ಪಂಜಾಬ್ನಲ್ಲಿ ಉಂಟಾದ ಪ್ರಧಾನಿ ಭದ್ರತೆ ಲೋಪಕ್ಕೆ (PM Security Breach) ಸಂಬಂಧಪಟ್ಟಂತ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ (Supreme Court), ಘಟನೆ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ನಾಲ್ವರು ಸದಸ್ಯರ ಸಮಿತಿ ರಚಿಸುವುದಾಗಿ ಹೇಳಿದೆ. ಆ ನ್ಯಾಯಮೂರ್ತಿಗಳು ಯಾರು ಎಂಬುದನ್ನು ಇಂದು ಸುಪ್ರೀಂಕೋರ್ಟ್ ಹೇಳಲಿದೆ. ಜನವರಿ 10ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ನೇತೃತ್ವದ ಪೀಠ, ಪ್ರಧಾನಿ ಮೋದಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟು ನಡೆಯುತ್ತಿರುವ ಎಲ್ಲ ತನಿಖೆಗಳನ್ನೂ ನಿಲ್ಲಿಸುವಂತೆ ಆದೇಶ ನೀಡಿತ್ತು. ಹಾಗೇ. ತಾವೇ ಸಮಿತಿ ರಚಿಸುವುದಾಗಿ ತಿಳಿಸಿತ್ತು. ಆದರೆ ನಿವೃತ್ತ ನ್ಯಾಯಮೂರ್ತಿಯ ಹೆಸರನ್ನು ಪ್ರಕಟಪಡಿಸಿರಲಿಲ್ಲ.
ಪ್ರಧಾನಿ ಮೋದಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟ ತನಿಖೆ ನಡೆಸಲು ನಾವು ಸಮಿತಿ ರಚನೆ ಮಾಡುತ್ತೇವೆ. ಈ ಸಮಿತಿ ನಮಗೆ ವರದಿ ನೀಡಲಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಈ ತನಿಖಾ ಸಮಿತಿಯ ನೇತೃತ್ವ ವಹಿಸುತ್ತಾರೆ. ಚಂಡಿಗಢ್ನ ಡಿಜಿಪಿ (ಪೊಲೀಸ್ ಮಹಾನಿರ್ದೇಶಕರು), ರಾಷ್ಟ್ರೀಯ ತನಿಖಾದಳದ ಐಜಿ (IG Of NIA), ಪಂಜಾಬ್-ಹರ್ಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್ನ ಹೆಚ್ಚುವರಿ ಡಿಜಿಪಿ (ಭದ್ರತಾ ದಳ) ಈ ಸಮಿತಿಯಲ್ಲಿ ಇರುತ್ತಾರೆ ಎಂದು ಸಿಜೆಐ ಎನ್.ವಿ.ರಮಣ ತಿಳಿಸಿದ್ದರು.
ಜನವರಿ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್ನ ಫಿರೋಜ್ಪುರಕ್ಕೆ ಭೇಟಿ ನೀಡುವವರು ಇದ್ದರು. ಆದರೆ ಅವರು ಪ್ರಯಾಣಿಸಬೇಕಾದ ರಸ್ತೆ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರಿಂದ, ಭದ್ರತೆ ಲೋಪವಾಗಿ ವಾಪಸ್ ಬಂದಿದ್ದರು. ಅದಕ್ಕೂ ಮೊದಲು ಹುಸ್ಸೇನಿವಾಲಾ ಫ್ಲೈಓವರ್ ಮೇಲೆ ಅವರು 15-20 ನಿಮಿಷ ಕಾಯುವಂತಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾಯರ್ಸ್ ವೈಸ್ ಎಂಬ ಎನ್ಜಿಒ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಅದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಲ್ಲೆ, ಸದ್ಯ ನಡೆಯುತ್ತಿರುವ ಎಲ್ಲ ತನಿಖೆಗಳನ್ನೂ ನಿಲ್ಲಿಸುವಂತೆ ಆದೇಶ ನೀಡಿದೆ. ಈ ಮಧ್ಯೆ ಪ್ರಧಾನಿ ಮೋದಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್ ವಕೀಲರುಗಳಿಗೆ ಒಂದೇ ಸಮ ಬೆದರಿಕೆ ಕರೆಗಳು ಬರುತ್ತಿವೆ.
Published On - 8:53 am, Wed, 12 January 22