ದೆಹಲಿಯ ಜಹಾಂಗೀರ್​ಪುರಿ ಡೆಮಾಲಿಷನ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್​ನಿಂದ ತಡೆಯಾಜ್ಞೆ

| Updated By: ಸುಷ್ಮಾ ಚಕ್ರೆ

Updated on: Apr 21, 2022 | 12:30 PM

ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಮನೆಗಳನ್ನು ನೆಲಸಮ ಮಾಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದು, "ನಮ್ಮ ಆದೇಶದ ನಂತರ ನಡೆಸಲಾದ ಎಲ್ಲಾ ನೆಲಸಮಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ದೆಹಲಿಯ ಜಹಾಂಗೀರ್​ಪುರಿ ಡೆಮಾಲಿಷನ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್​ನಿಂದ ತಡೆಯಾಜ್ಞೆ
ಸುಪ್ರೀಂಕೋರ್ಟ್
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಲಭೆಕೋರರ ಮನೆ ತೆರವು ಕಾರ್ಯ ವಿಚಾರವಾಗಿ ಇಂದು ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಜಹಾಂಗೀರ್‌ಪುರಿ ಡೆಮಾಲಿಷನ್ ಕಾರ್ಯಾಚರಣೆಗೆ (Jahangirpuri demolition drive) ಎರಡು ವಾರಗಳವರೆಗೆ ತಡೆಯಾಜ್ಞೆ ನೀಡಿದೆ. ದೆಹಲಿಯ ಜಹಾಂಗೀರ್​ಪುರಿಯಲ್ಲಿ ಅಕ್ರಮ ಒತ್ತುವರಿ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್​ ತಡೆ ನೀಡಿದ್ದರೂ ಸುಮಾರು 2 ಗಂಟೆಗಳ ಕಾಲ ಜೆಸಿಬಿಗಳ ಮೂಲಕ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್​ (Supreme Court) ಆದೇಶಿಸಿದ ನಂತರವೂ ಬುಧವಾರ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಇದೀಗ ಮತ್ತೆ ಅದೇ ರೀತಿ ಮುಂದುವರೆದರೆ ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್​ ಹೇಳಿದೆ.

ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿಆರ್ ಗವಾಯಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಜಹಾಂಗೀರ್ಪುರಿಯಲ್ಲಿನ ಧ್ವಂಸ ಅಭಿಯಾನದ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದೆ. ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಮನೆಗಳನ್ನು ನೆಲಸಮ ಮಾಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದು, “ನಮ್ಮ ಆದೇಶದ ನಂತರ ನಡೆಸಲಾದ ಎಲ್ಲಾ ನೆಲಸಮಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಶನಿವಾರ ಕೋಮುಗಲಭೆ ಭುಗಿಲೆದ್ದ ದೆಹಲಿಯ ಜಹಾಂಗೀರ್ಪುರಿಗೆ ಬುಲ್ಡೋಜರ್‌ಗಳನ್ನು ಕಳುಹಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ವಿರಾಮಗೊಳಿಸಿದ ನಂತರ ನಡೆದ ಧ್ವಂಸಗಳ ಬಗ್ಗೆ “ಗಂಭೀರ ನೋಟ” ತೆಗೆದುಕೊಳ್ಳುವುದಾಗಿ ಹೇಳಿತ್ತು. ಮುಂದಿನ ಆದೇಶದವರೆಗೆ ಜಹಾಂಗೀರ್‌ಪುರಿಯಲ್ಲಿ ಯಾವುದೇ ನೆಲಸಮವಾಗುವುದಿಲ್ಲ ಎಂದು ನ್ಯಾಯಾಲಯವು ದೆಹಲಿಯ ನಾಗರಿಕ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.

