ಸಂಸತ್ನಲ್ಲಿ ಪ್ರಶ್ನೆ ಕೇಳುವುದಕ್ಕೆ ಮಹುವಾ ಮೊಯಿತ್ರಾ ಉದ್ಯಮಿಯಿಂದ ಲಂಚ ಪಡೆದಿದ್ದಾರೆ: ಬಿಜೆಪಿ ಆರೋಪ
Mahua Moitra: ನಗದು ಮತ್ತು ಉಡುಗೊರೆಗಳಿಗೆ ಬದಲಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪ ಮಾಡಿದ್ದಾರೆ. ಈ ಆರೋಪಗಳೆಲ್ಲವೂ ಆಡಳಿತ ಪಕ್ಷದ ಗಿಮಿಕ್ ಎಂದು ವಿಪಕ್ಷ ಪ್ರತಿಕ್ರಿಯಿಸಿದೆ.
ದೆಹಲಿ ಅಕ್ಟೋಬರ್ 16: ಸಂಸತ್ನಲ್ಲಿ ಪ್ರಶ್ನೆ ಕೇಳುವುದಕ್ಕಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ(Mahua Moitra) ಲಂಚ ಪಡೆದಿದ್ದಾರೆ ಎಂದು ಬಿಜೆಪಿ (BJP) ಸಂಸದ ನಿಶಿಕಾಂತ್ ದುಬೆ (Nishikant Dubey)ಅವರು ಆರೋಪಗಳನ್ನು ಮಾಡಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದ ಒಂದು ದಿನದ ನಂತರ ಈ ವಿಷಯ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ದುಬೆ ತಮ್ಮ ಪತ್ರದಲ್ಲಿ ಮೊಯಿತ್ರಾ ಅವರನ್ನು ಸದನದಿಂದ ತಕ್ಷಣವೇ ಅಮಾನತುಗೊಳಿಸುವಂತೆ ಕೋರಿದ್ದಾರೆ. “ನಗದು ಮತ್ತು ಉಡುಗೊರೆಗಳಿಗೆ ಬದಲಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಆಕೆಯ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವೆ ಲಂಚ ವಿನಿಮಯವಾಗಿದೆ” ಎಂದು ಆರೋಪಿಸಿದ್ದಾರೆ ದುಬೆ.
ದೂರಿನ ಕುರಿತು ಪ್ರತಿಕ್ರಿಯಿಸಿದ ಮೊಯಿತ್ರಾ, ಆಡಳಿತ ಪಕ್ಷದ ಸದಸ್ಯರ ವಿರುದ್ಧ ಬಾಕಿ ಉಳಿದಿರುವ ಹಕ್ಕು ಚ್ಯುತಿ ಬಗ್ಗೆ ವ್ಯವಹರಿಸಿದ ನಂತರ ನನ್ನ ವಿರುದ್ಧ ಯಾವುದೇ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ನಕಲಿ ಪದವೀಧರರರು ಮತ್ತು ಬಿಜೆಪಿ ಪಕ್ಷದ ಇತರ ಗಣ್ಯರ ವಿರುದ್ಧ ಬಾಕಿ ಉಳಿದಿರುವ ಹಕ್ಕು ಚ್ಯುತಿ ಬಗ್ಗೆ ಮಾತನಾಡಿ. ಆಮೇಲೆ ನನ್ನ ವಿರುದ್ಧ ಯಾವುದೇ ನಿರ್ಣಯಗಳನ್ನು ನಾನು ಸ್ವಾಗತಿಸುತ್ತೇನೆ ನನ್ನ ಮನೆ ಬಾಗಿಲಿಗೆ ಬರುವ ಮೊದಲು ಜಾರಿ ನಿರ್ದೇಶನಾಲಯ ಮತ್ತು ಇತರರು ಅದಾನಿ ಕಲ್ಲಿದ್ದಲು ಹಗರಣದಲ್ಲಿ ಎಫ್‌ಐಆರ್ ದಾಖಲಿಸಲು ಕಾಯುತ್ತಿದ್ದೇನೆ ಎಂದು ಮೊಯಿತ್ರಾ ತಮ್ಮ ‘X’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Multiple breach of privileges pending against fake degreewala & other @BJP4India luminaries. Welcome any motions against me right after Speaker finishes dealing with those. Also waiting for @dir_ed & others to file FIR in Adani coal scam before coming to my doorstep.
