದಲೂ ಅವರು ಈ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಜನರು ಅವರನ್ನು ‘ಪೆಟ್ರೋಲ್ ಅಂಕಲ್’ ಎಂದೇ ಕರೆಯಲಾರಂಭಿಸಿದ್ದರು.
ಮತದಾನದ ಲೈವ್ ಅಪ್ಡೇಟ್ಗೆ ಓದಿ: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ
ಸದ್ಯ ಪಾದರಕ್ಷೆ ಅಂಗಡಿಯ ವೃತ್ತಿಯಿಂದ ನಿವೃತ್ತರಾಗಿರುವ ಅವರು ತಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಇತರ ವೇದಿಕೆಗಳ ಮೂಲಕ ಸಾಮಾಜಿಕ ಕಳಕಳಿಯುಳ್ಳ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:23 am, Fri, 26 April 24