ಬಿಜೆಪಿ ಪ್ರಧಾನ ಕಚೇರಿಯಲ್ಲಿ 42 ಸಿಬ್ಬಂದಿಗೆ ಕೊರೊನಾ ಸೋಂಕು; ಮಹಾರಾಷ್ಟ್ರದಲ್ಲಿ 480 ರೆಸಿಡೆಂಟ್ ವೈದ್ಯರಲ್ಲೂ ಕೊವಿಡ್ 19 ದೃಢ
ಇನ್ನೊಂದೆಡೆ ಮಹಾರಾಷ್ಟ್ರ ಸರ್ಕಾರದಲ್ಲೂ ಹಲವು ಶಾಸಕರು, ಸಚಿವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮಹಾರಾಷ್ಟ್ರದ 15 ಸಚಿವರು ಮತ್ತು 70 ಶಾಸಕರಲ್ಲಿ ಕೊವಿಡ್ 19 ದೃಢಪಟ್ಟಿದೆ.
ಕೊರೊನಾ (CoronaVirus) ಈಗ ಅತ್ಯಂತ ವೇಗವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಸಾಲುಸಾಲಾಗಿ ವೈದ್ಯರಲ್ಲಿ ಕಾಣಿಸಿಕೊಳ್ಳುತ್ತಿದೆ. ಕಾಲೇಜು, ಶಿಕ್ಷಣಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರಿಗೆ ತಗುಲಿದೆ. ಅದೆಷ್ಟೋ ರಾಜಕಾರಣಿಗಳು ಕೊರೊನಾಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೇ, ನ್ಯಾಯಾಲಯಗಳಲ್ಲಿ ಜಡ್ಜ್ಗಳು, ವಕೀಲರಲ್ಲಿ ಕೂಡ ಕೊವಿಡ್ (Covid 19) ಕಾಣಿಸಿಕೊಂಡಿದೆ. ಎಲ್ಲ ಕಡೆಗಳಲ್ಲೂ 100-150ರ ಸಂಖ್ಯೆಯ ಲೆಕ್ಕದಲ್ಲೇ ಕಾಣಿಸಿಕೊಳ್ಳುತ್ತಿದೆ. ಹಾಗೇ, ಇದೀಗ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನಕಚೇರಿ 42 ಸಿಬ್ಬಂದಿಯಲ್ಲಿ ಕೊರೊನಾ ದೃಢಪಟ್ಟಿದೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಂಬಂಧ ಬಿಜೆಪಿ ಕಚೇರಿಯಲ್ಲಿ ಸಭೆ ನಡೆದಿತ್ತು. ಅದರ ಹಿನ್ನೆಲೆಯಲ್ಲಿ ಕೊವಿಡ್ 19 ತಪಾಸಣೆ ನಡೆಸಿದಾಗ ಅನೇಕರಲ್ಲಿ ಸೋಂಕು ದೃಢಪಟ್ಟಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಲ್ಲೂ ಕೊರೊನಾ ದೃಢಪಟ್ಟಿದ್ದು, ಸದ್ಯ ಮನೆಯಲ್ಲೇ ಐಸೋಲೇಟ್ ಆಗಿ, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಬಿಜೆಪಿ ಸಂಸದ ವರುಣ್ ಗಾಂಧಿ, ಖುಷ್ಬು ಸುಂದರ್, ಮನೋಜ್ ತಿವಾರಿ ಸೇರಿ ಹಲವರಿಗೆ ಸೋಂಕು ತಗುಲಿದೆ.
ಇನ್ನೊಂದೆಡೆ ಮಹಾರಾಷ್ಟ್ರ ಸರ್ಕಾರದಲ್ಲೂ ಹಲವು ಶಾಸಕರು, ಸಚಿವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮಹಾರಾಷ್ಟ್ರದ 15 ಸಚಿವರು ಮತ್ತು 70 ಶಾಸಕರಲ್ಲಿ ಕೊವಿಡ್ 19 ದೃಢಪಟ್ಟಿದೆ. ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೂ ಕೂಡ ಕೊರೊನಾ ಸೋಂಕು ತಗುಲಿತ್ತು. ಹೀಗೆ ಗುಂಪುಗುಂಪು ಜನರಿಗೆ ಕೊರೊನಾ ತಗುಲುತ್ತಿದ್ದು, ದೇಶದಲ್ಲೂ ದಿನೇದಿನೆ ಪತ್ತೆಯಾಗುತ್ತಿರುವ ಸೋಂಕಿನ ಕೇಸ್ಗಳಲ್ಲಿ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ 481 ರೆಸಿಡೆಂಟ್ ವೈದ್ಯರಲ್ಲಿ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಮಹಾರಾಷ್ಟ್ರ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಅವಿನಾಶ್ ದಹಿಫಾಲೆ ಮಾಹಿತಿ ನೀಡಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಮುಖಂಡರು ಕೊರೊನಾ ಸೋಂಕಿಗೆ ಒಳಗಾಗುತ್ತಿರುವುದು ಸವಾಲಾಗಿ ಪರಿಣಮಿಸುತ್ತಿದೆ. ಈ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಅಭಿಯಾನವನ್ನು ವೇಗಗೊಳಿಸಬೇಕು ಎಂದು ಈಗಾಗಲೇ ಚುನಾವಣಾ ಆಯೋಗ ಕೇಂದ್ರ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಜನವರಿ 15ರವರೆಗೆ ಐದೂ ರಾಜ್ಯಗಳಲ್ಲಿ ಸಾರ್ವಜನಿಕ ರ್ಯಾಲಿಗಳು, ರೋಡ್ ಶೋಗಳು, ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸಿದೆ. ಉತ್ತರಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಣಿಪುರದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಉಳಿದಂತೆ ಗೋವಾ, ಉತ್ತರಾಖಂಡ್, ಪಂಜಾಬ್ಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.