— Mahua Moitra (@MahuaMoitra) October 15, 2023
ವಿರೋಧ ಪಕ್ಷದ ನಾಯಕರು ಹೇಳಿದ್ದೇನು?
ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಈ ಆರೋಪಗಳು ಪ್ರತಿಪಕ್ಷಗಳ ಮಾನಹಾನಿ ಮಾಡುವ ಬಿಜೆಪಿಯ ಗಿಮಿಕ್ ಹೊರತು ಬೇರೇನೂ ಅಲ್ಲ ಎಂದು ಹೇಳಿದ್ದಾರೆ. ಆಡಳಿತ ಪಕ್ಷದವರು, ತಮ್ಮ ಬಹುಮತವನ್ನು ದುರ್ಬಳಕೆ ಮಾಡು ಭಯೋತ್ಪಾದನೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ರಾವತ್ ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಪ್ರಶ್ನೆಗಳನ್ನು ಕೇಳಲು ಸ್ವತಂತ್ರರಾಗಿರಬೇಕು ಎಂದು ಜೆಡಿಯು ನಾಯಕ ನೀರಜ್ ಕುಮಾರ್ ಸೋಮವಾರ ಹೇಳಿದ್ದಾರೆ. ಮಹುವಾ ಮೊಯಿತ್ರಾ ಕೇಳಿದ ಪ್ರಶ್ನೆ ಈ ದೇಶದಲ್ಲಿನ ಮೂಲಭೂತ ಪ್ರಶ್ನೆಯಾಗಿದ. ನರೇಂದ್ರ ಮೋದಿ ಆಡಳಿತದಲ್ಲಿ ಸಂಸತ್ ನಲ್ಲಿ ಯಾರು ಏನು ಕೇಳಬೇಕು ಎಂಬುದನ್ನು ಬಿಜೆಪಿ ಸಂಸದರು ನಿರ್ಧರಿಸುತ್ತಾರೆಯೇ? ಇದು ಪ್ರಜಾಪ್ರಭುತ್ವ ಮತ್ತು ಪ್ರತಿಯೊಬ್ಬರಿಗೂ ಪ್ರಶ್ನೆ ಕೇಳುವ ಹಕ್ಕಿದೆ ಎಂದು ನೀರಜ್ ಕುಮಾರ್ ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ಆಧಾರರಹಿತ ಹೇಳಿಕೆಗಳನ್ನು ನೀಡುವ ಮೊದಲು ತಮ್ಮ ಆರೋಪಗಳಿಗೆ ಪುರಾವೆಗಳನ್ನು ಒದಗಿಸಬೇಕು ಎಂದು ಕುಮಾರ್ ಹೇಳಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಪೂಜಾ ಥೀಮ್; ಮೋದಿಗೆ ದೇಶದ ಆಡಳಿತವನ್ನು ಹಸ್ತಾಂತರಿಸುವ ದುರ್ಗೆ
ಬಿಜೆಪಿ ನಾಯಕರು ಹೇಳುತ್ತಿರುವುದೇನು?
“ಅವರು (ಬಿಜೆಪಿ) ಸಾಕ್ಷ್ಯವನ್ನು ಒದಗಿಸಬೇಕು. ನೀವು ಯಾರ ವಿರುದ್ಧವೂ ಆಧಾರರಹಿತ ಆರೋಪಗಳನ್ನು ಹೇಗೆ ಮಾಡುತ್ತೀರಿ? ಅದು ಪ್ರಧಾನಿ ಮೋದಿಯವರ ಆಡಳಿತದಲ್ಲಿ ಯಾರಾದರೂ ಬಹಿರಂಗ ಭ್ರಷ್ಟಾಚಾರವನ್ನು ನೋಡಲು ಬಯಸುತ್ತಾರೆಯೇ ಎಂದು ಜೆಡಿಯು ಸಂಸದರು ಕೇಳಿದ್ದಾರೆ.
ಏತನ್ಮಧ್ಯೆ, ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಆರೋಪಗಳು ಗಂಭೀರವಾಗಿದೆವಿಶೇಷಾಧಿಕಾರ ಸಮಿತಿಯು ಈ ಬಗ್ಗೆ ತಕ್ಷಣ ತನಿಖೆ ನಡೆಸಬೇಕು ಏಕೆಂದರೆ ಸಂಸತ್ತಿನ ಅವಧಿ ಮುಂದಿನ ಕೆಲವು ತಿಂಗಳುಗಳಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ.
