ಸಂಸತ್ನಲ್ಲಿ ಪ್ರಶ್ನೆ ಕೇಳುವುದಕ್ಕೆ ಲಂಚ ಪ್ರಕರಣ: ಲೋಕಸಭೆಯ ನೈತಿಕ ಸಮಿತಿ ತನ್ನ ಕೆಲಸ ಮಾಡಲಿದೆ ಎಂದ ಧರ್ಮೇಂದ್ರ ಪ್ರಧಾನ್
Cash For Queries Case: ಸಂಸದೀಯ ಪ್ರಕ್ರಿಯೆಯಲ್ಲಿ ಲಂಚಕ್ಕೆ ಅವಕಾಶವಿಲ್ಲ. ಈ ವಿಷಯ ಲೋಕಸಭೆಯ ನೈತಿಕ ಸಮಿತಿಯ ಮುಂದಿದ್ದು, ಅದು ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನವದೆಹಲಿ, ಅಕ್ಟೋಬರ್ 20: ಸಂಸತ್ನಲ್ಲಿ ಪ್ರಶ್ನೆ ಕೇಳುವುದಕ್ಕಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಬಿಜೆಪಿ (BJP) ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದ ವಿಚಾರವಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ. ಸಂಸದೀಯ ಪ್ರಕ್ರಿಯೆಯಲ್ಲಿ ಲಂಚಕ್ಕೆ ಅವಕಾಶವಿಲ್ಲ. ಈ ವಿಷಯ ಲೋಕಸಭೆಯ ನೈತಿಕ ಸಮಿತಿಯ ಮುಂದಿದ್ದು, ಅದು ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮಹುವಾ ಮೊಯಿತ್ರಾ ವಿರುದ್ಧ ಆರೋಪ ಮಾಡಿದ್ದ ನಿಶಿಕಾಂತ್ ದುಬೆ ಈ ವಿಚಾರವಾಗಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಈ ವಿಚಾರ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
#WATCH | On ‘cash for queries’ allegations against TMC MP Mahua Moitra, Union minister Dharmendra Pradhan says, “There is no place for bribery in the parliamentary process. This matter is before the Lok Sabha Ethics Committee which is doing its work.” pic.twitter.com/qR8TWoJfn3
— ANI (@ANI) October 20, 2023
ಮಹುವಾ ಮೊಯಿತ್ರಾ ಜತೆ ಬಿಜೆಡಿ ಸಂಸದ ಪಿನಾಕಿ ಮಿಶ್ರಾಗೆ ಏನು ಸಂಬಂಧ: ಒಡಿಶಾ ಬಿಜೆಪಿ ಪ್ರಶ್ನೆ
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹಣ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಜತೆ ಬಿಜೆಡಿ ಪುರಿ ಸಂಸದ ಪಿನಾಕಿ ಮಿಶ್ರಾ ಅವರಿಗೆ ಏನು ಸಂಬಂಧ ಎಂದು ಬಿಜೆಪಿಯ ಒಡಿಶಾ ಘಟಕ ಪ್ರಶ್ನೆ ಮಾಡಿದೆ. ಮಹುವಾ ಮೊಯಿತ್ರಾ ಹಾಗೂ ಪಿನಾಕಿ ಮಿಶ್ರಾ ಜತೆಯಾಗಿ ಇರುವ ಭಾವಚಿತ್ರವನ್ನು ಪ್ರದರ್ಶಿಸಿದ ಬಿಜೆಪಿ ನಾಯಕ ಮನೋಜ್ ಮೊಹಪಾತ್ರ, ಪಿನಾಕಿ ಮಿಶ್ರಾ ಮತ್ತು ಮಹುವಾ ಮೊಯಿತ್ರಾ ನಡುವಿನ ಅನ್ಯೋನ್ಯತೆಯ ಹಿಂದಿನ ಕಾರಣವೇನು ಎಂದು ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುವಾ ಮೊಯಿತ್ರಾ ಅವರಿಗೆ ನಗದು ನೀಡಿದ ಆರೋಪ ಎದುರಿಸುತ್ತಿರುವ ದರ್ಶನ್ ಹಿರಾನಂದಾನಿ ಅವರು ತಮ್ಮ ಅಫಿಡವಿಟ್‌ನಲ್ಲಿ ಸಂಸದೆಗಾಗಿ ಪೀಠೋಪಕರಣಗಳು ಮತ್ತು ಇತರ ಐಷಾರಾಮಿ ವಸ್ತುಗಳನ್ನು ಖರೀದಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಮೊಹಾಪಾತ್ರ ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ನಲ್ಲಿ ಪ್ರಶ್ನೆ ಕೇಳುವುದಕ್ಕೆ ಮಹುವಾ ಮೊಯಿತ್ರಾ ಉದ್ಯಮಿಯಿಂದ ಲಂಚ ಪಡೆದಿದ್ದಾರೆ: ಬಿಜೆಪಿ ಆರೋಪ
ಪುರಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಮಹುವಾ ಮೊಯಿತ್ರಾ ಅವರ ಕರೆಂಟ್ ಅಕೌಂಟ್ ಎಂದು ವ್ಯಂಗ್ಯವಾಡಿರುವ ಮೊಹಾಪಾತ್ರ, ಅವರು ಮಾಡಿರುವುದು ಬಿಜೆಡಿ ದೃಷ್ಟಿಯಲ್ಲಿ ಜನ ವಿರೋಧಿಯೇ ಅಥವಾ ಅಲ್ಲವೇ ಎಂಬುದನ್ನು ಎಂಬುದನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ. ಇದು ಜನವಿರೋಧಿಯಾಗಿದ್ದರೆ, ಕೂಡಲೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದ್ದಾರೆ.
ಗೃಹ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿರುವ ಒಡಿಶಾ ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ವಿಭಾಗದ (ಇಒಡಬ್ಲ್ಯು) ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