ನವದೆಹಲಿ, ಮಾರ್ಚ್ 4: ಸನಾತನ ಧರ್ಮದ ವಿರುದ್ಧ ಕಟುವಾಗಿ ಮಾತನಾಡಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ (Udayanidhi Stalin) ಅವರಿಗೆ ಸುಪ್ರೀಂಕೋರ್ಟ್ ಜವಾಬ್ದಾರಿಯ ಪಾಠ ಹೇಳಿದೆ. ಸೂಕ್ಷ್ಮ ವಿಚಾರಗಳಲ್ಲಿ ಯಾವ ರೀತಿ ಮಾತನಾಡಬೇಕು ಎಂಬ ಜವಾಬ್ದಾರಿ ಸಚಿವರಾದವರಿಗೆ ಇರಬೇಕು. ಪದಪ್ರಯೋಗದಲ್ಲಿ ಎಚ್ಚರಿಕೆ ವಹಿಸಬೇಕಿತ್ತು ಎಂದು ಸಿಎಂ ಸ್ಟಾಲಿನ್ ಅವರ ಮಗನಾದ ಉದಯನಿಧಿಗೆ ಕೋರ್ಟ್ ತಿಳಿಹೇಳಿದೆ. ಸನಾತನ ಧರ್ಮ (Sanatan Dharma) ವಿರುದ್ಧ ಸ್ಟಾಲಿನ್ ನೀಡಿದ ಹೇಳಿಕೆಗಳ ವಿರುದ್ಧ ದೇಶದ ವಿವಿಧೆಡೆ ಎಫ್ಐಆರ್ಗಳು ದಾಖಲಾಗಿವೆ. ಅವೆಲ್ಲವನ್ನೂ ಒಂದುಸೇರಿಸಬೇಕು ಎಂದು ಸ್ಟಾಲಿನ್ ಮಾಡಿಕೊಂಡ ಮನವಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನಡೆಸುತ್ತಿದೆ. ಮಾರ್ಚ್ 15ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.
ಉತ್ತರಪ್ರದೇಶ, ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಉದಯನಿಧಿ ಮೇಲೆ ಎಫ್ಐಆರ್ಗಳು ದಾಖಲಾಗಿವೆ. ಈ ಸಂಬಂಧ ಜಾಮೀನು ನೀಡುವಂತೆ ಉದಯನಿಧಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅರ್ಜಿ ಹಾಕಿದ್ದರು. ಸಂಜೀವ್ ಖನ್ನ ಮತ್ತು ದೀಪಾಂಕರ್ ದತ್ತ ಅವರಿರುವ ಸರ್ವೋಚ್ಚ ನ್ಯಾಯಪೀಠ ಇದರ ವಿಚಾರಣೆ ನಡೆಸಿ, ಸಂಬಂಧಪಟ್ಟ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವಂತೆ ಸ್ಟಾಲಿನ್ ಪರ ವಕೀಲರಿಗೆ ತಿಳಿಸಿತು.
ಇದನ್ನೂ ಓದಿ: ಪಕ್ಷದ ಕಚೇರಿ ಖಾಲಿ ಮಾಡುವಂತೆ ಎಎಪಿಗೆ ಸುಪ್ರೀಂಕೋರ್ಟ್ ಸೂಚನೆ; ಜೂನ್ 15ರವರೆಗೂ ಗಡುವು
ಆದರೆ, ಆರು ರಾಜ್ಯಗಳಲ್ಲಿ ಪ್ರಕರಣಗಳಿರುವುದರಿಂದ ಆರು ಹೈಕೋರ್ಟ್ಗಳಿಗೆ ಹೋಗಬೇಕಾಗುತ್ತದೆ ಎಂದು ಹತಾಶೆ ತೋರ್ಪಡಿಸಿದ ಸಿಂಘ್ವಿ, ನೂಪುರ್ ಶರ್ಮಾ ಪ್ರಕರಣವನ್ನು ಉಲ್ಲೇಖಿಸಿ ವಿವಿಧ ಎಫ್ಐಆರ್ಗಳನ್ನು ಒಂದುಗೂಡಿಸುವಂತೆ ಕೇಳಿಕೊಂಡರು. ಇದಕ್ಕೆ ನ್ಯಾಯಪೀಠ, ಹೇಳಿಕೆ ಕೊಡುವ ಮುಂಚೆ ಯೋಚಿಸಬೇಕಿತ್ತು ಎಂದು ತಿವಿಯಿತು.
‘ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ. ಈಗ ಸಂವಿಧಾನದ 32ನೇ ಆರ್ಟಿಕಲ್ ಅಡಿಯಲ್ಲಿ ನಿಮ್ಮ ಹಕ್ಕು ಪಡೆಯಲು ಹೊರಟಿದ್ದೀರಾ? ನೀವು ಹೇಳಿದ ಪರಿಣಾಮಗಳೇನು ಗೊತ್ತಾ,’ ಎಂದು ವಕೀಲ ಸಿಂಘ್ವಿ ಮೂಲಕ ಉದಯನಿಧಿ ಸ್ಟಾಲಿನ್ಗೆ ಕೋರ್ಟ್ ಪ್ರಶ್ನೆ ಮಾಡಿತು.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಮಗ ಮತ್ತು ಆ ಸರ್ಕಾರದಲ್ಲಿ ಸಚಿವರೂ ಆಗಿರುವ ಉದಯನಿಧಿ ಸ್ಟಾಲಿನ್ ಅವರು ಕೆಲ ತಿಂಗಳ ಹಿಂದೆ, ಸನಾತನ ಧರ್ಮದ (ಹಿಂದೂ ಧರ್ಮ) ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಮಹಿಳೆಗೆ ಮಾಸಿಕ 1,000 ರೂ ಧನಸಹಾಯ; ಶಿಕ್ಷಣ ಕ್ಷೇತ್ರಕ್ಕೆ ಶೇ. 21ಕ್ಕಿಂತ ಹೆಚ್ಚು ಹಣ; ದೆಹಲಿ ಸರ್ಕಾರದ ಬಜೆಟ್ ಧಮಾಕ
ಮಲೇರಿಯಾ, ಡೆಂಗಿ ರೋಗ ತರುವ ವೈರಾಣುಗಳನ್ನು ನಾಶ ಮಾಡುತ್ತೇವೆ. ಸನಾತನ ಧರ್ಮ ಕೂಡ ಕೊರೋನಾ ವೈರಸ್, ಮಲೇರಿಯಾದಂತೆ. ಆ ಧರ್ಮವು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಅದನ್ನು ನಾಶಪಡಿಸಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರು.
ತಮ್ಮ ಹೇಳಿಕೆಯನ್ನು ಅವರು ಹಲವು ಬಾರಿ ಸಮರ್ಥಿಸಿಕೊಂಡಿರುವುದೂ ಹೌದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