“ಸುಪ್ರೀಂಕೋರ್ಟ್ ತೀರ್ಪನ್ನು ಮೇಯರ್‌ಗೆ ತಿಳಿಸಿದ ನಂತರ ನಡೆದ ಎಲ್ಲಾ ಡೆಮಾಲಿಷನ್​ಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎರಡು ವಾರಗಳ ನಂತರ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಸುಪ್ರೀಂ ಕೋರ್ಟ್​ ಯಥಾಸ್ಥಿತಿ ಕಾಪಾಡಲು ಆದೇಶ ಕೊಟ್ಟ ಬಳಿಕವೂ ನಿನ್ನೆ ಬೆಳಗ್ಗೆ 9 ಗಂಟೆಯಿಂದ ಡೆಮಾಲಿಷನ್ ಮುಂದುವರಿದಿತ್ತು. ಜಹಾಂಗೀರ್‌ಪುರಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ದೆಹಲಿ ಬಿಜೆಪಿ ಮುಖ್ಯಸ್ಥರು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್‌ಗೆ ದೂರು ನೀಡಿದ ನಂತರ ಹಿಂಸಾಚಾರ ಪೀಡಿತ ಪ್ರದೇಶದಿಂದ ಅತಿಕ್ರಮಣಗಳನ್ನು ತೆಗೆದುಹಾಕಲು ರಾತ್ರೋರಾತ್ರಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಹಿಂಸಾಚಾರವನ್ನು ಪ್ರಾರಂಭಿಸಲಾಯಿತು ಎಂದಿದ್ದಾರೆ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಮುಸ್ಲಿಂ ಗಲಭೆ ಆರೋಪಿಗಳ ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ಜಮಿಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ ಮನವಿಯನ್ನು ಗಮನಿಸಿದ ನಂತರ ಸುಪ್ರೀಂ ಕೋರ್ಟ್ ಬುಧವಾರ ಅತಿಕ್ರಮಣ ವಿರೋಧಿ ಅಭಿಯಾನವನ್ನು ಸ್ಥಗಿತಗೊಳಿಸಲು ಸೂಚಿಸಿತ್ತು. ಆದರೆ ಬುಲ್ಡೋಜರ್‌ಗಳು ನಿಲ್ಲಲಿಲ್ಲ. ಮಸೀದಿಯ ಹೊರಗಿನ ಹಲವಾರು ಅಂಗಡಿಗಳು ಮತ್ತು ರಚನೆಗಳನ್ನು ಎರಡನೇ ಹಸ್ತಕ್ಷೇಪದ ಮೊದಲು ಧ್ವಂಸಗೊಳಿಸಲಾಗಿತ್ತು.

ಭಾರತದಾದ್ಯಂತ ಧ್ವಂಸಗಳು ನಡೆಯುತ್ತಿವೆ. ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ. ವಿಶೇಷವಾಗಿ ರಾಮನವಮಿ ದಿನಗಳಲ್ಲಿ ಈ ಸಂಗತಿಗಳು ನಡೆಯುತ್ತಿವೆ. ನಂತರ ಕೇವಲ ಒಂದು ಸಮುದಾಯದ ಮನೆಗಳನ್ನು ಕೆಡವಲಾಗುತ್ತದೆ ಎಂದು ಜಮಿಯತ್ ಉಲಾಮಾ-ಇ-ಹಿಂದ್ ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ.
ಇದಕ್ಕೆ ಬುಧವಾರ ಜಹಾಂಗೀರ್ಪುರಿಯಲ್ಲಿ ಯಾವುದೇ ಹಿಂದೂ ಆಸ್ತಿಗಳನ್ನು ಕೆಡವಲಿಲ್ಲವೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೆಹಲಿಯ ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ ನಿಲ್ಲಿಸಲು ಸುಪ್ರೀಂಕೋರ್ಟ್ ಆದೇಶ

ಜಹಾಂಗೀರ್‌ಪುರಿಯಲ್ಲಿ ಬುಲ್ಡೋಜರ್​​ನಿಂದ ಧ್ವಂಸ ಮಾಡುವ ಕಾರ್ಯಾಚರಣೆ ಸ್ಥಗಿತದ ನಂತರ ದೆಹಲಿ ಬಿಜೆಪಿ ನಾಯಕರಿಂದ ಅಮಿತ್ ಶಾ ಭೇಟಿ