ಬಿಜೆಪಿಯ ನಿಶಿಕಾಂತ್ ದುಬೆಗೆ ಲೀಗಲ್ ನೋಟಿಸ್ ಕಳುಹಿಸಿದ ಮಹುವಾ ಮೊಯಿತ್ರಾ
ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸಂಸದ ಮಹುವಾ ಮೊಯಿತ್ರಾ ಅವರು ತಮ್ಮ ವಿರುದ್ಧ “ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು” ಮಾಡಿದ್ದಕ್ಕಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಸಂಸತ್ನಲ್ಲಿ ಅದಾನಿ ಗ್ರೂಪ್ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಅವರಿಗೆ “ನಗದು” ಮತ್ತು “ಉಡುಗೊರೆಗಳನ್ನು” ಲಂಚವಾಗಿ ನೀಡಲಾಗಿದೆ ಎಂದು ದುಬೆ ಭಾನುವಾರ ಲೋಕಸಭೆಯ ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ. ದೆಹದ್ರಾಯಿಯಿಂದ ಈ ಬಗ್ಗೆ ಮಾಹಿತಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.
ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಮೊಯಿತ್ರಾ ಮತ್ತು ಇತರ ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದಿ ವೈರ್ ಸೇರಿದಂತೆ ಸುದ್ದಿಯನ್ನು ವರದಿ ಮಾಡಿದ 18 ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಮೊಯಿತ್ರಾ ನೋಟಿಸ್ ನೀಡಿದ್ದಾರೆ.
ಮೊಯಿತ್ರಾ ಅವರು ಇತ್ತೀಚೆಗೆ ದುಬೆ ಅವರ ಶೈಕ್ಷಣಿಕ ಅರ್ಹತೆಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ದುಬೆ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ನೋಟಿಸ್ ತೋರಿಸುತ್ತದೆ. ಇದರಿಂದ ಇರಿಸು ಮುರಿಸುಗೊಂಡ ದುಬೆ ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನೋಟಿಸ್ ಹೇಳುತ್ತದೆ.
ಮೊಯಿತ್ರಾ ಮತ್ತು ವಕೀಲರು ನಿಕಟ ಸ್ನೇಹಿತರಾಗಿದ್ದರು, ಆದರೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ದೇಹದ್ರಾಯ್ ಬಗ್ಗೆ ನೋಟಿಸ್ ಹೇಳುತ್ತದೆ. ಅದರ ನಂತರ, ದೇಹದ್ರಾಯ್ “ನಮ್ಮ ಕಕ್ಷಿದಾರ [ಮೊಯಿತ್ರಾ] ಅವರಿಗೆ ಹಲವಾರು ಕೆಟ್ಟ, ದುರುದ್ದೇಶಪೂರಿತ ಮತ್ತು ಅಸಭ್ಯ ಸಂದೇಶಗಳೊಂದಿಗೆ ಪದೇ ಪದೇ ಬೆದರಿಕೆ ಹಾಕಿದರು. ಅವರ ಅಧಿಕೃತ ನಿವಾಸಕ್ಕೆ ಅತಿಕ್ರಮಣ ಮಾಡಿಮೊಯಿತ್ರಾ ಅವರ ನಾಯಿ ಸೇರಿದಂತೆ ವೈಯಕ್ತಿಕ ಆಸ್ತಿಯನ್ನು ಕದ್ದಿದ್ದಾರೆ. ನಂತರ ನಾಯಿಯನ್ನು ಹಿಂತಿರುಗಿಸಲಾಗಿದೆ ಎಂದು ಕಾನೂನು ನೋಟಿಸ್ ಹೇಳುತ್ತದೆ. ಪುನರಾವರ್ತಿತ ಕಿರುಕುಳ ನಂತರ, ಮೊಯಿತ್ರಾ ಅವರು ದೇಹದ್ರಾಯ್ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸಿದ್ದರು.
ಮೊಯಿತ್ರಾ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಲು ಪತ್ರಕರ್ತರನ್ನು ಒತ್ತಾಯಿಸಲು ದೇಹದ್ರಾಯ್ ಪ್ರಯತ್ನಿಸಿದರು, ಆದರೆ ಪುರಾವೆಗಳ ಕೊರತೆಯಿಂದಾಗಿ ಯಾರಿಗೂ ಮನವರಿಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ನೋಟಿಸ್ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Mon, 16 October 23