ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಯಾಬಿನೇಟ್ಗೆ ಸಾರಿಗೆ ಸಚಿವ, ತೃಣಮೂಲ ಕಾಂಗ್ರೆಸ್ನ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ಇ ಮೇಲ್ ಮೂಲಕ ಕಳಿಸಿದ ರಾಜೀನಾಮೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ ಖಾರ್ ಅಂಗೀಕರಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.
ಚಳುವಳಿ ಹಿನ್ನೆಲೆಯ ಸುವೇಂದು ಅಧಿಕಾರಿ
ಪಶ್ಚಿಮ ಬಂಗಾಳ ಸರ್ಕಾರದಲ್ಲಿ ದೀದೀ ನಂತರ ಸುವೇಂದು ಅಧಿಕಾರಿಯವರ ಹೆಸರು ಕೇಳಿಬರುತ್ತಿತ್ತು. ನಂದಿಗ್ರಾಮ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿ, 2011ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ‘ಪಕ್ಷದ ಇತ್ತೀಚಿನ ತೀರ್ಮಾನಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ನಾನು ನೇರವಾಗಿ ಈ ಹಂತಕ್ಕೆ ತಲುಪಿಲ್ಲ. ಚಳುವಳಿ, ಹೋರಾಟಗಳು ನನ್ನನ್ನು ಬೆಳೆಸಿವೆ’ ಎಂದು ಅವರು ಹೇಳಿಕೆ ನೀಡಿದ್ದರು.
ಬಿಜೆಪಿಯಿಂದ ಆಹ್ವಾನ
ಸುವೇಂದು ಅಧಿಕಾರಿಯವರ ರಾಜೀನಾಮೆ ಬೆನ್ನಲ್ಲೇ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ ಯುಗ ಮುಗಿಯುತ್ತಿದೆ. ಟಿಎಂಸಿ ತೊರೆಯುವ ಎಲ್ಲ ನಾಯಕರಿಗೂ ಬಿಜೆಪಿಗೆ ಮುಕ್ತ ಸ್ವಾಗತವಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ, ಇನ್ನೋರ್ವ ಟಿಎಂಸಿ ಶಾಸಕ ಮಿಹಿರ್ ಗೋಸ್ವಾಮಿ ಸಹ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿಯವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಸುವೇಂದು ಎಲ್ಲಿಗೂ ಹೋಗಲ್ಲ ಎಂದ ಟಿಎಂಸಿ
ಈ ಎಲ್ಲ ರಾಜಕೀಯ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಟಿಎಂಸಿ, ‘ಸುವೇಂದು ಅಧಿಕಾರಿ ಎಂದಿಗೂ ಪಕ್ಷ ತೊರೆಯುವುದಿಲ್ಲ. ಅವರ ಬಿಜೆಪಿ ಸೇರ್ಪಡೆ ಸುದ್ದಿಗಳು ಕೇವಲ ಊಹಾಪೋಹಗಳಷ್ಟೇ. ಅವರ ಅಸಮಾಧಾನವನ್ನು ಸದ್ಯದಲ್ಲೇ ಪರಿಹರಿಸಲಾಗುವುದು’ ಎಂದು ತಿಳಿಸಿದೆ.
ಜೊತೆಗೆ, 2021ರ ಎಪ್ರಿಲ್-ಮೇಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಡಿಸೆಂಬರ್ 7ರಿಂದ ಮಮತಾ ಬ್ಯಾನರ್ಜಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲಿದ್ದಾರೆ ಎಂದು ಟಿಎಂಸಿ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ತಾಕತ್ತಿದ್ದರೆ ಅರೆಸ್ಟ್ ಮಾಡಿ, ಜೈಲಲ್ಲಿ ಇದ್ದುಕೊಂಡೇ ನನ್ನ ಪಕ್ಷವನ್ನು ಗೆಲ್ಲಿಸುತ್ತೇನೆ; ಬಿಜೆಪಿಗೆ ದೀದಿ ಓಪನ್ ಚಾಲೆಂಜ್