ಉದಯಪುರದಲ್ಲಿ ಕೊಲೆಯಾದ ಟೈಲರ್ ಕನ್ಹಯ್ಯ ಲಾಲ್
ಜೈಪುರ: ಮುಸ್ಲಿಂ ಮೂಲಭೂತವಾದಿಗಳು ಅಂಗಡಿಯೊಂದಕ್ಕೆ ನುಗ್ಗಿ ಟೈಲರ್ ಒಬ್ಬರ ಶಿರಚ್ಛೇದ ಮಾಡಿ, ತಮ್ಮ ದುಷ್ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣದ ನಿರ್ವಹಣೆ ರಾಜಸ್ಥಾನ ಸರ್ಕಾರದ ಪಾಲಿಗೆ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಇಂಟರ್ನೆಟ್ ನಿರ್ಬಂಧಿಸಲಾಗಿದೆ. ಇಡೀ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಂಗಡಿ-ಮುಂಗಟ್ಟುಗಳು ಬಾಗಿಲು ಹಾಕಿದ್ದು, ಒಟ್ಟಾರೆ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಆಘಾತಕಾರಿ ಕೃತ್ಯ ಎಸಗಿದ ಗೋಸ್ ಮೊಹಮದ್ ಮತ್ತು ರಿಯಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗಿನ 10 ಮುಖ್ಯ ಬೆಳವಣಿಗೆಗಳಿವು…
- ವಿಡಿಯೊ ನೋಡಬೇಡಿ, ಶೇರ್ ಮಾಡಬೇಡಿ: ಶಿರಚ್ಛೇದದ ವಿಡಿಯೊ ಕಿಚ್ಚು ಹೊತ್ತಿಸುವಂತಿದೆ. ಅದನ್ನು ನೋಡಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮಾಧ್ಯಮಗಳಿಗೂ ಇಂಥ ವಿಡಿಯೊ ಪ್ರಸಾರ ಮಾಡಬೇಡಿ ಎಂದು ವಿನಂತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರು ರಾಜಸ್ಥಾನ ಪೊಲೀಸ್ ಇಲಾಖೆಯ ಎಡಿಜಿ (ಕಾನೂನು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ, ಇದು ಮನಸ್ಸು ಕದಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- ಉದಯಪುರದ ಜನನಿಬಿಡ ಪ್ರದೇಶದಲ್ಲಿ ಮೃತ ಕನ್ಹಯ್ಯಲಾಲ್ ಅವರ ಟೈಲರ್ ಅಂಗಡಿ ಇತ್ತು. ನಿನ್ನೆ ಮಧ್ಯಾಹ್ನ ಅವರ ಅಂಗಡಿಗೆ ನುಗ್ಗಿದ್ದ ಇಬ್ಬರು ದುಷ್ಕರ್ಮಿಗಳು ಕನ್ಹಯ್ಯಾ ಲಾಲ್ ಅವರನ್ನು ಕೊಲೆ ಮಾಡಿದ್ದರು. ತಮ್ಮ ಕೃತ್ಯವನ್ನು ವಿಡಿಯೊ ಮಾಡಿಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದರು.
- ಪ್ರವಾದಿ ಮೊಹಮದ್ ಪೈಗಂಬರ್ ಅವರ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಬೆಂಬಲಿಸುವ ಪೋಸ್ಟ್ ಒಂದನ್ನು ಕನ್ಹಯ್ಯಾ ಲಾಲ್ ಹೆಸರಿನಲ್ಲಿ ಅವರ 8 ವರ್ಷದ ಮಗ ಪೋಸ್ಟ್ ಮಾಡಿದ್ದ. ಇದಕ್ಕಾಗಿ ಕನ್ಹಯ್ಯಾ ಲಾಲ್ ವಿರುದ್ಧ ಪೊಲೀಸ್ ವಿಚಾರಣೆಯೂ ನಡೆಯುತ್ತಿತ್ತು.
- ಪ್ರಕರಣ ಬಹಿರಂಗಗೊಂಡ ನಂತರ ಉದಯಪುರದಲ್ಲಿ ವ್ಯಾಪಕ ಖಂಡನೆ, ಆಕ್ರೋಶ ವ್ಯಕ್ತವಾಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಇಂಟರ್ನೆಟ್ ಬಳಕೆ ನಿರ್ಬಂಧಿಸಲಾಗಿದೆ.
- ಕೊಲೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಶಿಸ್ತುಕ್ರಮ ಜರುಗಿಸುತ್ತೇನೆ. ದಯವಿಟ್ಟು ಶಾಂತಿ ಕಾಪಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿದ್ದಾರೆ.
- ಕೊಲೆಯನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದ್ದು, ರಾಷ್ಟ್ರೀಯ ತನಿಖಾ ದಳ (National Investigation Agency – NIA) ತಂಡವು ಈಗಾಗಲೇ ಉದಯಪುರಕ್ಕೆ ತೆರಳಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
- ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಹಾಕಿಕೊಂಡ ಪೋಸ್ಟ್ಗೆ ಸಂಬಂಧಿಸಿದಂತೆ ಕನ್ಹಯ್ಯಾ ಲಾಲ್ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರ ಜೊತೆಗೆ ಶಾಂತಿ ಮಾತುಕತೆ ನಡೆಸಿ, ವಿವಾದ ಪರಿಹರಿಸಲಾಗಿತ್ತು. ಇಷ್ಟೆಲ್ಲ ಆದ ನಂತರವೂ ಕೊಲೆ ನಡೆದಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಧಾರ್ಮಿಕ ಮುಖಂಡರ ಪಾತ್ರ ಏನಾದರೂ ಇದೆಯೇ ಎನ್ನುವ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.
- ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಶಾಂತಿ ಕಾಪಾಡಬೇಕು. ರಾಜಕೀಯ ಪಕ್ಷಗಳೂ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿದ್ದಾರೆ.
- ಜನರಲ್ಲಿ ಆಕ್ರೋಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ಷ್ಮವಾಗಿ ವರ್ತಿಸಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಬಿಜೆಪಿ ನಾಯಕ ಗುಲಾಬ್ ಚಂದ್ ಕಟಾರಿಯಾ ಹೇಳಿದ್ದಾರೆ.
- ಕೊಲೆ ಮಾಡಿರುವ ರೀತಿಯು ಐಸಿಸ್ ಉಗ್ರರ ಕಾರ್ಯವೈಖರಿಯನ್ನು ಹೋಲುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮೂಡಿದೆ.