ದೆಹಲಿ ಮೇ 27: ಸ್ವಾತಿ ಮಲಿವಾಲ್ (Arvind Kejriwal) ಮೇಲೆ ಹಲ್ಲೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ (Bibhav Kumar)ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ತೀಸ್ ಹಜಾರಿ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಸ್ವಾತಿ ಮಲಿವಾಲ್ (Swati Maliwal) ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ದೆಹಲಿ ಪೊಲೀಸರು ಬಂಧಿಸಿದ ನಂತರ ಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೇ 13 ರಂದು ಕೇಜ್ರಿವಾಲ್ ಅವರ ನಿವಾಸದಲ್ಲಿ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪ ಬಿಭವ್ ಕುಮಾರ್ ಮೇಲಿದೆ.
ಜಾಮೀನು ವಿಚಾರಣೆ ವೇಳೆ ಬಿಭವ್ ಕುಮಾರ್ ಪರ ವಾದಿಸಿದ ವಕೀಲರು ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಈ ಆರೋಪಕ್ಕಾಗಿ ದೆಹಲಿ ಮುಖ್ಯಮಂತ್ರಿಯವರ ನಿವಾಸದಲ್ಲಿ ಸಿಸಿಟಿವಿ ಇಲ್ಲದ ಜಾಗವನ್ನೇ ಆಯ್ಕೆ ಮಾಡಿಕೊಂಡರು. ಅಲ್ಲಿ ಸಿಸಿಟಿವಿ ಇರುತ್ತಿದ್ದರೆ ಘಟನೆ ದಾಖಲಾಗುತ್ತಿತ್ತು ಎಂದಿದ್ದಾರೆ. ವಕೀಲರು ಹೀಗೆ ಹೇಳುತ್ತಿದ್ದಂತೆ ಸ್ವಾತಿ ನ್ಯಾಯಾಲಯದಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಮೇ 13ರಂದು ಕೇಜ್ರಿವಾಲ್ ನಿವಾಸದಲ್ಲಿ ಭಿಭವ್ ಕುಮಾರ್ ಹಲ್ಲೆ ನಡೆಸಿದ್ದರು. ಎಎಪಿಯ “ಟ್ರೋಲ್ ಆರ್ಮಿ”ಯನ್ನು ಟೀಕಿಸಿದ ಸ್ವಾತಿ ಮಲಿವಾಲ್ ತನ್ನ ಮೇಲೆ, ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಮರಣದ ಬೆದರಿಕೆಗಳಿಗೆ ಜನಪ್ರಿಯ ಯೂಟ್ಯೂಬರ್ ನ್ನೂ ದೂಷಿಸಿದ್ದಾರೆ. ಬಿಭವ್ ಕುಮಾರ್‌ಗೆ ಜಾಮೀನು ನೀಡಿದರೆ, “ನನ್ನ ಜೀವಕ್ಕೆ ಮತ್ತು ನನ್ನ ಕುಟುಂಬಕ್ಕೆ ಅಪಾಯವಿದೆ” ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.
ತಮ್ಮ ಕಕ್ಷಿದಾರರ ಪರವಾಗಿ ಮಾತನಾಡಿದ ಬಿಭವ್ ಕುಮಾರ್ ಅವರ ವಕೀಲರು, “ಇದೆಲ್ಲ ಪೂರ್ವಯೋಜಿತವಾಗಿತ್ತು. ಆಕೆ ಮುಖ್ಯಮಂತ್ರಿಯನ್ನು ಭೇಟಿಯಾಗದಿರುವುದಕ್ಕೆ ನಾನೇ ಹೊಣೆ ಎಂದು ಭಾವಿಸಿದ್ದಕ್ಕಾಗಿ ಆಕೆ ಯಾವುದೇ ಕಾರಣಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ” ಎಂದು ಹೇಳಿದರು.
