ವೆಂಕಯ್ಯನಾಯ್ಡು ಮೊಮ್ಮಗಳ ಮದುವೆ ರಿಸೆಪ್ಷನ್​​ನಲ್ಲಿ ಪಾಲ್ಗೊಂಡ ಅಮಾನತುಗೊಂಡ ರಾಜ್ಯಸಭಾ ಸದಸ್ಯರು; ಪ್ರಧಾನಿ, ರಾಷ್ಟ್ರಪತಿಯೂ ಭಾಗಿ

| Updated By: Lakshmi Hegde

Updated on: Dec 21, 2021 | 7:59 AM

ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಮದುವೆ ರಿಸೆಪ್ಷನ್​​ ದೆಹಲಿಯ ಅವರ ಮನೆಯಲ್ಲಿಯೇ ನಡೆದಿತ್ತು. ಈ ಸಮಾರಂಭಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಆಗಮಿಸಿದ್ದರು.

ವೆಂಕಯ್ಯನಾಯ್ಡು ಮೊಮ್ಮಗಳ ಮದುವೆ ರಿಸೆಪ್ಷನ್​​ನಲ್ಲಿ ಪಾಲ್ಗೊಂಡ ಅಮಾನತುಗೊಂಡ ರಾಜ್ಯಸಭಾ ಸದಸ್ಯರು; ಪ್ರಧಾನಿ, ರಾಷ್ಟ್ರಪತಿಯೂ ಭಾಗಿ
ಮದುವೆಯಲ್ಲಿ ಪಾಲ್ಗೊಂಡ ರಾಜ್ಯ ಸಭಾ ಸಂಸದರು
Follow us on

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲನೇ ದಿನ ಅಮಾನತುಗೊಂಡಿರುವ ರಾಜ್ಯಸಭೆಯ 12 ಸಂಸದರ ಬಗ್ಗೆ ಚರ್ಚಿಸಲು ಸೋಮವಾರ ಬೆಳಗ್ಗೆ ಕೇಂದ್ರ ಸರ್ಕಾರ ನಾಲ್ಕು ಪ್ರತಿಪಕ್ಷಗಳ ನಾಯಕರ ಸಭೆ ಕರೆದಿತ್ತು. ಅಮಾನತುಗೊಂಡಿರುವ ಸದಸ್ಯರು ಇರುವ ಕಾಂಗ್ರೆಸ್​, ಶಿವಸೇನೆ, ಸಿಪಿಐ ಮತ್ತು ಟಿಎಂಸಿ ಪಕ್ಷದ ನಾಯಕರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರ ಬರೆದು, ಸಭೆಗೆ ಆಹ್ವಾನಿಸಿದ್ದರು. ಆದರೆ ಈ ಸಭೆಗೆ ಯಾರೂ ಬಂದಿರಲಿಲ್ಲ. ನಾವು ಸಭೆಗೆ ಹೋಗುವುದಿಲ್ಲ ಎಂದು ಪ್ರತಿಪಕ್ಷಗಳು ಸ್ಪಷ್ಟಪಡಿಸಿದ್ದವು. ಈ ಮಧ್ಯೆ ಇನ್ನೊಂದು ಬೆಳವಣಿಗೆಯಾಗಿದೆ. ಸೋಮವಾರ ಸಭಾಪತಿ ವೆಂಕಯ್ಯನಾಯ್ಡು ಅವರ ಮೊಮ್ಮಗಳ ಮದುವೆ ರಿಸೆಪ್ಷನ್​ ಇತ್ತು. ಅದರಲ್ಲಿ ಈ ಅಮಾನತುಗೊಂಡ 12 ಸದಸ್ಯರೂ ಪಾಲ್ಗೊಂಡಿದ್ದಾರೆ. 

ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಮದುವೆ ರಿಸೆಪ್ಷನ್​​ ದೆಹಲಿಯ ಅವರ ಮನೆಯಲ್ಲಿಯೇ ನಡೆದಿತ್ತು. ಈ ಸಮಾರಂಭಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​, ಪ್ರಧಾನಮಂತ್ರಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಸಿಜೆಐ ಎನ್​.ವಿ.ರಮಣ ಸೇರಿ ಹಲವು ಗಣ್ಯರು ಆಗಮಿಸಿದ್ದರು.  ಬಿಜೆಪಿಯಷ್ಟೇ ಅಲ್ಲದೆ, ಬೇರೆ ಪಕ್ಷಗಳ ನಾಯಕರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ ಅದೆಲ್ಲದರ ಮಧ್ಯೆ ಅಚ್ಚರಿ ಮೂಡಿಸಿದ್ದು, ಅಮಾನತುಗೊಂಡಿದ್ದ ರಾಜ್ಯಸಭೆ ಸಂಸದರು. ಇವರೆಲ್ಲ ರಿಸೆಪ್ಷನ್​​ನಲ್ಲಿ ಪಾಲ್ಗೊಂಡು, ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಈ ಸಂಸದರು ತಾವು ಅಮಾನತುಗೊಂಡಾಗಿನಂದಲೂ ಕೂಡ ಪಾರ್ಲಿಮೆಂಟ್​ನ ಎದುರಿಗೆ ಇರುವ ಗಾಂಧಿ ಪ್ರತಿಮೆ ಎದುರು ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಮಾನತುಗೊಂಡ ರಾಜ್ಯಸಭೆ ಸದಸ್ಯರು ಇವರು..
1. ಎಲಮರಮ್ ಕರೀಂ (ಸಿಪಿಎಂ), 2. ಫುಲೋ ದೇವಿ ನೇತಾಮ್​ (ಕಾಂಗ್ರೆಸ್​), 3. ಛಾಯಾ ವರ್ಮಾ (ಕಾಂಗ್ರೆಸ್​), 4. ರಿಪುನ್​ ಬೋರಾ (ಕಾಂಗ್ರೆಸ್​), 5. ಬಿನೋಯ್​ ವಿಶ್ವಂ (ಸಿಪಿಐ) 6.ರಾಜಮಣಿ ಪಟೇಲ್​ (ಕಾಂಗ್ರೆಸ್​), 7. ಡೋಲಾ ಸೇನ್​ (ಟಿಎಂಸಿ), 8. ಶಾಂತಾ ಛೆಟ್ರಿ (ಟಿಎಂಸಿ), 9. ಸೈಯದ್ ನಾಸೀರ್​ ಹುಸೇನ್​ (ಕಾಂಗ್ರೆಸ್​), 10. ಪ್ರಿಯಾಂಕಾ ಚತುರ್ವೇದಿ (ಶಿವಸೇನೆ), 11. ಅನಿಲ್​ ದೇ​ಸಾಯಿ (ಶಿವಸೇನೆ​) 12. ಅಖಿಲೇಶ್ ಪ್ರಸಾದ್ ಸಿಂಗ್​ (ಕಾಂಗ್ರೆಸ್)

ಈ ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಪ್ರತಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ. ಇವರೆಲ್ಲ ಕಳೆದ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ದಾಂಧಲೆ ಎಬ್ಬಿಸಿದ್ದರು. ಪೀಠದ ನಿಯಮ ಉಲ್ಲಂಘನೆ ಮಾಡಿದ್ದರು. ಹೀಗಾಗಿ ಚಳಿಗಾಲದ ಅಧಿವೇಶನದ ಮೊದಲನೇ ದಿನ ಅವರನ್ನೆಲ್ಲ ಅಮಾನತು ಮಾಡಲಾಗಿತ್ತು. 12 ಸಂಸದರು ಕ್ಷಮೆ ಕೇಳಿದರೆ ಮಾತ್ರೆ ಅವರ ಅಮಾನತು ಹಿಂಪಡೆಯಲಾಗುತ್ತದೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಆದರೆ ಅವರ್ಯಾರೂ ಕ್ಷಮೆ ಕೇಳುವುದಿಲ್ಲ ಎಂದು ಕಾಂಗ್ರೆಸ್​ ಸೇರಿ, ಇತರ ಪಕ್ಷಗಳು ಪಟ್ಟು ಹಿಡಿದಿವೆ.

ಇದನ್ನೂ ಓದಿ: Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಆಭರಣ ಖರೀದಿದಾರರಿಗೆ ಇಲ್ಲಿದೆ ಪೂರ್ಣ ಮಾಹಿತಿ

Published On - 7:59 am, Tue, 21 December 21