ರಾಮಸೇತುವನ್ನು ಪಾರಂಪರಿಕ ಸ್ಮಾರಕವಾಗಿ ಘೋಷಿಸಲು ಮನವಿ; ಸುಪ್ರೀಂನಲ್ಲಿ ಜುಲೈ 26ಕ್ಕೆ ವಿಚಾರಣೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 13, 2022 | 5:27 PM

ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರ ನ್ಯಾಯಪೀಠವು ಸುಬ್ರಮಣಿಯನ್ ಸ್ವಾಮಿಯವರ ಅರ್ಜಿ ಸ್ವೀಕರಿಸಿದ್ದು ವಿಚಾರಣೆಗೆ ಪರಿಗಣಿಸಿದೆ.

ರಾಮಸೇತುವನ್ನು ಪಾರಂಪರಿಕ ಸ್ಮಾರಕವಾಗಿ ಘೋಷಿಸಲು ಮನವಿ; ಸುಪ್ರೀಂನಲ್ಲಿ ಜುಲೈ 26ಕ್ಕೆ ವಿಚಾರಣೆ
Follow us on

ರಾಮಸೇತುವನ್ನು (Ram Setu) ರಾಷ್ಟ್ರೀಯ ಪಾರಂಪರಿಕ ಸ್ಮಾರಕ (National Heritage Monument) ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ಸಲ್ಲಿಸಿದ ಅರ್ಜಿ ವಿಚಾರಣೆ ಜುಲೈ 26ರಂದು ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ತಮಿಳುನಾಡಿನ ಆಗ್ನೇಯದಲ್ಲಿರುವ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯದಲ್ಲಿರುವ ಮುನ್ನಾರ್ ದ್ವೀಪದ ನಡುವೆ ಇರುವ ಸುಣ್ಣದಕಲ್ಲುಗಳ ರಚನೆಯಾದ ರಾಮಸೇತು ಆಡಮ್ಸ್ ಬ್ರಿಜ್ ಎಂದೂ ಕರೆಯಲ್ಪಡುತ್ತದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರ ನ್ಯಾಯಪೀಠವು ಸುಬ್ರಮಣಿಯನ್ ಸ್ವಾಮಿಯವರ ಅರ್ಜಿ ಸ್ವೀಕರಿಸಿದ್ದು ವಿಚಾರಣೆಗೆ ಪರಿಗಣಿಸಿದೆ. ಇದೊಂದು ಸಣ್ಣ ವಿಷಯವನ್ನು ತುರ್ತಾಗಿ ವಿಚಾರಣೆ ನಡೆಸಿ ಎಂದು ಸ್ವಾಮಿ ಕೋರಿದ್ದರು. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಸಿಜೆಐ, ನನ್ನ ನಿವೃತ್ತಿ ನಂತರ ಇದರ ವಿಚಾರಣೆ ಮಾಡಬೇಕು ಎಂದಿದ್ದಾರೆ.

ಜುಲೈ 26ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ಸಿಜೆಐ ಹೇಳಿದ್ದಾರೆ. ಈ ಹಿಂದೆ ರಾಮಸೇತು ಇದೆ ಎಂಬ ವಾದವನ್ನು ಕೇಂದ್ರ ಸರ್ಕಾರ ಒಪ್ಪಿತ್ತು ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ರಾಮಸೇತುವನ್ನು ಪಾರಂಪರಿಕ ಸ್ಮಾರಕವಾಗಿ ಘೋಷಿಸುವಂತೆ ತನ್ನ ಬೇಡಿಕೆಗೆ 2017ರಲ್ಲಿ ಕೇಂದ್ರ ಸಚಿವರು ಸಭೆ ಕರೆದಿದ್ದರೂ ಏನೂ ಆಗಲಿಲ್ಲ. ಯುಪಿಎ-1 ಸರ್ಕಾರದ ಅವಧಿಯಲ್ಲಿ ಸೇತುಸಮುದ್ರಂ ಹಡಗು ಕಾಲುವೆ ಯೋಜನೆ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ್ದಾರೆ.

Published On - 5:16 pm, Wed, 13 July 22