ಯುಎಪಿಎ ಪ್ರಕರಣ: ಜುಲೈ 24ರಂದು ಸುಪ್ರೀಂಕೋರ್ಟ್​​​ನಲ್ಲಿ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ

|

Updated on: Jul 12, 2023 | 6:51 PM

ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, 'ಜಾಮೀನು ವಿಚಾರದಲ್ಲಿ ಯಾವ ಕೌಂಟರ್‌ ಸಲ್ಲಿಸಬೇಕು? ಆ ವ್ಯಕ್ತಿ ಎರಡು ವರ್ಷ ಮತ್ತು 10 ತಿಂಗಳಿನಿಂದ ಜೈಲಿನಲ್ಲಿದ್ದಾನೆ ಹೇಳಿದ್ದಾರೆ. "ಅದು ಇಂದು ಸಿದ್ಧವಾಗಬೇಕಿತ್ತು" ಎಂದು ಗಮನಿಸಿದ ಪೀಠ ಜುಲೈ 24 ರಂದು ಹೆಚ್ಚಿನ ವಿಚಾರಣೆಗೆ ಮುಂದೂಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಯುಎಪಿಎ ಪ್ರಕರಣ: ಜುಲೈ 24ರಂದು ಸುಪ್ರೀಂಕೋರ್ಟ್​​​ನಲ್ಲಿ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ
ಉಮರ್ ಖಾಲಿದ್
Follow us on

ದೆಹಲಿ: 2020ರ ದೆಹಲಿ ಗಲಭೆಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಪ್ರಕರಣದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ (Umar Khalid) ಅವರ ಜಾಮೀನು ಅರ್ಜಿಯನ್ನು ಜುಲೈ 24 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ದೆಹಲಿ ಪೊಲೀಸರು ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿದ ನಂತರ ನ್ಯಾಯಮೂರ್ತಿ ಎಎಸ್ ಬೋಪಣ್ಣ ಮತ್ತು ನ್ಯಾಯಮೂರ್ತಿ ಎಂಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠವು ಜುಲೈ 24 ರಂದು ಖಾಲಿದ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲು ನಿರ್ಧರಿಸಿದೆ.

ತನಗೆ ಜಾಮೀನು ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಖಾಲಿದ್ ಸಲ್ಲಿಸಿರುವ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ಈ ಹಿಂದೆ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು. ದೆಹಲಿ ಪೊಲೀಸರನ್ನು ಪ್ರತಿನಿಧಿಸುತ್ತಿದ್ದ ವಕೀಲ ರಜತ್ ನಾಯರ್, ಪ್ರಕರಣದ ಚಾರ್ಜ್‌ಶೀಟ್ ಸಾವಿರಾರು ಪುಟಗಳಷ್ಟಿದೆ ಎಂದು ವಾದಿಸಿ, ಈ ವಿಷಯದಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಲು ಸ್ವಲ್ಪ ಸಮಯಾವಕಾಶವನ್ನು ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘ಜಾಮೀನು ವಿಚಾರದಲ್ಲಿ ಯಾವ ಕೌಂಟರ್‌ ಸಲ್ಲಿಸಬೇಕು? ಆ ವ್ಯಕ್ತಿ ಎರಡು ವರ್ಷ ಮತ್ತು 10 ತಿಂಗಳಿನಿಂದ ಜೈಲಿನಲ್ಲಿದ್ದಾನೆ ಹೇಳಿದ್ದಾರೆ. “ಅದು ಇಂದು ಸಿದ್ಧವಾಗಬೇಕಿತ್ತು” ಎಂದು ಗಮನಿಸಿದ ಪೀಠ ಜುಲೈ 24 ರಂದು ಹೆಚ್ಚಿನ ವಿಚಾರಣೆಗೆ ಮುಂದೂಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

2020 ರ ದೆಹಲಿ ಗಲಭೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆರೋಪಗಳ ಮೇಲೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಉಮರ್ ಖಾಲಿದ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಖಾಲಿದ್ ಮೇಲೆ ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಯುಎಪಿಎಯ ಹಲವಾರು ಸೆಕ್ಷನ್‌ಗಳ ಆರೋಪ ಹೊರಿಸಲಾಗಿದೆ.

ಖಾಲಿದ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್, ಅವರು ಪ್ರಕರಣದ ಇತರ ಸಹ-ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ವಿರುದ್ಧದ ಆರೋಪಗಳು ಪ್ರಾಥಮಿಕವಾಗಿ ನಿಜವೆಂದು ಹೇಳಿದೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಅವರ ಕ್ರಮಗಳು ಯುಎಪಿಎ ಅಡಿಯಲ್ಲಿ “ಭಯೋತ್ಪಾದಕ ಕೃತ್ಯ” ಎಂದು ಅರ್ಹತೆ ಪಡೆದಿವೆ ಎಂದು ಹೈಕೋರ್ಟ್ ಹೇಳಿದೆ.

ಈ ಹಿಂದೆ ವಿಚಾರಣಾ ನ್ಯಾಯಾಲಯವು ಖಾಲಿದ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆರೋಪಪಟ್ಟಿ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದ ನಂತರ ಅವರ ವಿರುದ್ಧದ ಆರೋಪಗಳು ಪ್ರಾಥಮಿಕವಾಗಿ ನಿಜವೆಂದು ನಂಬಲು ಸೂಕ್ತ ಕಾರಣಗಳಿವೆ ಎಂದು ಅದು ಹೇಳಿತ್ತು.

ಇದನ್ನೂ ಓದಿ: Rajasthan: ವೈದ್ಯರ ಎಡವಟ್ಟಿನಿಂದ 18 ಜನರ ದೃಷ್ಟಿಯೇ ಹೋಯ್ತು!

ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರರು ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳ ಅಡಿಯಲ್ಲಿ 2020ರ ದೆಹಲಿ ಗಲಭೆಯ “ಮಾಸ್ಟರ್‌ಮೈಂಡ್‌ಗಳು” ಎಂದು ಆರೋಪಿಸಲಾಗಿದೆ. ದೆಹಲಿ ಗಲಭೆಯಲ್ಲಿ 53 ಜನರು ಸಾವಿಗೀಡಾಗಿದ್ದು, 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