Monkeypox Death: ಕೇರಳದಲ್ಲಿ ಮಂಕಿಪಾಕ್ಸ್ಗೆ ಮೊದಲ ಬಲಿ, ಆರೋಗ್ಯ ಸಚಿವರಿಂದ ಸ್ಪಷ್ಟನೆ
ದುಬೈನಿಂದ ಕೇರಳಕ್ಕೆ ವಾಪಸಾಗಿದ್ದ 22 ವರ್ಷದ ಯುವಕ ನಿನ್ನೆ ಮೃತಪಟ್ಟಿದ್ದರು. ಮೃತನ ಸ್ಯಾಂಪಲ್ಸ್ ಟೆಸ್ಟ್‌ನಲ್ಲಿ ಮಂಕಿಪಾಕ್ಸ್ ಸೋಂಕು ಇದ್ದದ್ದು ದೃಢವಾಗಿದೆ.
ದೆಹಲಿ: ಭಾರತದಲ್ಲಿ ಮಂಕಿಪಾಕ್ಸ್(Monkeypox) ಸೋಂಕಿಗೆ ಮೊದಲ ಬಲಿಯಾಗಿದೆ. ದುಬೈನಿಂದ ಕೇರಳಕ್ಕೆ ವಾಪಸಾಗಿದ್ದ 22 ವರ್ಷದ ಯುವಕ ನಿನ್ನೆ ಮೃತಪಟ್ಟಿದ್ದರು. ಮೃತನ ಸ್ಯಾಂಪಲ್ಸ್ ಟೆಸ್ಟ್‌ನಲ್ಲಿ ಮಂಕಿಪಾಕ್ಸ್ ಸೋಂಕು ಇದ್ದದ್ದು ದೃಢವಾಗಿದೆ. ಹೀಗಾಗಿ ಯುವಕ ಮಂಕಿಪಾಕ್ಸ್ ಸೋಂಕಿನಿಂದಲೇ ಮೃತಪಟ್ಟಿದ್ದಾನೆಂದು ಕೇರಳದ ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಶನಿವಾರ 22 ವರ್ಷದ ಯುವಕ ಮೃತಪಟ್ಟಿದ್ದು ಆತನಿಗೆ ಮಂಕಿಪಾಕ್ಸ್ ಸೋಂಕು ಇದದ್ದು ಪತ್ತೆಯಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಇದು ಕೇರಳದಲ್ಲಿ ವರದಿಯಾದ ಮೊದಲ ಮಂಕಿಪಾಕ್ಸ್ ಸಾವು. ಈ ಹಿಂದೆ ದೇಶದ ಮೊದಲ ಮೂರು ಮಂಕಿಪಾಕ್ಸ್ ಪ್ರಕರಣಗಳು ಕೇರಳದಲ್ಲಿ ವರದಿಯಾಗಿದ್ದವು. ಎಲ್ಲರೂ ಯುಎಇಯಿಂದ ಬಂದವರು. ನಂತರ ದೆಹಲಿಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿತ್ತು. ಮೃತ ಯುವಕ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಮೂಲದವರಾಗಿದ್ದು, ಜುಲೈ 21 ರಂದು ಯುಎಇಯಿಂದ ಹಿಂದಿರುಗಿದ್ದರು. ಜುಲೈ 27 ರಂದು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸೇರಿದ ಕೇವಲ 3 ದಿನಗಳ ನಂತರ ನಿಧನರಾಗಿದ್ದಾರೆ. ಅವರ ಮಾದರಿಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
ಭಾರತಕ್ಕೆ ಹೊರಡುವ ಒಂದು ದಿನದ ಮೊದಲು ಯುಎಇಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಯುವಕನಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ಶನಿವಾರವಷ್ಟೇ ಅವರ ಸಂಬಂಧಿಕರು ಆಸ್ಪತ್ರೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದರು. ಹಾಗೂ ಇದೇ ವೇಳೆ ಮೃತ ಯುವಕ ಇತರ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬ ಶಂಕೆ ಇದೆ. ಯುವಕನ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಮೃತ ಯುವಕನ ನಿಕಟ ಸಂಪರ್ಕದಲ್ಲಿದ್ದವರು ಹಾಗೂ ಯುವಕನ ಕುಟುಂಬ ಸದಸ್ಯರ ಮೇಲೆ ನಿಗಾ ಇಡಲಾಗಿದೆ.
Published On - 8:27 pm, Sun, 31 July 22