“ಡ್ರಾಯಿಂಗ್ ರೂಮ್ (ಕೇಜ್ರಿವಾಲ್ ಅವರ ನಿವಾಸದಲ್ಲಿ) ಘಟನೆ ನಡೆದಿತ್ತು ಎಂದು ಹೇಳಿದ್ದಾರೆ, ಅಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಅದಕ್ಕಾಗಿಯೇ ಆಕೆ ಆ ಸ್ಥಳವನ್ನು ಆರಿಸಿಕೊಂಡಳು. ಸಿಸಿಟಿವಿ ಇಲ್ಲ ಎಂದು ಆಕೆಗೆ ಗೊತ್ತು. ಹಾಗಾಗಿ ಅಲ್ಲಿ ಘಟನೆ ನಡೆದಿದೆ ಎಂದು ಹೇಳುವುದು ಸುಲಭ ಮತ್ತು ಈ ರೀತಿ ಆರೋಪಗಳನ್ನು ಮಾಡಬಹುದು” ಎಂದು ವಕೀಲರು ಹೇಳಿದ್ದು, ಮೇ 13 ರಂದು ಸ್ವಾತಿ ಮಲಿವಾಲ್ ಮಾಡಿದ್ದು “ಅತಿಕ್ರಮಣ” ಎಂದಿದ್ದಾರೆ.
“ಯಾರಾದರೂ ಏಕಾಏಕಿ ಹೀಗೆ ಪ್ರವೇಶಿಸಬಹುದೇ? ಅದು ಮುಖ್ಯಮಂತ್ರಿಗಳ ನಿವಾಸ. ಸಂಸದರಾಗಿರುವುದರಿಂದ ನಿಮಗೆ ತೋಚಿದ್ದನ್ನು ಮಾಡಲು ಪರವಾನಗಿ ನೀಡುವುದಿಲ್ಲ. ಅವರ ಕಡೆಯಿಂದ ಪ್ರಚೋದನೆ ಇತ್ತು. ಆಕೆ ತೊಂದರೆ ಉಂಟುಮಾಡುವ ಪೂರ್ವಭಾವಿ ಉದ್ದೇಶದಿಂದ ಬಂದಿದ್ದರು. ಅವರು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಆದರೆ ಅದು ಆಕೆಗೆ ಅತಿಕ್ರಮಣ ಮಾಡುವ ಹಕ್ಕನ್ನು ನೀಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬಿಭವ್ ಕುಮಾರ್‌ಗೆ ಜಾಮೀನು ನೀಡಿದರೆ ಜೀವಕ್ಕೆ ಅಪಾಯವಿದೆ, ನ್ಯಾಯಾಲಯದಲ್ಲಿ ಕಣ್ಣೀರು ಹಾಕಿದ ಸ್ವಾತಿ ಮಲಿವಾಲ್
ನ್ಯಾಯಾಲಯವನ್ನುದ್ದೇಶಿಸಿ ಮಾತನಾಡಿದ ಸ್ವಾತಿ ಮಲಿವಾಲ್, ಹಲ್ಲೆಯ ಬಗ್ಗೆ ವರದಿ ಮಾಡಿದಾಗಿನಿಂದ ಆಕೆಯನ್ನು ಬಿಜೆಪಿ ಏಜೆಂಟ್ ಎಂದು ಪದೇ ಪದೇ ಕರೆಯಲಾಗುತ್ತಿದೆ ಎಂದು ಹೇಳಿದ್ದಾರೆ. “ಅವರು (ಎಎಪಿ) ಟ್ರೋಲ್ ಆರ್ಮಿ ಹೊಂದಿದ್ದಾರೆ. ಇಡೀ ಪಕ್ಷವನ್ನು ಇದಕ್ಕಾಗಿ ನಿಯೋಜಿಸಲಾಗಿದೆ. ನನ್ನ ವಿರುದ್ಧ ನಿರಂತರ ಪತ್ರಿಕಾಗೋಷ್ಠಿಗಳು ನಡೆದವು. ಈ ವ್ಯಕ್ತಿ (ಬಿಭವ್ ಕುಮಾರ್) ಸಾಮಾನ್ಯನಲ್ಲ” ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Mon, 27 May 24